ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿದ ಕಾವೇರಿಪುರ– ಸಗಾಯಪುರ ಶಾಂತ ಮತದಾನ

ಪಾಲಿಕೆ ಎರಡು ವಾರ್ಡ್‌ಗಳ ಉಪಚುನಾವಣೆ * ನಾಳೆ ಮತ ಎಣಿಕೆ
Last Updated 29 ಮೇ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆ ನಡೆದ ಪಾಲಿಕೆಯ ಎರಡು ವಾರ್ಡ್‌ಗಳ ಪೈಕಿ ಸಗಾಯಪುರದಲ್ಲಿ ಶಾಂತಿಯುತ ಮತದಾನ ನಡೆದರೆ, ಕಾವೇರಿಪುರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಡಿದಾಟ ನಡೆದಿದೆ.

ಮುನೇಶ್ವರನಗರ ಸೇಂಟ್‌ ಪಾಲ್‌ ಶಾಲೆಯ ಮತಗಟ್ಟೆಯ ಬಳಿ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಮತದಾರರಿಗೆ ಚೀಟಿ ಬರೆದುಕೊಡಲು ಹಾಕಿಕೊಂಡಿದ್ದ ಟೇಬಲ್‌ಗಳನ್ನು ಕೆಲವರು ತಳ್ಳಿದರು. ಇನ್ನೂ ಕೆಲವರು ದೊಣ್ಣೆಗಳನ್ನು ಹಿಡಿದು ಬಂದರು. ಪೊಲೀಸರು ಎರಡೂ ಕಡೆಯವರ ಮೇಲೆ ಲಾಠಿ ಬೀಸಿ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಬ್ಬಿಣದ ಪಟ್ಟಿಯೊಂದನ್ನು ಪ್ರದರ್ಶಿಸಿದ ಪ್ರಕಾಶ್, ‘ಇದರಿಂದಲೇ ಬಿಜೆಪಿಯುವರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಕಬ್ಬಿಣದ ಪಟ್ಟಿ ಹಿಡಿದುಕೊಂಡು ಪ್ರಕಾಶ್ ಅವರೇ ಗೂಂಡಾಗಿರಿ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿಯವರೇ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಇದಾದ ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಗೋವಿಂದರಾಜನಗರ ವಾರ್ಡ್‌ನ ಸದಸ್ಯ ಉಮೇಶ್‌ಶೆಟ್ಟಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು. ‘ಪ್ರಕಾಶ್ ಅವರು ಬಿಜೆಪಿಯ ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದರು. ಇದನ್ನು ಕೇಳಲು ಹೋದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರಾದ ರಾಜಣ್ಣ ಮತ್ತು ಗಂಗಣ್ಣ ಅವರಿಗೆ ಗಾಯಗಳಾಗಿದ್ದು, ಇಬ್ಬರೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪಿ. ಪ್ರಕಾಶ್‌ ಹೇಳಿದರು.

ಎರಡೂ ಪಕ್ಷದವರು ಕಾಮಾಕ್ಷಿಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟು 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸಗಾಯಪುರದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಅಲ್ಫಾನ್ಸೊ ಶಾಲೆಯ ಮತಗಟ್ಟೆ ಬಳಿ ಸಂಜೆ ವೇಳೆ ಗುಂಪುಗೂಡಿದ್ದ ಕೆಲವರನ್ನು ಪೊಲೀಸರು ಚದುರಿಸಿದರು.

ಕಾವೇರಿಪುರ ಶೇ 39, ಸಗಾಯಪುರ ಶೇ 44ರಷ್ಟು ಮತದಾನ

ಕಾವೇರಿಪುರ ವಾರ್ಡ್‌ನಲ್ಲಿ ಶೇ 39.54 ಮತ್ತು ಸಗಾಯಪುರ ವಾರ್ಡ್‌ನಲ್ಲಿ ಶೇ 44.82ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಬೆಳಿಗ್ಗೆ ಚುರುಕಿನಿಂದ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ನೀರಸವಾಯಿತು. ಬಿಸಿಲು ಕಡಿಮೆಯಾದ ಬಳಿಕ ಕೊಂಚ ಏರಿಕೆ ಆಯಿತು.ಆದರೂ, ಒಟ್ಟಾರೆ ಮತದಾನ ಪ್ರಮಾಣದಲ್ಲಿ ಅಷ್ಟೇನು ಹೆಚ್ಚಿಗೆ ಆಗಿಲ್ಲ.

ಕಾವೇರಿಪುರ ವಾರ್ಡ್‌ನಲ್ಲಿ ಮತಗಟ್ಟೆ ಸಂಖ್ಯೆ 7ರಲ್ಲಿ ಅತೀ ಹೆಚ್ಚು ಶೇ 50.62ರಷ್ಟು ಮತದಾನವಾಗಿದ್ದರೆ, 20ನೇ ಮತಗಟ್ಟೆಯಲ್ಲಿ ಅತೀ ಕಡಿಮೆ ಶೇ 28.73ರಷ್ಟು ಮತದಾನವಾಗಿದೆ.

ಸಗಾಯಪುರ ವಾರ್ಡ್‌ನಲ್ಲಿ ಮತಗಟ್ಟೆ ಸಂಖ್ಯೆ 15ರಲ್ಲಿ ಅತೀ ಹೆಚ್ಚು ಶೇ 65.69ರಷ್ಟು ಮತದಾನವಾಗಿದ್ದು, 28ನೇ ವಾರ್ಡ್‌ನಲ್ಲಿ ಅತೀ ಕಡಿಮೆ ಶೇ 18.74ರಷ್ಟು ಮತದಾನವಾಗಿದೆ.

ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಕಾವೇರಿಪುರ ವಾರ್ಡ್‌ನಲ್ಲಿ ಒಟ್ಟು ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಜೆಡಿಎಸ್‌ನ ಎನ್‌.ಸುಶೀಲ ಅವರು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ. ಬಿಜೆಪಿಯಿಂದ ಸಿ.ಪಲ್ಲವಿ, ಪಕ್ಷೇತರರಾಗಿ ಕಮಲಮ್ಮ ಹಾಗೂ ತೇಜಸ್ವಿನಿ ಸ್ಪರ್ಧೆಯಲ್ಲಿದ್ದರು.

ವಿ. ಏಳುಮಲೈ ನಿಧನದಿಂದ ತೆರವಾಗಿರುವ ಸಗಾಯಪುರ ವಾರ್ಡ್‌ನಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಿಂದೆ ಒಂದು ಅವಧಿಗೆ ಪಾಲಿಕೆ ಸದಸ್ಯೆಯಾಗಿದ್ದ ವಿ.ಪಳನಿ ಅಮ್ಮಾಳ್‌ ಇಲ್ಲಿ ಮೈತ್ರಿಕೂಟದ ಅಭ್ಯರ್ಥಿ. ಬಿಜೆಪಿಯಿಂದ ಎ.ಜೆಯೇರಿಮ್‌, ಮೈತ್ರಿಕೂಟದಿಂದ ಟಿಕೆಟ್‌ ಬಯಸಿದ್ದ ಮಾರಿಮುತ್ತು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಮೇ 31ರಂದುಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT