ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ ಸಾಲ–ಶ್ವೇತಪತ್ರ ಬಿಡುಗಡೆ ಮಾಡಿ’

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸವಾಲು
Last Updated 17 ನವೆಂಬರ್ 2018, 19:13 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ಸ್ವತ್ತುಗಳನ್ನು ಬಿಜೆಪಿ ಆಡಳಿತಾವಧಿಯಲ್ಲಿ ಅಡಮಾನ ಇಡಲಾಗಿತ್ತು ಎಂದು ಟೀಕೆ ಮಾಡಿರುವ ಕಾಂಗ್ರೆಸ್‌ ನಾಯಕರು 1989ರಿಂದ ಇದುವರೆಗೆ ಯಾರ ಆಡಳಿತಾವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಲಿ’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸವಾಲು ಹಾಕಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿಗೆ ಸೇರಿದ ₹ 2,389 ಕೋಟಿ ಮೌಲ್ಯದ 11 ಆಸ್ತಿಗಳನ್ನು ಅಡಮಾನ ಇಡಲಾಗಿತ್ತು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಆ ಸಾಲ ಮಾಡಿದ್ದು ನಾವಲ್ಲ. ಈ ನಮಗಿಂತ ಹಿಂದೆ ಆಡಳಿತ ನಡೆಸಿದವರು ಮಾಡಿದ್ದ ಸಾಲಕ್ಕೆ ನಮ್ಮ ಆಡಳಿತಾವಧಿಯಲ್ಲಿ ಆಸ್ತಿಗಳನ್ನು ಭದ್ರತೆಗಾಗಿ ಇಟ್ಟಿದ್ದೆವು ಅಷ್ಟೇ’ ಎಂದು ಸಮಜಾಯಿಷಿ ನೀಡಿದರು.

‘ಬಿಬಿಎಂಪಿ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿದ್ದೆ. ಇದುವರೆಗೂ ಆ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿಲ್ಲ. ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ. ಈಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಾದರೂ ಈ ಕೆಲಸ ಮಾಡಲಿ’ ಎಂದರು.

‘ವಾರ್ಡ್‌ಗಳಲ್ಲಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಬಿಬಿಎಂಪಿ ₹1,800 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದೆ. ಅನುದಾನ ಬಿಡುಗಡೆಯಾಗದ ಕಾರಣಕ್ಕೆ ಮೂವರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ಪರಮೇಶ್ವರ ಅವರು ಬಿಬಿಎಂಪಿ ಆರ್ಥಿಕಸ್ಥಿತಿ ಸ್ಥಿರವಾಗಿದೆ ಎಂದು ಸುಳ್ಳು ಹೇಳಿದ್ದಾರೆ’ ಎಂದರು.

‘ಬಿಜೆಪಿ ಅವಧಿಯಲ್ಲೇ ಕಸದ ಸಮಸ್ಯೆ ಉಲ್ಬಣ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಉಲ್ಬಣವಾಗಿದ್ದು ಬಿಜೆಪಿ ಆಡಳಿತಾವಧಿಯಲ್ಲಿ. ಕಸದ ಸಮಸ್ಯೆಯ ಕಾರಣಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿತ್ತು. ನಮ್ಮ ಅವಧಿಯಲ್ಲಿ ಅದನ್ನು ಹದ್ದುಬಸ್ತಿಗೆ ತಂದಿದ್ದೇವೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ತಿಳಿಸಿದರು.

‘ಕಸ ವಿಲೇವಾರಿಗೆ 2013ರ ಬಳಿಕ ಮೂರು ಬಾರಿ ಟೆಂಡರ್‌ ಕರೆದರೂ ಗುತ್ತಿಗೆ ಪಡೆಯಲು ಯಾರೂ ಮುಂದೆ ಬಂದಿಲ್ಲ. ಯಾರ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂಬ ಕುರಿತು ಚರ್ಚೆಗೆ ನಾವೂ ಸಿದ್ಧವಿದ್ದೇವೆ’ ಎಂದು ಅವರು ತಿಳಿಸಿದರು.

*ಬಿಬಿಎಂಪಿ ಸಾಲದ ಕುರಿತು ಕಾಂಗ್ರೆಸ್‌ ಪಕ್ಷದವರು ಬಿಜೆಪಿ ಕುರಿತು ಮಾಡಿರುವ ಆರೋಪವು ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿದ ಗಾದೆಯಂತಿದೆ
–ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT