120 ವಾರ್ಡ್‌ಗಳಲ್ಲಿ ನಡೆದೇ ಇಲ್ಲ ಸಭೆ

7
ವಾರ್ಡ್‌ ಸಮಿತಿ: ಆದೇಶ ಹೊರಡಿಸಿ ಕಳೆಯಿತು ಮೂರು ತಿಂಗಳು * ಸಭೆ ನಡೆಸಲು ಇನ್ನೂ ನಿರುತ್ಸಾಹ

120 ವಾರ್ಡ್‌ಗಳಲ್ಲಿ ನಡೆದೇ ಇಲ್ಲ ಸಭೆ

Published:
Updated:
Prajavani

ಬೆಂಗಳೂರು: ಪ್ರತಿ ತಿಂಗಳ ಮೊದಲ ಶನಿವಾರವೇ ವಾರ್ಡ್‌ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡು ಮೂರು ತಿಂಗಳುಗಳು ಕಳೆದಿವೆ. ಆ ಬಳಿಕವೂ ಹೆಚ್ಚೂಕಡಿಮೆ ಮೂರನೇ ಒಂದರಷ್ಟು ವಾರ್ಡ್‌ಗಳಲ್ಲಿ ಮಾತ್ರ ಪ್ರತಿ ತಿಂಗಳು ಸಭೆಗಳು ನಡೆದಿವೆ. ‌

2018ರ ಅಕ್ಟೋಬರ್‌ನಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ಮೇಯರ್‌ ಗಂಗಾಂಬಿಕೆ ಅವರು ಪ್ರತಿ ತಿಂಗಳ ಮೊದಲ ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸುವಂತೆ ಆದೇಶ ಮಾಡಿದ್ದರು. ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು  2018ರ ನ.16ರಂದು ಎಲ್ಲ ವಾರ್ಡ್‌ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳಿಗೆ ಹಾಗೂ ವಲಯಗಳ ಜಂಟಿ ಆಯುಕ್ತರಿಗೆ ಸುತ್ತೋಲೆ ಕಳುಹಿಸಿದ್ದರು. ಸಭೆಯ ನಿರ್ಣಯಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆಯೂ ಸೂಚಿಸಿದ್ದರು.

ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡ ಬಳಿಕವೂ ಎಲ್ಲ 198 ವಾರ್ಡ್‌ಗಳಲ್ಲಿ ಸಭೆಗಳು ನಡೆದಿಲ್ಲ. ಎಷ್ಟು ವಾರ್ಡ್‌ಗಳಲ್ಲಿ ಸಭೆಗಳು ನಡೆದಿವೆ ಎಂಬ ಖಚಿತ ಮಾಹಿತಿಯೂ ಪಾಲಿಕೆ ಬಳಿ ಇಲ್ಲ. ವಾರ್ಡ್‌ ಸಮಿತಿಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆ ಕಲೆ ಹಾಕಿರುವ ಮಾಹಿತಿ ಪ್ರಕಾರ, 2018ರ ಡಿಸೆಂಬರ್‌ ತಿಂಗಳಲ್ಲಿ 68 ವಾರ್ಡ್‌ಗಳಲ್ಲಿ, 2019ರ ಜನವರಿ ತಿಂಗಳಲ್ಲಿ 82 ವಾರ್ಡ್‌ಗಳಲ್ಲಿ ಸಭೆಗಳು ನಡೆದಿವೆ. ಫೆಬ್ರುವರಿ ತಿಂಗಳಲ್ಲಿ ಇದುವರೆಗೆ 60 ವಾರ್ಡ್‌ಗಳಲ್ಲಿ ಸಭೆಗಳು ನಡೆದಿವೆ.

‘ತಿಂಗಳ ಮೊದಲ ಶನಿವಾರವೇ ಸಭೆ ಏರ್ಪಡಿಸುವುದು ಸಮಿತಿಯ ಸದಸ್ಯ ಕಾರ್ಯದರ್ಶಿಯ ಹೊಣೆ. ಕೆಲವೊಮ್ಮೆ ವಾರ್ಡ್‌ ಸಮಿತಿ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯರಿಗೆ ತುರ್ತು ಕಾರ್ಯಗಳೇನಾದರೂ ಇದ್ದರೆ ಬದಲಿ ದಿನಾಂಕವನ್ನು ನಿಗದಿ ಮಾಡಬಹುದು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎಲ್ಲ ವಾರ್ಡ್‌ಗಳಿಗೂ ಸಮಿತಿಯ ಸದಸ್ಯ ಕಾರ್ಯದರ್ಶಿಯನ್ನು ನೇಮಿಸಲಾಗಿದೆ. ಸದಸ್ಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಅಧಿಕಾರಿ ವರ್ಗವಾದರೂ, ಆ ಸ್ಥಾನಕ್ಕೆ ಬರುವವರು ಸಮಿತಿಯ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗುತ್ತದೆ. ಹೆಚ್ಚಿನ ಕಡೆ ಸಹಾಯಕ ಕಂದಾಯ ಅಧಿಕಾರಿಗಳೇ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. ಕೆಲವೆಡೆ ಮಾತ್ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಈ ಹೊಣೆ ವಹಿಸಿದ್ದೇವೆ. ಅವರು ಸಭೆ ನಡೆಸದೆ ಇರಲು ಕಾರಣಗಳೇ ಇಲ್ಲ’ ಎಂದರು.

ಕೆಲವು ವಾರ್ಡ್‌ಗಳಲ್ಲಿ ಸಭೆ ನಡೆಸಲು ಪಾಲಿಕಸೆ ಸದಸ್ಯರು ಸಹಕಾರ ನೀಡುತ್ತಿಲ್ಲ ಎಂಬ ದೂರುಗಳೂ ಇವೆ. ಇನ್ನು ಕೆಲವು ಕಡೆ ಮೊದಲ ಶನಿವಾರದ ಬದಲು ಬೇರೆ ದಿನ ಸಭೆ ನಡೆಸಲಾಗಿದೆ.

‘ನನ್ನ ವಾರ್ಡ್‌ನಲ್ಲಿ ಸಭೆ ನಡೆಸಿದ್ದೇನೆ. ಕೆಲವು ಕಡೆ ಸದಸ್ಯರಿಗೆ ಸಮಯ ಹೊಂದಾಣಿಕೆ ಆಗದ ಕಾರಣಕ್ಕೆ ತಿಂಗಳ ಮೊದಲ ಶನಿವಾರವೇ ಸಭೆ ನಡೆಸಲು ಆಗದಿರಬಹುದು. ವಾರ್ಡ್‌ ಸಭೆಯಿಂದ ಸದಸ್ಯರಿಗೂ ಅನುಕೂಲವೇ ಆಗುತ್ತದೆ’ ಎಂದು ಜೋಗುಪಾಳ್ಯ ವಾರ್ಡ್‌ನ ಎಂ.ಗೌತಮ್‌ ಕುಮಾರ್‌ ಅಭಿಪ್ರಾಯಪಟ್ಟರು.

‘ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಇದೊಂದು ಉತ್ತಮ ಹೆಜ್ಜೆ. ಅನೇಕ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಿಕೊಳ್ಳುವುದಕ್ಕೂ ಅವಕಾಶವಾಗುತ್ತದೆ. ಪ್ರತಿಯೊಬ್ಬ ಪಾಲಿಕೆ ಸದಸ್ಯರೂ ಮುತುವರ್ಜಿಯಿಂದ ಈ ಸಭೆಗಳನ್ನು ನಡೆಸಬೇಕು’ ಎಂದರು ಜಯಮಹಲ್‌ ವಾರ್ಡ್‌ನ ಸದಸ್ಯ ಎಂ.ಕೆ.ಗುಣಶೇಖರ್‌.

‘ವಾರ್ಡ್‌ ಸಭೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಪಾಲಿಕೆ ಸದಸ್ಯರೂ ಇದರ ಮಹತ್ವ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇನ್ನಷ್ಟು ತಿಳಿವಳಿಕೆ ಮೂಡಿಸಿದರೆ ಕ್ರಮೇಣ ಎಲ್ಲ ವಾರ್ಡ್‌ಗಳಲ್ಲೂ ಪ್ರತಿ ತಿಂಗಳೂ ವಾರ್ಡ್‌ ಸಭೆ ನಡೆಯುವ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀನಿವಾಸ ಅಲವಿಲ್ಲಿ ಹೇಳಿದರು.

31 ವಾರ್ಡ್‌ ಮಾಹಿತಿ ಮಾತ್ರ ವೆಬ್‌ಸೈಟ್‌ನಲ್ಲಿ

ಸಭೆಯ ನಡಾವಳಿಗಳನ್ನು ವೆಬ್‌ಸೈಟ್‌ನಲ್ಲಿ (http://bbmp.gov.in) ಪ್ರಕಟಿಸುವುದಕ್ಕೂ ಪಾಲಿಕೆ ಕ್ರಮಕೈಗೊಂಡಿದೆ. ಆದರೆ, 2018ರ ಡಿಸೆಂಬರ್‌ ಹಾಗೂ 2019ರ ಜನವರಿ ತಿಂಗಳಲ್ಲಿ ತಲಾ 31 ವಾರ್ಡ್‌ಗಳಲ್ಲಿ ನಡೆದಿರುವ ಸಭೆಗಳ ನಡಾವಳಿಗಳು ಮಾತ್ರ ಪಾಲಿಕೆ ವೆಬ್‌ಸೈಟ್‌ನಲ್ಲಿ ಲಭ್ಯ. ಈ ತಿಂಗಳ ಸಭೆಯ ನಡಾವಳಿಗಳು ಇನ್ನೂ ಅಪ್‌ಲೊಡ್‌ ಆಗಿಲ್ಲ.

‘ಸಭೆ ನಡೆಸಿದ ವಾರದೊಳಗೆ ನಡಾವಳಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಎಲ್ಲಾ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳಿಗೆ ಹಾಗೂ ಆಯಾ ವಲಯಗಳ ಜಂಟಿ ಆಯುಕ್ತರಿಗೆ ಸೂಚಿಸಿದ್ದೇವೆ. ಇನ್ನೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅನೇಕ ವಾರ್ಡ್‌ಗಳಲ್ಲಿ ಸಭೆ ನಡೆದಿದ್ದರೂ ನಡಾವಳಿ ಕಳುಹಿಸಿಕೊಡುತ್ತಿಲ್ಲ. ಹಾಗಾಗಿ ಈ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಕಾರಣ ಕೇಳಿ ನೋಟಿಸ್‌’

‘ಪ್ರತಿ ತಿಂಗಳೂ ಸಭೆ ನಡೆಸುವಂತೆ ಎಲ್ಲ ವಾರ್ಡ್‌ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಯಾವ ವಾರ್ಡ್‌ಗಳಲ್ಲಿ ಸಭೆ ನಡೆದಿಲ್ಲ ಎಂಬ ಕುರಿತು ವರದಿ ತರಿಸಿಕೊಳ್ಳುತ್ತೇನೆ. ಸಭೆ ನಡೆಸದ ಎಲ್ಲ ಸದಸ್ಯ ಕಾರ್ಯದರ್ಶಿಗಳಿಗೂ ಕಾರಣ ಕೇಳಿ ನೋಟಿಸ್‌ ಕಳುಹಿಸಲಾಗುವುದು. ಅವರು ಸೂಕ್ತ ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* ಪ್ರತಿ ತಿಂಗಳು ಕಡ್ಡಾಯವಾಗಿ ವಾರ್ಡ್ ಸಮಿತಿ ಸಭೆಯನ್ನು ನಡೆಸಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿದೆ. ಸಭೆ ನಡೆಸದಿದ್ದರೆ, ಅದಕ್ಕೆ ಆ ಸಮಿತಿಗಳೇ ಹೊಣೆ

ಗಂಗಾಂಬಿಕೆ, ಮೇಯರ್‌

* ವಾರ್ಡ್‌ ಸಮಿತಿ ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಸಮಿತಿ ಸದಸ್ಯ ಕಾರ್ಯದರ್ಶಿಗಳಿಗೆ ಶೀಘ್ರವೇ ತರಬೇತಿ ಹಮ್ಮಿಕೊಳ್ಳುತ್ತೇವೆ

ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವಾರ್ಡ್‌ ಸಮಿತಿಗಳ ಬಲವರ್ಧನೆ ಕುರಿತು ‘ಪ್ರಜಾವಾಣಿ’ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ದಿ ಚಾನ್ಸರಿ ಪೆವಿಲಿಯನ್‌’ ಹೋಟೆಲ್‌ನಲ್ಲಿ ಇದೇ 16ರಂದು ಸಂಜೆ 5ರಿಂದ ಸಂವಾದ ಏರ್ಪಡಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ (https://www.deccanherald.com/ward-committees-event) ನೋಂದಣಿ ಮಾಡಿಸಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !