ಬೆನ್ನಿಗಾನಹಳ್ಳಿ ಕೆರೆಗೆ ಮರುಜೀವ

7
₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ ಬಿಬಿಎಂಪಿ

ಬೆನ್ನಿಗಾನಹಳ್ಳಿ ಕೆರೆಗೆ ಮರುಜೀವ

Published:
Updated:
Deccan Herald

ಬೆಂಗಳೂರು: ಕೊಳಚೆ ನೀರು, ಕಳೆ ಸಸ್ಯ ಹಾಗೂ ಕಟ್ಟಡ ತ್ಯಾಜ್ಯಗಳಿಂದಾಗಿ ಅಳಿವಿನ ಅಂಚಿಗೆ ತಲುಪಿದ್ದ ಬೆನ್ನಿಗಾನಹಳ್ಳಿ ಕೆರೆಯನ್ನು ಬದುಕಿಸಲು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗ ಮುಂದಾಗಿದೆ.

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಹಳೆಮದ್ರಾಸ್‌ ರಸ್ತೆಯ ಪಕ್ಕದ ಸರ್ವೆ ನಂ.47ರಲ್ಲಿ  ಈ ಕೆರೆ ಇದೆ. ಇದಕ್ಕೆ ಕೊಳಚೆನೀರು ಸೇರುವುದನ್ನು ತಡೆಯಲು ಪೂರ್ವ ಭಾಗದಲ್ಲಿ  ನಾಲ್ಕು ಅಡಿ ವ್ಯಾಸದ 900 ಮೀ ಉದ್ದದ ಕೊಳವೆ ಮಾರ್ಗ ಜೋಡಿಸಲಾಗಿದೆ. ರಾಮಮೂರ್ತಿನಗರ, ಸದಾನಂದನಗರ, ಕಸ್ತೂರಿನಗರ, ಚನ್ನಸಂದ್ರದಿಂದ ಹರಿದು ಬರುವ ಕೊಳಚೆ ನೀರು ಕೆರೆಯ ಒಡಲನ್ನು ಸೇರುವುದನ್ನು ಇದು ತಡೆಯಲಿದೆ. ಈ ಕೊಳವೆ ಮೂಲಕ ಸಾಗುವ ನೀರು ಕಗ್ಗದಾಸಪುರ ಕೆರೆಯ ಕಡೆಗೆ ಸಾಗಿಸಲು ಯೋಜಿಸಲಾಗಿದೆ.  

ಈ ಕೆರೆ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಅನುದಾನ ಒದಗಿಸಲಾಗಿದೆ. ಕೆರೆಯ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿದ ಏಜೆನ್ಸಿಗೆ ₹ 6.13 ಲಕ್ಷ ಶುಲ್ಕ ನೀಡಲಾಗುತ್ತಿದೆ. ಕೆರೆಯಲ್ಲಿ ಬಲೆಯಂತೆ ಹರಡಿದ್ದ ಜೊಂಡು, ಕಳೆಸಸ್ಯಗಳನ್ನು ತೆರವುಗೊಳಿಸಲಾಗಿದೆ. ಜತೆಗೆ ಈಗ ಕೆರೆಯ ಹೂಳನ್ನು ತೆಗೆಯಲಾಗುತ್ತಿದೆ. ಕೊಳಚೆ ನೀರು ಹರಿಯುವ ಪ್ರತ್ಯೇಕ ಮಾರ್ಗದಲ್ಲಿ ಚೆಂಬರ್‌ಗಳ ನಿರ್ಮಾಣ ಮತ್ತು ತಟದ ಮೂಲೆಯಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟುವ ಕೆಲಸ ನಡೆದಿದೆ. 

ಕೆರೆಯ ಮುಖ್ಯ ಏರಿ ಮತ್ತು ಸುತ್ತಲಿನ ಅಂಚನ್ನು ಅಭಿವೃದ್ಧಿಪಡಿಸುವುದು, ಸುತ್ತಲಿನ ತಂತಿಬೇಲಿ ಸರಿಪಡಿಸುವುದು ಮತ್ತು ಕೆರೆಯ ನಡುಗಡ್ಡೆ ಸುತ್ತ ಕಲ್ಲಿನ ಇಳಿಜಾರು ತಟ ನಿರ್ಮಿಸುವ ಕೆಲಸಗಳು ಇನ್ನಷ್ಟೇ ನಡೆಯಬೇಕಿವೆ.  

‘ಕೆರೆ ಅಭಿವೃದ್ಧಿಯ ಗುತ್ತಿಗೆ ಪಡೆದಿರುವ ಕೆ.ದಾಮೋದರ ಆ್ಯಂಡ್‌ ಕಂಪನಿ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಿದೆ’ ಎಂದು  ಹೆಸರು ಹೇಳಲಿಚ್ಛಿಸದ ಪಾಲಿಕೆ ಎಂಜಿನಿಯರ್‌ ತಿಳಿಸಿದರು.

‘ಅಂದುಕೊಂಡಂತೆ ಕಾಮಗಾರಿ ಪೂರ್ಣಗೊಂಡ ಬಳಿಕ ‌ಈ ಪರಿಸರದ ಚಿತ್ರಣವೇ ಬದಲಾಗಲಿದೆ. ಪಕ್ಕದ ನಡಿಗೆ ಪಥದಲ್ಲಿ ಸಾಗುವವರು ಹಾಗೂ ಬೆನ್ನಿಗಾನಹಳ್ಳಿಯ ಮೇಲ್ಸೇತುವೆಯ ಮೂಲಕ ಸಾಗುವವರು ಕೆರೆಯ ಮನಮೋಹಕ ನೋಟವನ್ನು ಕಣ್ತುಂಬಿಕೊಳ್ಳಬಹುದು’ ಎಂದು ಅವರು ವಿವರಿಸಿದರು.

**

ನಗರದ ಕೆರೆಗಳ ಸಂರಕ್ಷಣೆ ನಮ್ಮ ಆದ್ಯತೆ. ನಂತರ, ಅವುಗಳ ಅಂದ ಹೆಚ್ಚಿಸುವ ಕಾಮಗಾರಿಗಳಿಗೆ ಅನುದಾನ ಮೀಸಲಿಡುತ್ತಿವೆ. 
– ಬಿ.ವಿ.ಸತೀಶ್‌, ಮುಖ್ಯ ಎಂಜಿನಿಯರ್‌, ಕೆರೆಗಳ ವಿಭಾಗ, ಬಿಬಿಎಂಪಿ

**

ಅಂಕಿ–ಅಂಶ

18 ಎಕರೆ 25 ಗುಂಟೆ: ಬೆನ್ನಿಗಾನ ಹಳ್ಳಿ ಕೆರೆಯ ಒಟ್ಟು ವಿಸ್ತೀರ್ಣ

₹ 3 ಕೋಟಿ: ಈ ಕೆರೆ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಒದಗಿಸಿದ ಅನುದಾನ

 ₹ 1.60 ಕೋಟಿ: ಅದರಲ್ಲಿ ಕೆರೆಯಂಗಳ ಅಭಿವೃದ್ಧಿಗೆ ತಗಲುವ ವೆಚ್ಚ

 ₹ 27.49 ಲಕ್ಷ: ಮುಖ್ಯ ಏರಿ ಅಭಿವೃದ್ಧಿಗೆ ಕಾಯ್ದಿರಿಸಿದ ಮೊತ್ತ

₹ 56 ಲಕ್ಷ: ಕೆರೆಯ ದಂಡೆ ಬಲವರ್ಧನೆಗೆ ಆಗುವ ವೆಚ್ಚ 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !