ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನದ್ಧವಾಗಿರಿ: ಅಧಿಕಾರಿಗಳಿಗೆ ಮೇಯರ್‌ ಸೂಚನೆ

ನಗರದಲ್ಲಿ ಮೂರು ದಿನಗಳಲ್ಲಿ ಭಾರಿ ಮಳೆ ಮುನ್ಸೂಚನೆ
Last Updated 3 ಅಕ್ಟೋಬರ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನು ಮೂರು ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿನದ 24 ಗಂಟೆ ಕಟ್ಟೆಚ್ಚರದಿಂದ ಇರಬೇಕು. ದೂರುಗಳು ಬಂದಾಗ ತಕ್ಷಣ ಜನರ ನೆರವಿಗೆ ಧಾವಿಸಬೇಕು’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೇಯರ್‌ ಆಗಿ ಆಯ್ಕೆಯಾದ ಬಳಿಕ ಅವರು ಗುರುವಾರ ಮೊದಲ ಬಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

‘ನಿಯಂತ್ರಣ ಕೊಠಡಿ 24 ತಾಸು ಕಾರ್ಯನಿರ್ವಹಿಸಬೇಕು. ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಬಾರದು’ ಎಂದು ಸೂಚಿಸಿದರು.

ವಾರಕ್ಕೊಮ್ಮೆ ಸಭೆ ಕಡ್ಡಾಯ: ‘ಪ್ರತಿ ವಲಯದ ಜಂಟಿ ಆಯುಕ್ತರು ತಮ್ಮ ಅಧೀನದ ಅಧಿಕಾರಿಗಳ ಜೊತೆ ವಾರ ಹಾಗೂ ವಲಯಗಳ ಉಸ್ತುವಾರಿ ವಹಿಸಿರುವ ವಿಶೇಷ ಆಯುಕ್ತರು 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು. ತಿಂಗಳಿಗೊಮ್ಮೆ ಪ್ರಗತಿಯ ವರದಿಯನ್ನು ನನಗೆ ಸಲ್ಲಿಸಬೇಕು. ಈ ಸಭೆಗಳು ನಿಯಮಿತವಾಗಿ ನಡೆಸದಿದ್ದರೆ ಕ್ರಮ ಎದುರಿಸಲು ಸಜ್ಜಾಗಿ’ ಎಂದು ಎಚ್ಚರಿಸಿದರು.

‘ನಗರದಲ್ಲಿ ಕಸ ಸಮಸ್ಯೆ ಉಲ್ಬಣವಾಗಿದೆ. ಮೂಲ ಸಮಸ್ಯೆ ಏನು ಎಂಬುದನ್ನು ಕೂಲಂಕಷವಾಗಿ ತಿಳಿದು ಬಗೆಹರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೈಜೋಡಿಸಿ ಕೆಲಸ ಮಾಡಿದಾಗ ಮಾತ್ರ ಈ ಸಮಸ್ಯೆಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು’ ಎಂದರು.

‘ಜನರ ಸಮಸ್ಯೆಯನ್ನು ಆಲಿಸಿ ಜನರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು. ಈ ಸಂಬಂಧ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕಿದೆ. ಸಾರ್ವಜನಿಕರು ಸೌಲಭ್ಯಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಸಾಧ್ಯವಿರುವ ಕಡೆಯಲ್ಲೆಲ್ಲಾ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಪಾಲಿಕೆ ಆಸ್ತಿಗಳನ್ನು ಗುತ್ತಿಗೆ ಕೊಟ್ಟಿರುವ ಮಾಹಿತಿ ಸಂಗ್ರಹಿಸಬೇಕು. ಹೊಸ ಜಾಹೀರಾತು ನಿಯಮ ಜಾರಿ ಮಾಡುವಲ್ಲಿ ಇರುವ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ 15 ದಿನಗಳ ಒಳಗೆ ವರದಿ ಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರಹರಿ ವಾಹನಗಳು ನಿತ್ಯ ರಾತ್ರಿ ವೇಳೆ ಗಸ್ತು ತಿರುಗಬೇಕು. ಆಯಾ ವಲಯಗಳ ಅಧಿಕಾರಿಗಳು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು’ ಎಂದರು.

‘ಇನ್ನು ಮುಂದೆ ಬಿಬಿಎಂಪಿಯಲ್ಲಿ ಯಾವುದೇ ಯೋಜನೆ ರೂಪಿಸುವುದಕ್ಕೆ ಮುನ್ನ ಅಥವಾ ನಿಯಮಗಳನ್ನು ಜಾರಿಗೆ ತರಬೇಕಾದರೆ ಆ ಬಗ್ಗೆ ನನ್ನ ಬಳಿಯೂ ಚರ್ಚೆ ನಡೆಸಬೇಕು. ನಿಯಮಗಳನ್ನು ಉಲ್ಲಂಘಿಸಿ ಯೋಜನೆಗಳನ್ನು ರೂಪಿಸುವಂತಿಲ್ಲ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಉಪಮೇಯರ್‌ ಸಿ.ಆರ್.ರಾಮಮೊಹನ ರಾಜು, ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಬ್ದುಲ್ ವಾಜಿದ್‌, ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

ಶೌಚಾಲಯ ತಪಾಸಣೆ

ಸಭೆಯ ಬಳಿಕ ಮೇಯರ್‌ ಅವರು ದಿಢೀರ್‌ ಭೇಟಿ ನೀಡಿ ಶೌಚಾಲಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

‘ನಿತ್ಯ ಸಾವಿರಾರು ಮಂದಿ ಕಚೇರಿಗೆ ಬರುತ್ತಾರೆ. ಇನ್ನು ಮುಂದೆ ಶೌಚಾಲಯಗಳ ಸ್ವಚ್ಛತೆಗೂ ಆದ್ಯತೆ ನೀಡಬೇಕು’ ಎಂದು ಸೂಚನೆ ನೀಡಿದರು.

ಬಿಬಿಎಂಪಿ ಕೇಂದ್ರ ಕಚೇರಿ ಸಂಕೀರ್ಣದಲ್ಲಿರುವ ವಿವಿಧ ವಿಭಾಗಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಠಡಿಗಳನ್ನು ಸ್ವಚ್ಛವಾಗಿಡಲು ಸಲಹೆ ನೀಡಿದರು.

‘ಬಿಬಿಎಂಪಿ ಕಚೇರಿ ಪ್ಲಾಸ್ಟಿಕ್ ಮುಕ್ತಗೊಳಿಸಿ’

‘ಬಿಬಿಎಂಪಿ ಕೇಂದ್ರ ಕಚೇರಿಯನ್ನು ಇಂದಿನಿಂದಲೇ ಪ್ಲಾಸ್ಟಿಕ್ ಮುಕ್ತಗೊಳಿಸುವ ನಿರ್ಣಯವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಯಾವುದೇ ಸಭೆ, ಸಮಾರಂಭದಲ್ಲೂ ಪ್ಲಾಸ್ಟಿಕ್ ವಸ್ತು ಬಳಸಬಾರದು’ ಎಂದು ತಾಕೀತು ಮಾಡಿದರು.

‘ಪ್ರತಿ ವಿಭಾಗಗಳ ಕಚೇರಿಯ ಮುಂಭಾಗ ‘ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ’ ಎಂದು ಮಾಹಿತಿ ಫಲಕ ಅಳವಡಿಸಬೇಕು’ ಎಂದು ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT