ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದಕ್ಕೆ?

7
ಮತದಾರರ ಪರಿಷ್ಕೃತ ಪಟ್ಟಿ ನೀಡುವಂತೆ ಕೋರಿ ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತ ಪತ್ರ

ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದಕ್ಕೆ?

Published:
Updated:

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಹಾಗೂ ಉಪಮೇಯರ್‌ ಆಯ್ಕೆಗೆ ನಡೆಯಬೇಕಾದ ಚುನಾವಣೆ ಅನಿರ್ದಿಷ್ಟಾವಧಿವರೆಗೆ ಮುಂದಕ್ಕೆ ಹೋಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಈ ಹಿಂದಿನ ಸ್ಥಾಯಿ ಸಮಿತಿಗಳ ಅಧಿಕಾರದ ಅವಧಿ ನ. 9ಕ್ಕೆ ಕೊನೆಗೊಂಡಿತ್ತು. ಅಷ್ಟರ ಒಳಗೆ ಹೊಸ ಸಮಿತಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾಧಿಕಾರಿಯಾಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಈ ಚುನಾವಣೆಯ ವೇಳಾಪಟ್ಟಿಯನ್ನೇ ಪ್ರಕಟಿಸಿರಲಿಲ್ಲ. ಈಗ ಮತದಾರರ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಿಸಿ ನಂತರವೇ ಚುನಾವಣೆ ನಡೆಸಲು ಚುನಾವಣಾಧಿಕಾರಿ ಮುಂದಾಗಿದ್ದಾರೆ.

‘ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದ ಬೆಂಗಳೂರು ದಕ್ಷಿಣ ಸಂಸದ ಅನಂತ್‌ ಕುಮಾರ್ ನಿಧನರಾಗಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾಗಿದ್ದ ವಿ.ಎಸ್‌.ಉಗ್ರಪ್ಪ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹಾಗಾಗಿ ಮತದಾನದ ಹಕ್ಕು ಹೊಂದಿರುವ ಸದಸ್ಯರ ಪರಿಷ್ಕೃತ ಪಟ್ಟಿಯನ್ನು ಆದಷ್ಟು ಬೇಗ ಕಳುಹಿಸಿಕೊಡಿ’ ಎಂದು ಕೋರಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಅವರು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಉಗ್ರಪ್ಪ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅವರು ರಾಜೀನಾಮೆ ನೀಡಿರುವ ಬಗ್ಗೆ ವಿಧಾನ ಪರಿಷತ್ತಿನಿಂದ ಅಧಿಕೃತವಾಗಿ ಮಾಹಿತಿ ಬರುವವರೆಗೂ ಬಿಬಿಎಂಪಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆಯಲು ಬರುವುದಿಲ್ಲ. ಹಾಗಾಗಿ ಬಿಬಿಎಂಪಿ ಪರಿಷತ್‌ ಕಾರ್ಯದರ್ಶಿಯವರು ಈ ಬಗ್ಗೆ ಮಾಹಿತಿ ಕೋರಿ ವಿಧಾನ ಪರಿಷತ್ತಿನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ವಿಧಾನ ಪರಿಷತ್ತಿನ ಕಾರ್ಯದರ್ಶಿಯಿಂದ ಯಾವಾಗ ಉತ್ತರ ಬರುತ್ತದೋ ಗೊತ್ತಿಲ್ಲ. ಪರಿಷತ್ತಿನಿಂದ ಅಧಿಕೃತ ಮಾಹಿತಿ ಬಂದ ಬಳಿಕ ಚುನಾವಣಾಧಿಕಾರಿಗೆ ಮತದಾರರ ಅಂತಿಮ ಪಟ್ಟಿಯನ್ನು ಕಳುಹಿಸುತ್ತೇವೆ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾನದ ಪ್ರಯುಕ್ತ ಕೌನ್ಸಿಲ್‌ ಸಭೆ ನಡೆಸುವುದಕ್ಕೆ ಏಳು ದಿನಗಳ ಮುಂಚೆ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಪಾಲಿಕೆಯಿಂದ ಮತದಾರರ ಪಟ್ಟಿಯನ್ನು ಚುನಾವಣಾಧಿಕಾರಿಗೆ ಕಳುಹಿಸಿದ ಬಳಿಕವೂ ಮತದಾನಕ್ಕೆ ಕನಿಷ್ಠ ಏಳು ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದು ಅವರು ವಿವರಿಸಿದರು. 

ಪಕ್ಷೇತರ ಸದಸ್ಯ ಅಸ್ವಸ್ಥ

ಸಗಾಯ್‌ಪುರ ವಾರ್ಡ್‌ನ ಪಕ್ಷೇತರ ಸದಸ್ಯ ವಿ.ಏಳುಮಲೈ ಅವರು ತೀವ್ರ ಅಸ್ವಸ್ಥಗೊಂಡು ವಿಕ್ರಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಗಿನಲ್ಲಿ ಗುಳ್ಳೆಗಳೆದ್ದಿದ್ದರಿಂದ ಚಿಕಿತ್ಸೆ ಪಡೆಯಲು ಅವರು ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ವೈದ್ಯರು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಅನಸ್ತೇಷಿಯಾ ನೀಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೀಗ ಮಾತನಾಡುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅವರ ಕುಟುಂಬದ ಸದಸ್ಯರು ಲಭ್ಯವಾಗಲಿಲ್ಲ.

ಉಪಮೇಯರ್‌: ಜೆಡಿಎಸ್‌ನಲ್ಲಿ ಪೈಪೋಟಿ

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಒಪ್ಪಂದದ ಪ್ರಕಾರ ಉಪಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ. ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಈ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ.

ಪಾಲಿಕೆಯಲ್ಲಿ ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ (ಕಾವಲ್‌ಭೈರಸಂದ್ರ ವಾರ್ಡ್‌), ನಾಗಪುರ ವಾರ್ಡ್‌ ಸದಸ್ಯ ಬಿ.ಭದ್ರೇಗೌಡ, ವಿ.ನಾಗೇನಹಳ್ಳಿ ವಾರ್ಡ್‌ ಸದಸ್ಯ ಎನ್‌.ರಾಜಶೇಖರ್‌ ಹಾಗೂ ಪಾದರಾಯನಪುರ ವಾರ್ಡ್‌ ಸದಸ್ಯ ಇಮ್ರಾನ್‌ ಪಾಷಾ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !