ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಕಟ್ಟಿಕೊಳ್ಳುವ ಸಮಸ್ಯೆಗೆ ‘ಒರಿಫೈಸ್‌’ ತಂತ್ರಜ್ಞಾನದ ಪರಿಹಾರ

ಬಿಬಿಎಂಪಿ
Last Updated 1 ನವೆಂಬರ್ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸೇತುವೆಗಳ ಬಳಿ ರಾಜಕಾಲುವೆಗಳು ಕಟ್ಟಿಕೊಳ್ಳುವ ಸಮಸ್ಯೆ ನಿವಾರಿಸಲು ಒರಿಫೈಸ್‌ ತಂತ್ರಜ್ಞಾನದ ಮೊರೆ ಹೋಗಲು ಬಿಬಿಎಂಪಿ ಮುಂದಾಗಿದೆ. ದೊಮ್ಮಲೂರು ಬಳಿ ರಾಜಕಾಲುವೆಯಲ್ಲಿ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಬಳಸಲು ಪಾಲಿಕೆ ಸಿದ್ಧತೆ ನಡೆಸಿದೆ.

ದೊಮ್ಮಲೂರು ಮೇಲ್ಸೇತುವೆ ಬಳಿ ರಾಜಕಾಲುವೆಗೆ ಕಾಂಕ್ರೀಟ್‌ ಕೊಳವೆಗಳನ್ನು ಜೋಡಿಸಿ ಅದರ ಮೇಲೆ ಸೇತುವೆ ನಿರ್ಮಿಸಲಾಗಿದೆ. ರಾಜಕಾಲುವೆಯಲ್ಲಿ ಹರಿದು ಬರುವ ಕಸಕಡ್ಡಿಗಳು ಈ ಸೇತುವೆ ಬಳಿ ಸಿಲುಕಿಕೊಳ್ಳುತ್ತವೆ. ಹಾಗಾಗಿ ಇಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿ ಉಂಟಾಗುತ್ತದೆ. ಜೋರು ಮಳೆ ಬಂದಾಗಲೆಲ್ಲ ಇಲ್ಲಿ ಕಾಲುವೆ ಕಟ್ಟಿಕೊಂಡು ಪ್ರವಾಹ ಉಂಟಾಗುತ್ತಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಇತ್ತೀಚೆಗೆ ನಗರ ಪ್ರದಕ್ಷಿಣೆ ಕೈಗೊಂಡಾಗ ದೊಮ್ಮಲೂರಿನಲ್ಲಿ ಪ್ರವಾಹದಿಂದ ಪದೇ ಪದೇ ಇಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವ ಬಗ್ಗೆ ಸ್ಥಳೀಯರು ಅಹವಾಲು ತೋಡಿಕೊಂಡಿದ್ದರು. ಈ ಸಮಸ್ಯೆ ಪರಿಹರಿಸುವಂತೆ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ಸಚಿವರು ನಿರ್ದೇಶನ ನೀಡಿದ್ದರು.

ಇಲ್ಲಿ ರಾಜಕಾಲುವೆಯಲ್ಲಿ ಅಳವಡಿಸಿದ್ದ ವರ್ತುಲಾಕಾರದ ಕೊಳವೆಗಳನ್ನು ತೆರವುಗೊಳಿಸಿ ಚೌಕಾಕಾರದ ಕಾಂಕ್ರೀಟ್‌ ಕೊಳವೆಗಳನ್ನು ಅಳವಡಿಸಲು ಪಾಲಿಕೆ ಚಿಂತನೆ ನಡೆಸಿತ್ತು. ಹೊಸ ಕಾಂಕ್ರೀಟ್‌ ಕೊಳವೆಯನ್ನು ಬೇರೆ ಕಡೆ ಮುಂಚಿತವಾಗಿ ನಿರ್ಮಿಸಿ (ಪ್ರಿಕಾಸ್ಟ್‌) ತಂದು, ರಾತ್ರಿ ವೇಳೆ ಜೋಡಿಸಲು ಮುಂದಾಗಿತ್ತು. ಈ ಕಾಮಗಾರಿ ಸಲುವಾಗಿ ಹಳೆ ವಿಮಾನನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರವನ್ನು ಕನಿಷ್ಠ 15 ದಿನಗಳು ವಾಹನ ಸಂಚಾರ ನಿರ್ಬಂಧಿಸಬೇಕಿತ್ತು.

ಸದಾ ದಟ್ಟಣೆಯಿಂದ ಕೂಡಿರುವ ಈ ರಸ್ತೆಯನ್ನು ಕಾಮಗಾರಿ ಸಲುವಾಗಿ ಬಂದ್‌ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಬೇರೆ ಮಾರ್ಗೋಪಾಯ ಕಂಡುಕೊಳ್ಳಲು ಬಿಬಿಎಂಪಿ ಮುಂದಾಗಿದೆ.

‘ದೊಮ್ಮಲೂರು ಬಳಿ ರಾಜಕಾಲುವೆಯಲ್ಲಿ ಕಸ ಕಟ್ಟಿಕೊಳ್ಳುವುದರಿಂದಲೇ ಪ್ರವಾಹ ಸೃಷ್ಟಿಯಾಗುತ್ತಿದೆ. ಅದಕ್ಕಾಗಿ ನಾವು ರಾಜಕಾಲುವೆಯಲ್ಲಿ ‘ತ್ರ್ಯಾಶ್‌ ಬ್ಯಾರಿಯರ್‌’ಗಳನ್ನು ಅಳವಡಿಸಿ ಕಸವನ್ನು ಬೇರ್ಪಡಿಸುತ್ತೇವೆ. ಆ ಬಳಿಕವೂ ನೀರಿನಲ್ಲಿ ಸ್ವಲ್ಪ ಪ್ರಮಾಣದ ಕಸ ಉಳಿದುಕೊಳ್ಳುತ್ತದೆ. ಅದು ಸೇತುವೆಯ ಕೊಳವೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆ ತಪ್ಪಿಸಲು ಒರಿಫೈಸ್‌ ತಂತ್ರಜ್ಞಾನ ನೆರವಿಗೆ ಬರಲಿದೆ’ ಎಂದು ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದಕ್ಕೆ ಹೆಚ್ಚು ವೆಚ್ಚವಾಗದು. ಈಗಾಗಲೇ ಇದಕ್ಕೆ ಟೆಂಡರ್‌ ಕರೆದಿದ್ದು, ಚೆನ್ನೈ ಮೂಲದ ಕಂಪನಿ ಇದನ್ನು ಅಳವಡಿಸಲು ಮುಂದೆ ಬಂದಿದೆ’ ಎಂದರು.

‘ಚಲ್ಲಘಟ್ಟ ಕಣಿವೆಯಲ್ಲಿ ಎರಡು ಕಡೆ ಹಾಗೂ ವೃಷಭಾವತಿ ಕಣಿವೆಯಲ್ಲಿ ಎರಡು ಕಡೆ ಇವುಗಳನ್ನು ಅಳವಡಿಸಲಿದ್ದೇವೆ. ದೊಮ್ಮಲೂರು ಅಲ್ಲದೇ ನಗರದಲ್ಲಿ ಇನ್ನೂ ಮೂರು ಕಡೆ ಪ್ರಾಯೋಗಿಕವಾಗಿ ತ್ರ್ಯಾಶ್‌ ಬ್ಯಾರಿಯರ್‌ಗಳನ್ನು ಅಳವಡಿಸಲಿದ್ದೇವೆ. ಇದಕ್ಕೆ ಟೆಂಡರ್‌ ಕೂಡಾ ಕರೆದಿದ್ದೇವೆ’ ಎಂದು ಅವರು ತಿಳಿಸಿದರು.

ಏನಿದು ಒರಿಫೈಸ್‌ ತಂತ್ರಜ್ಞಾನ?

‘ಸೇತುವೆ ಬಳಿ ನೀರು ಹಾದುಹೋಗುವ ಕೊಳವೆಗೆ ಆಲಿಕೆಯಂತಹ ರಚನೆಯನ್ನು ನಿರ್ಮಿಸುತ್ತೇವೆ. ಇದು ನೀರು ಕೊಳವೆಯತ್ತ ರಭಸವಾಗಿ ಹರಿದು ಬರಲು ನೆರವಾಗುತ್ತದೆ. ನೀರು ಏಕಾಏಕಿ ಕೊಳವೆಯೊಳಗೆ ನುಗ್ಗುವಾಗ ಹೆಚ್ಚಿನ ಸೆಳೆತ ಸೃಷ್ಟಿಯಾಗುತ್ತದೆ. ನೀರಿನಲ್ಲಿ ಕಸಕಡ್ಡಿಗಳಿದ್ದರೂ ಈ ಸೆಳೆತಕ್ಕೆ ಸಿಲುಕಿ ಕೊಳವೆಯ ಮೂಲಕ ಹಾದುಹೋಗುತ್ತವೆ. ತನ್ಮೂಲಕ ಸೇತುವೆಯ ಬಳಿಕ ಕಸ ಕಟ್ಟಿಕೊಂಡು ಪ್ರವಾಹ ಉಂಟಾಗುವುದನ್ನು ತಪ್ಪಿಸಲು ನೆರವಾಗುತ್ತದೆ’ ಎಂದು ಪ್ರಹ್ಲಾದ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT