ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ಸೃಷ್ಟಿ: ಭೂಗಳ್ಳರ ಜತೆ ಬಿಡಿಎ ನೌಕರನೂ ಜೈಲುಪಾಲು

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಲು ಯತ್ನ
Last Updated 8 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮೃತ ಮಹಿಳೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 1 ಕೋಟಿ ಮೌಲ್ಯದ ನಿವೇಶನ ಕಬಳಿಸಲು ಯತ್ನಿಸಿದ್ದ ಬಿಡಿಎ ‘ಡಿ’ ಗ್ರೂಪ್ ನೌಕರ ಹಾಗೂ ನಾಲ್ವರು ರಿಯಲ್ ಎಸ್ಟೇಟ್ ಏಜೆಂಟ್‌ಗಳು ಬನಶಂಕರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎರಡು ವರ್ಷಗಳಿಂದ ಬಿಡಿಎಯಲ್ಲಿ ಕೆಲಸ ಮಾಡುತ್ತಿದ್ದ ಮರಿಯಪ್ಪ, ಮಲ್ಲೇಶ್ವರದ ವೆಂಕಟಸ್ವಾಮಿ, ಕಾಮಾಕ್ಷಿಪಾಳ್ಯದ ಸ್ವಾಮಿ, ಟ್ಯಾನರಿ ರಸ್ತೆಯ ಇನಾಯತ್‌ವುಲ್ಲಾ ಷರೀಫ್ ಹಾಗೂ ಸಾದಿಕ್ ಬಂಧಿತರು. ಇವರ ವಿರುದ್ಧ ವಿ.ವಿ.ಪುರದ ಪ್ರಮೀಳಾ ಚೌಡಯ್ಯ (70) ದೂರು ಕೊಟ್ಟಿದ್ದರು. ಆರೋಪಿಗಳಿಂದ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

₹4 ಸಾವಿರಕ್ಕೆ ದಾಖಲೆ ಕೊಟ್ಟ

1970ರಲ್ಲಿ ಸರ್ಕಾರ ಪ್ರಮೀಳಾ ಅವರ ತಾಯಿಗೆ ಬನಶಂಕರಿ 2ನೇ ಹಂತದಲ್ಲಿ 45X70 ಅಡಿ ಅಳತೆಯ ಬಿಡಿಎ ನಿವೇಶನ ಮಂಜೂರು ಮಾಡಿತ್ತು. ಕೆಲದಿನಗಳ ನಂತರ ಅವರು ನಿವೇಶನವನ್ನು ಪ್ರಮೀಳಾ ಹೆಸರಿಗೆ ಮಾಡಿಕೊಟ್ಟಿದ್ದರು. ಆ ನಂತರ ಅವರು ಜಾಗ ಅಭಿವೃದ್ಧಿಪಡಿಸದೆ ಖಾಲಿ ಬಿಟ್ಟಿದ್ದರು. ಇತ್ತೀಚೆಗೆ ಆ ಖಾಲಿ ನಿವೇಶನದ ಮೇಲೆ ಭೂಗಳ್ಳರ ಕಣ್ಣು ಬಿದ್ದಿತ್ತು.

ರಿಯಲ್ ಎಸ್ಟೇಟ್ ಏಜೆಂಟ್‌ಗಳು ಬಿಡಿಎ ‘ಡಿ’ ಗ್ರೂಪ್‌ ನೌಕರ ಮರಿಯಪ್ಪನಿಗೆ ₹4 ಸಾವಿರ ಕೊಟ್ಟು ನಿವೇಶನದ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಪಡೆದುಕೊಂಡಿದ್ದರು. ನಂತರ, ಪ್ರಮೀಳಾ ಅವರ ತಾಯಿಯು ವೆಂಕಟಸ್ವಾಮಿಗೆ ಜಿಪಿಎ ಹಾಗೂ ಮಾರಾಟ ನೋಂದಣಿ ಮಾಡಿಕೊಟ್ಟಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಬಳಿಕ ಆ ಕಾಗದ ಪತ್ರಗಳನ್ನು ಕಲರ್ ಜೆರಾಕ್ಸ್ ಮಾಡಿಸಿ, ನಿವೇಶನ ಮಾರಾಟಕ್ಕೆ ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿವೇಶನ ಖರೀದಿಗೆ ಮುಂದಾಗಿದ್ದ ಹರಿರೆಡ್ಡಿ ಎಂಬುವರು, ನ.16ರಂದು ಪ್ರಮೀಳಾ ಅವರನ್ನು ಸಂಪರ್ಕಿಸಿದ್ದರು. ‘ನಿಮ್ಮ ತಾಯಿ ನಿವೇಶನವನ್ನು ವೆಂಕಟಸ್ವಾಮಿ ಅವರಿಗೆ ಜಿಪಿಎ ಮಾಡಿಕೊಟ್ಟಿದ್ದರೆ’ ಎಂದು ಪ್ರಶ್ನಿಸಿದ್ದರು. ಇದರಿಂದ ಆತಂಕಗೊಂಡ ಅವರು, ‘ನನ್ನ ತಾಯಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ನಾವು ನಿವೇಶನ ಮಾರಾಟ ಮಾಡುತ್ತಿಲ್ಲ’ ಎಂದು ಉತ್ತರಿಸಿದ್ದರು. ಬಳಿಕ ಬನಶಂಕರಿ ಠಾಣೆಯ ಮೆಟ್ಟಿಲೇರಿ, ‘ನಿವೇಶನ ಕಬಳಿಕೆಗೆ ಸಂಚು ನಡೆಯುತ್ತಿದೆ’ ಎಂದು ದೂರು ಕೊಟ್ಟಿದ್ದರು.

ಪೊಲೀಸರು ಹರಿರೆಡ್ಡಿ ಅವರನ್ನು ವಿಚಾರಣೆ ನಡೆಸಿದಾಗ ವೆಂಕಟಸ್ವಾಮಿ ಸಿಕ್ಕಿಬಿದ್ದಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ನಂತರ ಒಬ್ಬೊಬ್ಬರನ್ನೇ ವಶಕ್ಕೆ ಪಡೆದಿದ್ದಾರೆ. ‘ಹಣದ ಆಸೆಗೆ ಬಿದ್ದು ದಾಖಲೆಗಳನ್ನು ಕೊಟ್ಟಿದ್ದೆ’ ಎಂದು ಮರಿಯಪ್ಪ ತಪ್ಪೊಪ್ಪಿಕೊಂಡಿದ್ದು, ಎಲ್ಲರೂ ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT