ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಟಾಪಿಂಗ್‌ ಕಾಮಗಾರಿ: ತಾಂತ್ರಿಕ ಸಮಿತಿಯಲ್ಲಿ ಪ್ರಸ್ತಾವ ಮಂಡಿಸಲು ಸೂಚನೆ

ಯಡಿಯೂರು ವಾರ್ಡ್‌ನಲ್ಲಿ l ಬಿಬಿಎಂಪಿ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆ ಪತ್ರ
Last Updated 16 ಅಕ್ಟೋಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಯಡಿಯೂರು ವಾರ್ಡ್‌ನ ಎರಡು ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿಗಳಿಗೆ ನಿಯಮಮೀರಿ ಅಂದಾಜುಪಟ್ಟಿ ತಯಾರಿಸಿದ ಹಾಗೂ ಟೆಂಡರ್‌ ಕರೆಯದೆಯೇ ಕಾಮಗಾರಿ ಗುತ್ತಿಗೆ ನೀಡಲು ಸಿದ್ಧತೆ ನಡೆಸಿದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾದ ಬಳಿಕ ನಗರಾಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡಿದೆ.

ಈ ಕಾಮಗಾರಿಗಳ ಪ್ರಸ್ತಾವವನ್ನು ತಾಂತ್ರಿಕ ಸಲಹಾ ಸಮಿತಿಯ ಮುಂದಿಟ್ಟು ಒಪ್ಪಿಗೆ ಪಡೆದ ನಂತರವೇ ಕಳುಹಿಸಿಕೊಡುವಂತೆ ಹಾಗೂ ಈ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ನೀಡುವ ಪ್ರಸ್ತಾವ ಇದ್ದಲ್ಲಿ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಮಂಗಳವಾರ ಪತ್ರ ಬರೆದಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌ (ಸಂಖ್ಯೆ 167) ವ್ಯಾಪ್ತಿಯಲ್ಲಿ ದ.ರಾ.ಬೇಂದ್ರೆ ವೃತ್ತದಿಂದ ಆರ್ಮುಗಂ ವೃತ್ತದವರೆಗೆ 1.2 ಕಿ.ಮೀ ಉದ್ದದ ಪಟಾಲಮ್ಮ ರಸ್ತೆ (21 ಮೀ ಅಗಲ) ಹಾಗೂ ಜಯನಗರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿರುವ 23ನೇ ಅಡ್ಡರಸ್ತೆಯನ್ನು ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ರಸ್ತೆಯಿಂದ 36ನೇ ಅಡ್ಡರಸ್ತೆ ಮತ್ತು 4ನೇ ಮುಖ್ಯ ರಸ್ತೆವರೆಗಿನ ಸುಮಾರು 1.10 ಕಿ.ಮೀ ಉದ್ದದ ರಸ್ತೆ (15 ಮೀ ಅಗಲ) ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದರು.

ಈ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರೇ ಸಿದ್ಧಪಡಿಸಿದ ಅಂದಾಜುಪಟ್ಟಿಯಲ್ಲಿ ಶೇ 3ರಷ್ಟು ಕಡಿಮೆ ಮಾಡಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಾದ ಆರ್‌.ಸತೀಶ್‌ ಹಾಗೂ ಎಸ್‌.ಮಂಜುನಾಥ್‌ ಒಪ್ಪಿದ್ದಾರೆ ಎಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ 2019ರ ಸೆ. 24ರಂದು ಬರೆದ ಪತ್ರ ಬರೆದಿದ್ದರು.

ಈ ಬಗ್ಗೆ ಅ.14ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ‘ ಕಾಮಗಾರಿಗಳ ಅಂದಾಜುಪಟ್ಟಿಯನ್ನು ಅಧಿಕಾರಿಗಳ ಬದಲು ಗುತ್ತಿಗೆದಾರರು ತಯಾರಿಸಿದ ಬಗ್ಗೆ ಹಾಗೂ ಅದಕ್ಕೆ ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆ ಪಡೆಯದ ಬಗ್ಗೆ ಗಮನ ಸೆಳೆದಿತ್ತು. ಈ ಕಾಮಗಾರಿಗಳಿಗೆ ಕೆಟಿಪಿಪಿ ಕಾಯ್ದೆಯಡಿ 4 (ಜಿ) ವಿನಾಯಿತಿ ನೀಡುವುದಕ್ಕೆ ಸಕಾರಣ ಇಲ್ಲದ ಬಗ್ಗೆಯೂ ವಿಶೇಷ ವರದಿ ಬೆಳಕು ಚೆಲ್ಲಿತ್ತು.

ಸಿ.ಎಂ ಕಚೇರಿಯಿಂದ ಒತ್ತಡ?

‘ಯಡಿಯೂರು ವಾರ್ಡ್‌ನ ಎರಡು ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಅವರ ಸಲಹೆಗಾರರು ತಿಳಿಸಿದ್ದಾರೆ. ಹಾಗಾಗಿ, ಪ್ರಥಮ ಆದ್ಯತೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಬರೆದ ಪತ್ರದಲ್ಲಿ ಹೇಳಿದೆ.

ರಮೇಶ್‌ ಈಗಲೂ ಪಾಲಿಕೆ ಸದಸ್ಯರೇ?

ಎನ್‌.ಆರ್‌.ರಮೇಶ್‌ ಅವರು ಪಟಾಲಮ್ಮ ರಸ್ತೆ ಮತ್ತು ಇತರ ಕೆಲವು ಆಯ್ದ ರಸ್ತೆಗಳ ಕಾಮಗಾರಿ ಕುರಿತು ಸಲ್ಲಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಸಲಹೆಗಾರರು ಸೋಮವಾರ (ಇದೇ 14ರಂದು) ನಗರಾಭಿವೃದ್ಧಿ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಿದ್ದಾರೆ. ಅವರು ನಗರಾಭಿವೃದ್ಧಿ ಇಲಾಖೆಯ ಎಸಿಎಸ್‌ಗೆ ಬರೆದಿರುವ ಪತ್ರದ ಪ್ರಕಾರ ಎನ್‌.ಆರ್‌.ರಮೇಶ್‌ ಈಗಲೂ ಪಾಲಿಕೆ ಸದಸ್ಯರು! ಆದರೆ, ರಮೇಶ್‌ ಈಗ ಪಾಲಿಕೆ ಸದಸ್ಯರಲ್ಲ.

ಇಬ್ಬರೂ ಅಧಿಕಾರಿಗಳಿಗೆ ಕಾರಣ ಕೇಳಿ ಪತ್ರ

ಯಡಿಯೂರು ವಾರ್ಡ್‌ನಲ್ಲಿ ನಡೆಸಲು ಉದ್ದೇಶಿಸಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999ರ ಕಲಂ 4 (ಜಿ) ಅಡಿ ವಿನಾಯಿತಿ ಕೋರಿ ಬಿಬಿಎಂಪಿಯಿಂದ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾದ ಪ್ರಸ್ತಾವದಲ್ಲಿ ಹಿರಿಯ ಅಧಿಕಾರಿಗಳ ಬಗ್ಗೆ ವಾಸ್ತವಾಂಶದಿಂದ ಕೂಡಿರದ ಅಂಶ ಉಲ್ಲೇಖಿಸಿದ ಬಗ್ಗೆ ಕಾರಣ ಕೇಳಿ ಪಾಲಿಕೆಯ
ವಿಶೇಷ ಆಯುಕ್ತರು (ಯೋಜನೆ) ದಕ್ಷಿಣ ವಲಯದ ಕಾರ್ಯಪಾಲಕ ಎಂಜಿನಿಯರ್‌ (ಯೋಜನೆ– ದಕ್ಷಿಣ) ಹಾಗೂ ಮುಖ್ಯ ಎಂಜಿನಿಯರ್‌ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಎರಡು ದಿನಗಳ ಒಳಗೆ ಸಮಜಾಯಿಷಿ ನೀಡಬೇಕು ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

‘ಮುಖ್ಯ ಕಾರ್ಯದರ್ಶಿಗಳು, ಎನ್‌.ಆರ್‌.ರಮೇಶ್‌ ಜೊತೆ ದೂರವಾಣಿ ಮೂಲಕ ಮಾತನಾಡಿ ಸದರಿ ಕಾಮಗಾರಿಯನ್ನು ಶೇ 3ರಷ್ಟು ಕಡಿಮೆ ಮೊತ್ತದಲ್ಲಿ ನಿರ್ವಹಿಸಲು ಸೂಚಿಸಿರುತ್ತಾರೆ. ಅದರಂತೆ ಅಂದಾಜು ಪಟ್ಟಿಗಿಂತ ಶೇ 3 ರಷ್ಟು ಕಡಿಮೆ ಮೊತ್ತದಲ್ಲಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಾದ ಆರ್‌.ಸತೀಶ್‌ ಹಾಗೂ ಎನ್‌.ಮಂಜುನಾಥ್‌ ಒಪ್ಪಿರುವುದಾಗಿ’ ದಾಖಲಿಸಿದ್ದೀರಿ. ವಾಸ್ತವವಾಗಿ ಈ ಪ್ರಸ್ತಾವ ನಿಜಾಂಶದಿಂದ ಕೂಡಿಲ್ಲ ಎಂದು ತಿಳಿದುಬಂದಿದೆ. ವಿಷಯ ಪ್ರಸ್ತಾಪಿಸುವಾಗ ಅದು ವಾಸ್ತವಾಂಶದಿಂದ ಕೂಡಿದೆಯೇ ಇಲ್ಲವೇ ಎಂಬ ಬಗ್ಗೆ ಒಬ್ಬ ಜವಾಬ್ದಾರಿಯುತ ನೌಕರರಾಗಿ ಪರಿಶೀಲಿಸದೆ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಮ್ಮ ಮೇಲೆ ಏಕೆ ಶಿಸ್ತುಕ್ರಮ ಜರುಗಿಸಬಾರದು’ ಎಂದು ವಿಶೇಷ ಆಯುಕ್ತರು ಪತ್ರದಲ್ಲಿ ವಿವರಣೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT