ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಸಾಮಾನ್ಯ ಸಭೆ: ಅನುದಾನ ಕಡಿತ: ಆರೋಪ ಅಮಿತ

ಬಜೆಟ್‌ ಹಣ ಮರುಹೊಂದಾಣಿಕೆಗೆ ಕಾಂಗ್ರೆಸ್‌–ಜೆಡಿಎಸ್ ವಿರೋಧ
Last Updated 31 ಆಗಸ್ಟ್ 2019, 20:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಮುನ್ನಡೆಸುವ ಪಕ್ಷಗಳು ಬದಲಾದಂತೆ, ಬಿಬಿಎಂಪಿಯಲ್ಲಿನ ಪ್ರತಿಪಕ್ಷಗಳ ಸದಸ್ಯರ ವಾರ್ಡ್‌ಗೆ ನೀಡಲಾಗಿದ್ದ ಅನುದಾನವು ಇದ್ದಕ್ಕಿದ್ದಂತೆ ಕಡಿತಗೊಳ್ಳುವ ‘ಬ್ರಹ್ಮರಹಸ್ಯ’ವು ಶನಿವಾರ ನಡೆದ ಬಿಬಿ ಎಂಪಿ ಸಾಮಾನ್ಯ ಸಭೆಯಲ್ಲಿ ಆರೋಪ–‍ಪ್ರತ್ಯಾರೋಪಕ್ಕೆ ಕಾರಣವಾಯಿತು.

ಈ ಕುರಿತು ಪ್ರಸ್ತಾಪಿಸಿದ ಉಪಮೇಯರ್‌ ಜೆಡಿಎಸ್‌ನ ಭದ್ರೇಗೌಡ, ‘ಕಳೆದ ಬಜೆಟ್‌ನಲ್ಲಿ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರಕ್ಕೆ ₹20 ಕೋಟಿ ಅನುದಾನ ನೀಡಲಾಗಿತ್ತು. ನನ್ನ ವಾರ್ಡ್‌ಗೆ ₹5 ಕೋಟಿ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ನನ್ನ ವಾರ್ಡ್‌ಗೆ ನೀಡಲಾಗಿದ್ದ ₹5 ಕೋಟಿ ಅನುದಾನದಲ್ಲಿ ₹3ಕೋಟಿ ಕಡಿತಗೊಳಿಸಲಾಗಿದೆ. ಆದರೆ, ನಮ್ಮ ವಿಧಾನಸಭಾ ಕ್ಷೇತ್ರದ ಉಳಿದ ಯಾವುದೇ ಸದಸ್ಯರ ವಾರ್ಡ್‌ಗೆ ನೀಡಲಾಗಿದ್ದ ಅನುದಾನ ಕಡಿತಗೊಳಿಸಿಲ್ಲ’ ಎಂದರು.

‘ಮಹಾಲಕ್ಷ್ಮಿ ಲೇಔಟ್‌ನ ಎಲ್ಲ ಏಳು ವಾರ್ಡ್‌ಗಳಿಗೆ ಅನುದಾನವನ್ನು ಸಮನಾಗಿ ಹಂಚಬೇಕು. ಆದರೆ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

ಈ ಆರೋಪದಿಂದ ಕೆರಳಿದ ವಿರೋಧಪಕ್ಷದ ನಾಯಕ ಬಿಜೆಪಿಯ ಪದ್ಮನಾಭ ರೆಡ್ಡಿ, ‘ನಾಲ್ಕು ವರ್ಷಗಳಿಂದ ದ್ವೇಷ ರಾಜಕಾರಣ ಮಾಡಿದ್ದು ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ. ಒಬ್ಬ ಪಕ್ಷೇತರ ಸದಸ್ಯರು ಸೇರಿ ಬಿಜೆಪಿಯ 102 ಸದಸ್ಯರಿರುವ ವಾರ್ಡ್‌ಗಳಿಗೆ ಈ ಅವಧಿಯಲ್ಲಿ₹654.98 ಕೋಟಿ ಅನುದಾನ ನೀಡಲಾಗಿದೆ. ಅಂದರೆ, ಒಬ್ಬ ಸದಸ್ಯರಿಗೆ ಸರಾಸರಿ ₹6 ಕೋಟಿ ನೀಡಲಾಗಿದೆ. ಕಾಂಗ್ರೆಸ್‌ನ 79 ಸದಸ್ಯರ ವಾರ್ಡ್‌ಗಳಿಗೆ ₹549.25 ಕೋಟಿ ನೀಡಲಾಗಿದೆ. ಅಂದರೆ, ಒಬ್ಬರಿಗೆ ಸರಾಸರಿ ₹7 ಕೋಟಿ ಕೊಡಲಾಗಿದೆ. ಜೆಡಿಎಸ್‌ ಸದಸ್ಯರಿರುವ 14 ವಾರ್ಡ್‌ಗಳಿಗೆ ₹308.50 ಕೋಟಿ ನೀಡಲಾಗಿದೆ. ಅಂದರೆ ಜೆಡಿಎಸ್‌ನ ಒಬ್ಬ ಸದಸ್ಯರಿಗೆ ಸರಾಸರಿ ₹22.35 ಕೋಟಿ ಬರುತ್ತದೆ. ದ್ವೇಷದ ರಾಜಕಾರಣ ಯಾರು ಮಾಡಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದರು.

‘ಪ್ರಸಕ್ತ ವರ್ಷ ₹11,645 ಕೋಟಿ ಬಜೆಟ್‌ನಲ್ಲಿ, ₹564 ಕೋಟಿಯಷ್ಟು ಮಾತ್ರ ಪುನರ್‌ಹಂಚಿಕೆ ಮಾಡಲಾಗಿದೆ. ಅಲ್ಲದೆ, ಮಹಾನಗರ ಪಾಲಿಕೆಯ ಬಜೆಟ್‌ನ ಹಣವನ್ನು ಈ ರೀತಿ ಪುನರ್‌ಹಂಚಿಕೆ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ’ ಎಂದೂ ಅವರು ಹೇಳಿದರು.

ಕಾಂಗ್ರೆಸ್‌ನ ಎಂ.ಶಿವರಾಜು, ‘ನಾವು ಮಂಡಿಸಿದ್ದ ಬಜೆಟ್‌ ಸರಿ ಇಲ್ಲದ ಕಾರಣ ತಡೆಹಿಡಿದಿರುವುದಾಗಿ ಹೇಳಿದ್ದರು. ಆದರೆ, ಈಗ ನಾವು ಮಂಡಿಸಿದ್ದ ಬಜೆಟ್‌ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ’ ಎಂದರು.

ವ್ಯವಸ್ಥೆ ಮುಂದುವರಿಕೆ:‘ಕಸವನ್ನು ವಿಂಗಡಿಸುವುದು ಮತ್ತು ಪ್ಲಾಸ್ಟಿಕ್‌ ನಿಷೇಧಿಸುವುದು ಸೆ.1ರಿಂದ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಕಡತ ಇನ್ನೂ ಆರೋಗ್ಯ ಸಮಿತಿ ಮುಂದಿದೆ. ಸಮಿತಿಯ ಅಧ್ಯಕ್ಷರು ಹಜ್‌ ಯಾತ್ರೆಗೆ ತೆರಳಿದ್ದಾರೆ. ಈ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ’ ಎಂದು ಆಯುಕ್ತರು ಹೇಳಿದರು.

ಅಂಬೇಡ್ಕರ್‌ ಡೇ ಕೇರ್‌ ಸೆಂಟರ್‌ ಪಾಲಿಕೆ ವಶಕ್ಕೆ: ದಯಾನಂದ ವಾರ್ಡ್‌ನಲ್ಲಿರುವ ಡಾ.ಅಂಬೇಡ್ಕರ್‌ ಡೇ ಕೇರ್‌ ಕೇಂದ್ರವನ್ನುಲೋಕಾಯುಕ್ತರ ಆದೇಶದ ಮೇರೆಗೆ ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಶ್ರೀರಾಮಪುರದಲ್ಲಿ ಬಿಬಿಎಂಪಿಯು ₹3 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಿದೆ. ಆದರೆ, ಈ ಕೇಂದ್ರವನ್ನು ಕೇವಲ ₹7 ಸಾವಿರ ಮಾಸಿಕ ಬಾಡಿಗೆಗೆ ಖಾಸಗಿಯವರಿಗೆ ನೀಡಲಾಗಿದೆ. ಖಾಸಗಿ ಸಂಸ್ಥೆಯು ಒಪ್ಪಂದದ ಪ್ರಕಾರ ಸೇವೆ ನೀಡುತ್ತಿಲ್ಲ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಕುಮಾರಿ ಪಳನಿಕಾಂತ್‌ ಆಕ್ಷೇಪ ವ್ಯಕ್ತಪಡಿಸಿದರು.

ಲೋಕಾಯುಕ್ತದಲ್ಲಿ ಈ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ, ಈ ಒಪ್ಪಂದವನ್ನು ರದ್ದು ಪಡಿಸಬೇಕು ಎಂದು ಆದೇಶಿಸಿದ್ದರು. ಒಪ್ಪಂದವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಯಿತು.

ಇಂದಿರಾ ಕ್ಯಾಂಟೀನ್‌ಗೆ ಪಾಲಿಕೆ ಹಣ

ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಅನುದಾನ ನೀಡುವವರೆಗೆ ಪಾಲಿಕೆಯ ಹಣದಲ್ಲಿಯೇ ನಿರ್ವಹಣೆ ಮಾಡಲು ಸಭೆ ತೀರ್ಮಾನಿಸಿತು.

ಈ ತೀರ್ಮಾನವನ್ನು ಆಕ್ಷೇಪಿಸಿದ ಪದ್ಮನಾಭ ರೆಡ್ಡಿ, ‘ಇಂದಿರಾ ಕ್ಯಾಂಟೀನ್‌ಗೆ ನಮ್ಮ ವಿರೋಧವಿಲ್ಲ. ಆದರೆ ಈ ಯೋಜನೆ ಆರಂಭಿಸಿದ್ದು ರಾಜ್ಯ ಸರ್ಕಾರ. ಈವರೆಗೆ ಸರ್ಕಾರದಿಂದ ಬರಬೇಕಾದ ₹94.28 ಕೋಟಿ ಅನುದಾನ ಬಾಕಿ ಇದೆ. ಈ ಹಣವನ್ನಾದರೂ ನೀಡುವಂತೆ ಸರ್ಕಾರವನ್ನು ಕೋರಬೇಕು’ ಎಂದರು.

‘ಆದಾಯಕ್ಕಾಗಿ ಜಾಹೀರಾತು’

‘ಬಿಬಿಎಂಪಿಯ ಆದಾಯ ಹೆಚ್ಚಬೇಕೆಂದರೆ ಜಾಹೀರಾತು ಹೋರ್ಡಿಂಗ್ ಹಾಕಲು ಅವಕಾಶ ನೀಡಬೇಕಾಗುತ್ತದೆ’ ಎಂದು ಆಯುಕ್ತ ಅನಿಲ್‌ಕುಮಾರ್‌ ಅಭಿಪ್ರಾಯಪಟ್ಟರು.

ಸಭೆಯ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ನೂತನ ಹೊರಾಂಗಣ ಜಾಹೀರಾತು ಬೈಲಾ ಕುರಿತು ಕರಡು ನಿಯಮ ರಚನೆ ಮಾಡ ಲಾಗಿದೆ. ಈ ಕುರಿತು ಸಮಿತಿ ಮಾಡಲಾಗಿದೆ. ಈ ಕರಡು ನಿಯಮಕ್ಕೆ 500ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿವೆ. 2006ರ ಹಳೆಯ ಜಾಹೀರಾತು ಬೈಲಾಗಳು ಹಾಗೂ ಡೀಮ್ಡ್‌ ಮಂಜೂರಾತಿ ಬೈಲಾಗಳನ್ನು ಪರಿಶೀಲಿಸಿ, ನೂತನ ಜಾಹೀರಾತು ನೀತಿ ರೂಪಿಸಲು ಚಿಂತಿಸಲಾಗುತ್ತಿದೆ’ ಎಂದರು.

‘15 ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ಅಂಬೇಡ್ಕರ್‌ ಡೇ ಕೇರ್‌ ಸೆಂಟರ್‌ ಪಾಲಿಕೆ ವಶಕ್ಕೆ

ದಯಾನಂದ ವಾರ್ಡ್‌ನಲ್ಲಿರುವ ಡಾ. ಅಂಬೇಡ್ಕರ್‌ ಡೇ ಕೇರ್‌ ಕೇಂದ್ರವನ್ನು ಲೋಕಾಯುಕ್ತರ ಆದೇಶದ ಮೇರೆಗೆ ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಶ್ರೀರಾಮಪುರದಲ್ಲಿ ಬಿಬಿಎಂಪಿಯು ₹3 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಿದೆ. ಆದರೆ, ಈ ಕೇಂದ್ರವನ್ನು ಕೇವಲ ₹7 ಸಾವಿರ ಮಾಸಿಕ ಬಾಡಿಗೆಗೆ ಖಾಸಗಿಯವರಿಗೆ ನೀಡಲಾಗಿದೆ. ಖಾಸಗಿ ಸಂಸ್ಥೆಯು ಒಪ್ಪಂದದ ಪ್ರಕಾರ ಸೇವೆ ನೀಡುತ್ತಿಲ್ಲ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಕುಮಾರಿ ಪಳನಿಕಾಂತ್‌ ಆಕ್ಷೇಪ ವ್ಯಕ್ತಪಡಿಸಿದರು.

ಲೋಕಾಯುಕ್ತದಲ್ಲಿ ಈ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ, ಈ ಒಪ್ಪಂದವನ್ನು ರದ್ದು ಪಡಿಸಬೇಕು ಎಂದು ಆದೇಶಿಸಿದ್ದರು. ಒಪ್ಪಂದವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಯಿತು.

‘ರಾಮಮಾರ್ಗವಲ್ಲ ಮುಂಬೈ ಮಾರ್ಗ !’

‘ವಾಮಮಾರ್ಗದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಕಾಂಗ್ರೆಸ್‌ನ ಎಂ. ಶಿವರಾಜು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಡಾ. ರಾಜು, ‘ನಮ್ಮದು ವಾಮಮಾರ್ಗವಲ್ಲ, ರಾಮಮಾರ್ಗ’ ಎಂದು ಉತ್ತರಿಸಿದರು.

‘ರಾಮಮಾರ್ಗವಲ್ಲ, ನಿಮ್ಮದು ಮುಂಬೈ ಮಾರ್ಗ’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT