ಶುಕ್ರವಾರ, ಸೆಪ್ಟೆಂಬರ್ 20, 2019
27 °C
ವರ್ಷ ಕಳೆದರೂ ಆನಂದಪುರ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ

ಪಾಲಿಕೆ ನಿರ್ಲಕ್ಷ್ಯದಿಂದ ಪಾಳು ಬಿದ್ದ ನೀರಿನ ಘಟಕ

Published:
Updated:
Prajavani

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ವಾರ್ಡ್‌ನ ಆನಂದಪುರ ಕೊಳಗೇರಿ ಪ್ರದೇಶದಲ್ಲಿ ಬಿಬಿಎಂಪಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಈ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರಿನ ಭಾಗ್ಯ ಸಿಕ್ಕಿಲ್ಲ.

ವಿನಾಯಕ ಚಿತ್ರಮಂದಿರದ ಬಳಿ ಇರುವ ಈ ಕೊಳಗೇರಿಯಲ್ಲಿ 800ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ ಇಲ್ಲಿ ಘಟಕವನ್ನು ನಿರ್ಮಿಸಲಾಗಿತ್ತು. ಇದು ನಿರ್ಮಾಣವಾದ ಬಳಿಕವೂ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಲ್ಲ. ನೀರಿಗಾಗಿ ಅಲೆಯುವ ಸ್ಥಿತಿ ಇಲ್ಲಿನ ನಿವಾಸಿಗಳದ್ದು. 

ಘಟಕದ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, ಅದಕ್ಕೆ ವಿದ್ಯುತ್‌ ಸಂಪರ್ಕ ನೀಡಿಲ್ಲ. ಪೈಪ್‌ ಜೋಡಣೆ ಹಾಗೂ ಕೊಳಾಯಿ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ವರ್ಷದಿಂದ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಇಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುವ ಹಂತ ತಲುಪಿದೆ.

ಇಲ್ಲಿ ಮನೆ ಮನೆಗೆ ಕಾವೇರಿ ಸಂಪರ್ಕವೇನೋ ಇದೆ. ಆದರೆ, ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ಅದೂ ಕೆಲವೇ ನಿಮಿಷ ಮಾತ್ರ. ಆ ನೀರು ಸಾಕಾಗದ ಕಾರಣ ಇಲ್ಲಿನ ಕುಟುಂಬಗಳು ಶುದ್ಧ ಕುಡಿಯುವ ನೀರಿನ ಕ್ಯಾನ್‌ಗೆ ₹ 25 ತೆರುತ್ತಿವೆ.  ‘ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರು ನಿಯಮಿತವಾಗಿ ಪೂರೈಕೆ ಆಗದ ಕಾರಣ ಮಿತವಾಗಿ ಬಳಸುತ್ತೇವೆ. ಈ ಬಗ್ಗೆ ಸ್ಥಳೀಯ ನಾಯಕರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಪಾಲಿಕೆಗೆ ಅನೇಕ ಬಾರಿ ದೂರು ನೀಡಿದರೂ ಯಾವ ಅಧಿಕಾರಿಗಳು ಇತ್ತ ಮುಖ ಮಾಡಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸ್ಥಳಿಯ ನಿವಾಸಿಗಳು ದೂರಿದರು. 

‘ನೀರಿನ ಘಟಕ ಬಳಕೆಗೆ ಲಭ್ಯವಾಗದ ಸಿಟ್ಟಿನಿಂದ ಕೆಲವರು ಇದರಲ್ಲಿ ಅಳವಡಿಸಿರುವ ಟೈಲ್ಸ್‌ಗಳನ್ನು ಒಡೆದು ಹಾಕಿದ್ದಾರೆ. ಪುಂಡರು ಇದರ ಗೋಡೆಯ ಮೇಲೆ ಅ‌ಸಭ್ಯವಾಗಿ ಬರೆದು ವಿಕಾರಗೊಳಿಸಿದ್ದಾರೆ. ಇದು ಇನ್ನಷ್ಟು ಹದಗೆಡುವ ಮುನ್ನ ಜನರ ಬಳಕೆಗೆ ಲಭ್ಯವಾಗಬೇಕು’ ಎನ್ನುತ್ತಾರೆ ಕೊಳಗೇರಿ ನಿವಾಸಿ ಶೇಖರ್‌.

ಘಟಕ ಇನ್ನೂ ಕಾರ್ಯಾಚರಣೆ ಆರಂಭಿಸದ ಕುರಿತು ಪ್ರತಿಕ್ರಿಯಿಸಿದ ವಾರ್ಡ್ ಎಂಜಿನಿಯರ್‌ ವೆಂಕಟೇಶ್‌, ‘ನಾನು ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು. 

‘ಸಂಪರ್ಕಕ್ಕೆ ಸಿಗದ ಗುತ್ತಿಗೆದಾರರು’

‘ಈ ಘಟಕದ ಕೊಳವೆಬಾವಿ ಕೊರೆಯಿಸಿದ ಗುತ್ತಿಗೆದಾರರಾದ ಮುನಿರಾಜು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಗುತ್ತಿಗೆದಾರರಾದ ಈರಣ್ಣ ಅವರು ನಿರ್ಲಕ್ಷದಿಂದ ಸ್ಥಳೀಯರು ಸೌಲಭ್ಯ ವಂಚಿತರಾಗಿದ್ದಾರೆ. ಅವರಿಬ್ಬರು ನನ್ನ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಕೆ.ಆರ್.ಮಾರುಕಟ್ಟೆ ವಾರ್ಡ್‌ನ ಪಾಲಿಕೆ ಸದಸ್ಯೆ ನಾಜೀಮ್‌ ಖಾನಮ್‌ ಅಸಹಾಯಕತೆ ವ್ಯಕ್ತಪಡಿಸಿದರು.

66 ವಾರ್ಡ್‌ಗಳಲ್ಲಿ 8,426 ಕೊಳವೆಬಾವಿ!

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) 5 ವಲಯಗಳ 66 ವಾರ್ಡ್‌ಗಳಲ್ಲಿ ಸರಾಸರಿ 128 ಕೊಳವೆ ಬಾವಿ ಮತ್ತು 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ದಾಖಲೆ ಸೃಷ್ಟಿಸಿ ₹400 ಕೋಟಿಯಷ್ಟು ಹಣ ಲೂಟಿ ಮಾಡಲಾಗಿದೆ’ ಎಂದು ನಗರ ಜಿಲ್ಲಾ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘2016–17, 2017–18 ಮತ್ತು 2018–19ನೇ ಸಾಲಿನಲ್ಲಿ ಎಲ್ಲಾ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿ 9,588 ಕೊಳವೆ ಬಾವಿಗಳನ್ನು ₹671 ಕೋಟಿ ವೆಚ್ಚದಲ್ಲಿ ಕೊರೆಯಲಾಗಿದೆ. ಅದೇ ರೀತಿ ₹156 ಕೋಟಿ ವೆಚ್ಚದಲ್ಲಿ 976 ಶುದ್ಧ ಕುಡಿಯುವ ನೀರಿನ ಘಟಕಗಳನ್ನು(ಆರ್‌.ಒ) ನಿರ್ಮಿಸಲಾಗಿದೆ’ ಎಂದರು.

‘ಈ ಪೈಕಿ ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ 66 ವಾರ್ಡ್‌ಗಳಲ್ಲೇ 8,426 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಮತ್ತು 697 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಇವುಗಳನ್ನು ಹುಡುಕುತ್ತಾ ಹೋದರೆ ಶೇ 20ರಷ್ಟು ಮಾತ್ರ ಸಿಗುತ್ತವೆ. ಉಳಿದವು ದಾಖಲೆಗಳಲ್ಲಿ ಮಾತ್ರ ಇವೆ, ವಾಸ್ತವದಲ್ಲಿ ಇಲ್ಲ’ ಎಂದು ರಮೇಶ್ ಆರೋಪಿಸಿದರು.‌

‘ಈ ಕೊಳವೆಬಾವಿಗಳನ್ನು ಕೊರೆಸಲು ತಲಾ ₹7 ಲಕ್ಷ ವೆಚ್ಚ ಮತ್ತು ಆರ್‌.ಒಗಳಿಗೆ ತಲಾ ₹16 ಲಕ್ಷ ವೆಚ್ಚವಾಗಿದೆ ಎಂಬ ಅಘಾತಕಾರಿ ಅಂಶ ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಬಿಎಂಪಿ ನೀಡಿರುವ ದಾಖಲೆಗಳಲ್ಲಿದೆ’ ಎಂದು ವಿವರಿಸಿದರು.

‘ಒಂದು ಕೊಳವೆಬಾವಿ ಕೊರೆಸಿ 10 ಕೊರೆಸಿರುವುದಾಗಿ, ಒಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಮೂರು ಘಟಕ ನಿರ್ಮಿಸಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ಕೊಳ್ಳೆ ಹೊಡೆಯಲಾಗಿದೆ. ಈ ಅಕ್ರಮದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭಾಗಿಯಾಗಿದ್ದಾರೆ. ಜನಪ್ರತಿನಿಧಿಗಳ ತಾಳಕ್ಕೆ ಅಧಿಕಾರಿಗಳು ಕುಣಿದಿದ್ದಾರೆ’ ಎಂದು ಅವರು ಆರೋಪಿಸಿದರು.

ಈ ಸಂಬಂಧ ಎಸಿಬಿ, ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದು ರಮೇಶ್ ತಿಳಿಸಿದರು.

ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜನಪ್ರತಿನಿಧಿಗಳ ಹೆಸರು ಹೇಳಲು ಎನ್.ಆರ್. ರಮೇಶ್ ನಿರಾಕರಿಸಿದರು.

***
ಕೊಳವೆ ಬಾವಿ ಅಕ್ರಮದ ಬಗ್ಗೆ ದೂರು ಬಂದರೆ ಪರಿಶೀಲಿಸಿ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು
–ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

Post Comments (+)