ಒಬ್ಬರಿಗೆ 5ಕ್ಕಿಂತ ಹೆಚ್ಚು ವಾರ್ಡ್‌ ಗುತ್ತಿಗೆ ಇಲ್ಲ

7
ಮನೆ ಮನೆಯಿಂದ ಕಸ ಸಂಗ್ರಹ ಟೆಂಡರ್‌

ಒಬ್ಬರಿಗೆ 5ಕ್ಕಿಂತ ಹೆಚ್ಚು ವಾರ್ಡ್‌ ಗುತ್ತಿಗೆ ಇಲ್ಲ

Published:
Updated:
Prajavani

ಬೆಂಗಳೂರು: ‘ಮನೆ ಮನೆಯಿಂದ ಕಸ ಸಂಗ್ರಹಿಸಲು ವಾರ್ಡ್‌ವಾರು ಗುತ್ತಿಗೆ ನೀಡಲಾಗುತ್ತದೆ. ಒಬ್ಬ ಗುತ್ತಿಗೆದಾರ ಐದಕ್ಕಿಂತ ಹೆಚ್ಚು ವಾರ್ಡ್‌ಗಳ ಗುತ್ತಿಗೆ ಪಡೆಯುವಂತಿಲ್ಲ ಎಂಬ ಷರತ್ತನ್ನೂ ವಿಧಿಸಲಾಗಿದೆ’ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ತಿಳಿಸಿದರು.

ಕಸ ವಿಲೇವಾರಿ ಟೆಂಡರ್‌ ಕುರಿತು ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಒಬ್ಬ ಗುತ್ತಿಗೆದಾರನಿಗೆ ಐದಕ್ಕಿಂತ ಹೆಚ್ಚು ಪ್ಯಾಕೇಜ್‌ ಗುತ್ತಿಗೆ ನೀಡಬಾರದು ಎಂದು ಹೈಕೋರ್ಟ್‌ ಆದೇಶ ಇದೆ. ಟೆಂಡರ್‌ ಷರತ್ತಿನಲ್ಲಿ ಗುತ್ತಿಗೆ ಅವಧಿ ಒಂದು ವರ್ಷ ಎಂದು
ಉಲ್ಲೇಖಿಸಲಾಗಿದೆ. ಆದರೆ, ಅಗತ್ಯ ಬಿದ್ದರೆ ಗುತ್ತಿಗೆ ಅವಧಿಯನ್ನು ಇನ್ನೊಂದು ವರ್ಷದವರೆಗೆ ವಿಸ್ತರಿಸುವುದಕ್ಕೂ ಅವಕಾಶ ಇದೆ’ ಎಂದರು.

ಟೆಂಡರ್‌ ಷರತ್ತುಗಳ ಪ್ರಕಾರ, ಕಸ ವಿಲೇವಾರಿಗೆ ಬಳಸುವ ಆಟೊ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ ವಾಹನಗಳನ್ನು ಗುತ್ತಿಗೆದಾರರೇ ಪೂರೈಸಬೇಕು. ಕೇವಲ ಒಂದು ವರ್ಷದ ಅವಧಿಯ ಗುತ್ತಿಗೆ ಪಡೆಯಲು ಕಾಂಪ್ಯಾಕ್ಟರ್‌ ಹಾಗೂ ಆಟೊ ಟಿಪ್ಪರ್‌ಗಳನ್ನು ಖರೀದಿಸಿದರೆ ನಷ್ಟ ಉಂಟಾಗುತ್ತದೆ ಎಂದು ಕೆಲವು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿಯೇ ಟೆಂಡರ್‌ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಂದೀಪ್‌, ‘ಆಟೊ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳನ್ನು ಗುತ್ತಿಗೆದಾರರೇ ಖರೀದಿಸಬೇಕು ಎಂದು ಟೆಂಡರ್‌ ಷರತ್ತುಗಳಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. 2015ರ ನಂತರ ಖರೀದಿಸಿದ ವಾಹನಗಳನ್ನು ಅವರು ಬಳಸಬಹುದು. ಈ ವಾಹನಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ಇದೆ. ತಾಂತ್ರಿಕ ಬಿಡ್‌ ಪರಿಶೀಲನೆ ವೇಳೆ ಈ ವಾಹನಗಳನ್ನು ಹಾಗೂ ಅವುಗಳ ಕಾರ್ಯಕ್ಷಮತೆಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಬೇಕಾಗುತ್ತದೆ. ಅವು ಸುಸ್ಥಿತಿಯಲ್ಲಿದ್ದರೆ ಹಳೆ ವಾಹನಗಳ ಬಳಕೆಗೂ ಅವಕಾಶ ಕಲ್ಪಿಸಲಿದ್ದೇವೆ’ ಎಂದು ವಿವರಿಸಿದರು.

‘ಇದೇ 7ರಂದು ಪ್ರೀ ಬಿಡ್‌ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗುತ್ತಿಗೆದಾರರು ತಮ್ಮ ಆತಂಕಗಳನ್ನು ಹೇಳಿಕೊಳ್ಳಬಹುದು. ಅಗತ್ಯ ಬಿದ್ದರೆ ಕೆಲವೊಂದು ಷರತ್ತುಗಳನ್ನು ಸಡಿಲಿಸುವುದಕ್ಕೂ ಅವಕಾಶ ಇದೆ’ ಎಂದು ತಿಳಿಸಿದರು.

‘ಎಲ್ಲ ವಾರ್ಡ್‌ಗಳ ಟೆಂಡರ್‌ ಪ್ರಕ್ರಿಯೆಯಲ್ಲೂ ಗುತ್ತಿಗೆದಾರರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ನಮ್ಮದು. ಕೆಲವು ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಭಾಗವಹಿಸದಿದ್ದರೆ ಮತ್ತೆ ಅಲ್ಪಾವಧಿ ಟೆಂಡರ್‌ ಕರೆಯುತ್ತೇವೆ. ಸರ್ಕಾರದಿಂದ ಅನುಮೋದನೆ ಪಡೆದು ಗುತ್ತಿಗೆ ಅವಧಿ ವಿಸ್ತರಿಸುವುದಕ್ಕೂ ಅವಕಾಶ ಕಲ್ಪಿಸಬಹುದು’ ಎಂದರು.

ಪಾಲಿಕೆ ಸದಸ್ಯ ಮಂಜುನಾಥರಾಜು ಅವರು ‘ಈ ಗುತ್ತಿಗೆ ಪ್ರಕ್ರಿಯೆ ಅವ್ಯವಹಾರಕ್ಕೆ ಆಸ್ಪದ ನೀಡುವಂತಿದೆ. ಅಧಿಕಾರಿಗಳು ಭ್ರಷ್ಟಾಚಾರ
ನಡೆಸುತ್ತಿದ್ದಾರೆ’ ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ರಂದೀಪ್‌ ನಿರಾಕರಿಸಿದರು.

‘ಆರೋಪಕ್ಕೆ ಆಯುಕ್ತರು ಪಾಲಿಕೆ ಸಭೆಯಲ್ಲೇ ಉತ್ತರ ನೀಡಿದ್ದಾರೆ. ಟೆಂಡರ್‌ ಷರತ್ತುಗಳ ಬಗ್ಗೆ ಅನುಮಾನಗಳಿದ್ದರೆ ಪಾಲಿಕೆ ಸದಸ್ಯರ ಸಮಿತಿಯನ್ನು ರಚಿಸಿ ಪರಿಶೀಲನೆಗೆ ಒಳಪಡಿಸುವುದಕ್ಕೂ ಅವಕಾಶ ಇದೆ ಎಂದು ಆಯುಕ್ತರು ಹೇಳಿದ್ದಾರೆ. ಆ ಸಮಿತಿ ಬಯಸಿದರೆ ಯಾವುದೇ ಸ್ಪಷ್ಟೀಕರಣ ನೀಡಲು ಸಿದ್ಧ’ ಎಂದು ಅವರು ಹೇಳಿದರು. 

**

ಅಂಕಿ ಅಂಶ

4,558 - ಕಸ ಸಂಗ್ರಹಕ್ಕೆ ಪಾಲಿಕೆ ಗುರುತಿಸಿರುವ ಬ್ಲಾಕ್‌ಗಳು

750 - ಪ್ರತಿ ಬ್ಲಾಕ್‌ನಲ್ಲಿರುವ ಮನೆಗಳ ಸಂಖ್ಯೆ  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !