ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದಯನಗರ: ಕಳವಳ ಸೃಷ್ಟಿಸಿದ ಕೊಳೆ ನೀರು

ಚರಂಡಿಯಲ್ಲಿ ದುರ್ವಾಸನೆಯುಕ್ತ ಕೊಳಚೆ * ಹಲವು ವರ್ಷ ಕಳೆದರೂ ಬಗೆಹರಿಯದ ಸಮಸ್ಯೆ
Last Updated 12 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಮಳೆ ನೀರು ಹರಿಯುವ ಚರಂಡಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳ ಎದೆಬಡಿತವೂ ಹೆಚ್ಚುತ್ತದೆ. ಏಕೆಂದರೆ ಅದರಲ್ಲಿ ಹರಿದು ಬರುವುದು ಮಳೆ ನೀರಲ್ಲ.ಒಳಚರಂಡಿಯಲ್ಲಿ ಹರಿಯ ಬೇಕಾದ ಕೊಳಚೆ ನೀರು!

ಜೆ.ಪಿ.ನಗರ ಏಳನೇ ಹಂತದ ನವೋದಯ ನಗರದ 5ನೇ ಮುಖ್ಯರಸ್ತೆ ಬಳಿಯ ನಿವಾಸಿಗಳ ಗೋಳಿನ ಕತೆ ಇದು. ಗಬ್ಬುನಾತ ಬೀರುವ ಈ ಕೊಳಚೆ ನೀರಿನ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಲುವಾಗಿ ಬಿಬಿಎಂಪಿ, ಜಲಮಂಡಳಿ ಕಚೇರಿಗಳನ್ನು ಸುತ್ತಿ ಹೈರಾಣಾಗಿರುವ ಇಲ್ಲಿನ ನಿವಾಸಿಗಳು ಬೇರೆ ದಾರಿಕಾಣದೆ ಕೈಚೆಲ್ಲಿ ಕುಳಿತಿದ್ದಾರೆ.

‘ಚರಂಡಿಯಲ್ಲಿ ಆಗಾಗ ನೀರಿನ ಮಟ್ಟ ದಿಢೀರ್‌ ಏರಿಕೆ ಆಗುತ್ತದೆ. ನೀರಿನ ಮಟ್ಟ ಹೆಚ್ಚಿದಂತೆಯೇ ನನಗೆ ಆತಂಕ ಶುರುವಾಗುತ್ತದೆ. ಕೆಲವೊಮ್ಮೆ ನಮ್ಮ ಮನೆಯ ಅಂಗಳದವರೆಗೂ ಕೊಳಚೆ ನೀರು ಹರಿದುಬಂದಿದ್ದುಂಟು. ಮನೆ ಇಂತಹ ದುರ್ವಾಸನೆಯುಕ್ತ ನೀರಿನಿಂದ ಆವೃತವಾಗಿರುವಾಗ ನಾವು ನೆಮ್ಮದಿಯಿಂದ ಇರುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ನಿವಾಸಿ ಕುಸುಮಾ.

‘ಈ ಸಮಸ್ಯೆ ಅನೇಕ ವರ್ಷಗಳಿಂದ ಇದೆ. ಕೊಳಚೆ ನೀರು ಎಲ್ಲಿಂದ ಬರುತ್ತದೆ ಎಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿಯವರಿಗೆ ಹಾಗೂ ಜಲಮಂಡಳಿಯವರಿಗೆ ಅನೇಕ ಬಾರಿ ದೂರು ನೀಡಿದ್ದೆವು. ಆದರೂ ಸಮಸ್ಯೆ ಬಗೆಹರಿದಿಲ್ಲ. ಸ್ಥಳೀಯ ಪಾಲಿಕೆ ಸದಸ್ಯ ಜಯರಾಂ ಹಾಗೂ ಶಾಸಕ ಎಂ.ಕೃಷ್ಣಪ್ಪ ಅವರಿಗೂ ಈ ಪರಿಸರದ ನಿವಾಸಿಗಳ ಸಮಸ್ಯೆಯ ಅರಿವು ಇದೆ. ಅವರು ಸ್ಥಳಕ್ಕೆ ಬಂದು ನೋಡಿದ್ದಾರೆ. ಆದರೆ ಇದನ್ನು ಬಗೆಹರಿಸುವ ಪ್ರಯತ್ನ ಇನ್ನೂ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ಅನಂತರಾಮ್.

‘ನಾಲ್ಕೈದು ತಿಂಗಳ ಹಿಂದೊಮ್ಮೆ ಕೆಲವು ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಕೊಳಚೆ ನೀರು ಹರಿಯುವುದು ಕಡಿಮೆ ಆಗಿತ್ತು. ಒಂದು ವಾರದಿಂದ ಸಮಸ್ಯೆ ಮತ್ತೆ ಉಲ್ಬಣವಾಗಿದೆ’ ಎಂದು ವಿವರಿಸಿದರು.

ಹೆಚ್ಚುತ್ತಿದೆ ಸೊಳ್ಳೆ ಕಾಟ: ‘ಇಲ್ಲಿ ಚರಂಡಿಯಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಕಾಟವೂ ಹೆಚ್ಚುತ್ತಿದೆ. ನನಗೆ ಹಾಗೂ ಮಗನಿಗೆ ಡೆಂಗಿ ಜ್ವರ ಬಂದಿತ್ತು. ಬಿಬಿಎಂಪಿ ಹಾಗೂ ಜಲಮಂಡಳಿಯವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಈ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಮತ್ತಷ್ಟು ಹೆಚ್ಚಲಿವೆ’ ಎಂದು ಕುಸುಮಾ ಆತಂಕವ್ಯಕ್ತಪಡಿಸಿದರು.

ಅಪಾರ್ಟ್‌ಮೆಂಟ್‌ನ ಕೊಳಚೆ ನೀರು?

‘ಈ ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹೆಚ್ಚುತ್ತಿವೆ. ಯಾರೋ ಕೊಳಚೆ ನೀರನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸದೆ ನೇರವಾಗಿ ಮಳೆ ನೀರು ಚರಂಡಿಗೆ ಬಿಡುತ್ತಿದ್ದಾರೆ. ಇಂತಹ ಕೃತ್ಯ ನಡೆಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ರಮಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಪಾದಚಾರಿಗಳಿಗೆ ಕೊಳೆನೀರಿನ ಸಿಂಚನ

ಇಲ್ಲಿ 5ನೇ ಮುಖ್ಯ ರಸ್ತೆ ಬಳಿ ಚರಂಡಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತದೆ. ಅಲ್ಲಿಂದ ನೀರು ರಸ್ತೆಯಲ್ಲೇ ಹರಿದು ಇನ್ನೊಂದು ಪಾರ್ಶ್ವದ ಚರಂಡಿಯನ್ನು ಸೇರುತ್ತದೆ.

‘ಈ ರಸ್ತೆಯಲ್ಲಿ ವಾಹನ ಹಾದುಹೋಗುವಾಗ ಪಾದಚಾರಿಗಳ ಮೇಲೆಲ್ಲ ದುರ್ಗಂಧಯುಕ್ತ ಕೊಳಚೆ ನೀರಿನ ಸಿಂಚನವಾಗುತ್ತದೆ. ಮೂಗು ಮುಚ್ಚಿಕೊಂಡೇ ನಡೆದು ಹೋಗುವುದರ ಜೊತೆಗೆ, ಕಶ್ಮಲಯುಕ್ತ ನೀರು ಎಲ್ಲಿ, ಮೈಮೇಲೆ ಬೀಳುತ್ತದೋ ಎಂಬ ಆತಂಕದಲ್ಲೇ ಹೆಜ್ಜೆಹಾಕಬೇಕಾದ ಪರಿಸ್ಥಿತಿ ನಮ್ಮದು. ಅದರಲ್ಲೂ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು’ ಎಂದು ಅನಂತರಾಮ್‌ ಬೇಸರ ವ್ಯಕ್ತಪಡಿಸಿದರು.

‘ಅರ್ಧದಲ್ಲೇ ನಿಲ್ಲಿಸಿರುವ ಮಳೆನೀರು ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ರಸ್ತೆಯನ್ನು ದುರಸ್ತಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಭೂವ್ಯಾಜ್ಯದಿಂದಾಗಿ ಸಮಸ್ಯೆ’

‘ಕೊಳಚೆ ನೀರಿನ ಸಮಸ್ಯೆ ಇರುವುದು ನಿಜ. ಸ್ಥಳೀಯರಿಬ್ಬರ ನಡುವಿನ ಭೂವ್ಯಾಜ್ಯದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಒಳಚರಂಡಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ವ್ಯಾಜ್ಯ ಇತ್ಯರ್ಥವಾಗದೇ ಈ ಸಮಸ್ಯೆ ಬಗೆಹರಿಸುವುದು ಕಷ್ಟ’ ಎಂದು ಕೋಣನಕುಂಟೆ ವಾರ್ಡ್‌ನ ಪಾಲಿಕೆ ಸದಸ್ಯ ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಒಳಚರಂಡಿ ನಿರ್ಮಿಸುವಂತೆ ನಾವು ಕೇಳುತ್ತಿಲ್ಲ. ಮಳೆ ನೀರು ಹರಿಯುವ ಚರಂಡಿಗೆ ನೀರು ಬಿಡುತ್ತಿರುವವರನ್ನು ಪತ್ತ ಹಚ್ಚಿ, ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ ಎಂಬುದಷ್ಟೇ ನಮ್ಮ ಒತ್ತಾಯ. ಇದಕ್ಕೂ ಭೂವ್ಯಾಜ್ಯಕ್ಕೂ ಏನು ಸಂಬಂಧ’ ಎಂದು ಪ್ರಶ್ನಿಸಿದರು ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT