ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಸಿಗದ ಬಿಡಿಎ ಅಧಿಕಾರಿಗಳು: ನಿವೇಶನದಾರರ ಆರೋಪ

ಅರ್ಕಾವತಿ ಬಡಾವಣೆ 18ನೇ ಬ್ಲಾಕ್‌
Last Updated 21 ಮೇ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದನ್ನು ಪ್ರಶ್ನಿಸಲು ಆರ್‌.ಟಿ.ನಗರದ ಬಿಡಿಎ ಕಚೇರಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ಅರ್ಕಾವತಿ ಬಡಾವಣೆ ನಿವೇಶನದಾರರ ಸಂಘವು ಆರೋಪಿಸಿದೆ.

‘ಸಾಕಷ್ಟು ಹೋರಾಟಗಳ ಬಳಿಕ ಬಿಡಿಎ ಅರ್ಕಾವತಿ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಆರಂಭಿಸಿತ್ತು. ಈ ಬಡಾವಣೆಯ 18ನೇ ಬ್ಲಾಕ್‌ನಲ್ಲಿ 2017ರ ನವೆಂಬರ್‌ನಿಂದ ಕೆಲಸವನ್ನು ದಿಢೀರ್‌ ಸ್ಥಗಿತಗೊಳಿಸಲಾಗಿದೆ. ನಮಗೆ ತಿಳಿದಂತೆ 18ನೇ ಬ್ಲಾಕ್‌ನಲ್ಲಿ ಬಿಡಿಎ ಯಾರಿಗೂ ಪರಿಹಾರ ನೀಡಲು ಬಾಕಿ ಇಲ್ಲ. ಇಲ್ಲಿನ ಎಲ್ಲ ನಿವೇಶನಗಳೂ ವ್ಯಾಜ್ಯಮುಕ್ತವಾಗಿವೆ. ಆದರೂ ಮೂಲಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿಲ್ಲ’ ಎಂದು ಅರ್ಕಾವತಿ ಬಡಾವಣೆ ನಿವೇಶನದಾರರ ಸಂಘದ ಜಿ.ಶಿವಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘18ನೇ ಬ್ಲಾಕ್‌ನ ಬೈರತಿಕಾನೆ ಗ್ರಾಮದಲ್ಲಿ ಕೆಲಸ ಸ್ಥಗಿತಗೊಂಡ ಬಗ್ಗೆ ವಿಚಾರಿಸಲು ಅಧಿಕಾರಿಗಳನ್ನು ಭೇಟಿಯಾಗುವ ಸಲುವಾಗಿ ಮಂಗಳವಾರ ಆರ್‌.ಟಿ.ನಗರದ ಬಿಡಿಎ ಕಚೇರಿಗೆ ಹೋಗಿದ್ದೆವು. ಅಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಇದ್ದರು. ಅವರಲ್ಲಿ ವಿಚಾರಿಸಿದಾಗ, ‘ಎಲ್ಲ ಅಧಿಕಾರಿಗಳು ಕ್ಷೇತ್ರಕಾರ್ಯಕ್ಕೆ ತೆರಳಿದ್ದಾರೆ’ ಎಂದು ತಿಳಿಸಿದರು. ನಿವೇಶನದಾರರು ಪ್ರತಿ ಬಾರಿ ಈ ಕಚೇರಿಗೆ ತೆರಳಿದಾಗಲೂ ಇದೇ ರೀತಿ ಆಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈ ಬಗ್ಗೆ ಬಿಡಿಎ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿ ಆದಾಗ ‘ಈ ಬಡಾವಣೆಗೆ ಭೂಮಿ ಬಿಟ್ಟುಕೊಟ್ಟ ಕುಟುಂಬದವರು ಕೆಲಸ ಮಾಡಲು ಬಿಡುತ್ತಿಲ್ಲ’ ಎಂಬ ಸಿದ್ಧ ಉತ್ತರವನ್ನು ನೀಡಿದ್ದಾರೆ. ಹಿರಿಯ ಅಧಿಕಾರಿಗಳೂ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ’ ಎಂದರು.

‘ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸೂಕ್ತ ಪರಿಹಾರ ನೀಡುವುದು ಬಿಡಿಎ ಕರ್ತವ್ಯ. ಒಂದು ವೇಳೆ, ಪರಿಹಾರ ನೀಡುವ ವಿಚಾರದಲ್ಲಿ ಗೊಂದಲಗಳಿದ್ದರೆ, ಅದನ್ನು ಬಗೆಹರಿಸಿಕೊಳ್ಳಬೇಕಾದುದೂ ಪ್ರಾಧಿಕಾರದ ಜವಾಬ್ದಾರಿ. ಈ ಬಡಾವಣೆಗೆ 2004ರಲ್ಲಿ ಭೂಸ್ವಾಧೀನ ನಡೆದಿದೆದೆ. 15 ವರ್ಷಗಳ ಬಳಿಕವೂ ಭೂಪರಿಹಾರದ ವಿಚಾರದಲ್ಲಿ ವಿವಾದ ಬಗೆಹರಿಸಲಾಗುತ್ತಿಲ್ಲ ಎಂದರೆ ಏನರ್ಥ?’ ಎಂದು ಇನ್ನೊಬ್ಬರು ನಿವೇಶನದಾರರು ಪ್ರಶ್ನಿಸಿದರು.

‘18ನೇ ಬ್ಲಾಕ್‌ನಲ್ಲಿ ನಿವೇಶನ ಮಂಜೂರಾದವರು ಇನ್ನೂ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ನಿವೇಶನಗಳನ್ನು ಗುರುತಿಸುವ ಕೆಲಸವೂ ನಡೆದಿಲ್ಲ. ಇಲ್ಲಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್‌, ಮಳೆನೀರು ಚರಂಡಿ, ಒಳಚರಂಡಿ ಸೇರಿದಂತೆ ಯಾವುದೇ ಸೌಕರ್ಯವನ್ನು ಇನ್ನೂ ಕಲ್ಪಿಸಿಲ್ಲ. ಹಾಗಿ ರುವಾಗ ಮನೆ ನಿರ್ಮಿಸುವುದಾದರೂ ಹೇಗೆ?’ ಎಂದು ಅವರು ಪ್ರಶ್ನಿಸಿದರು.

‘ವಿವಾದ ಶೀಘ್ರ ಇತ್ಯರ್ಥಪಡಿಸುತ್ತೇವೆ’

‘ಅರ್ಕಾವತಿ ಬಡಾವಣೆಯ 18ನೇ ಬ್ಲಾಕ್‌ನಲ್ಲಿ ಪರಿಹಾರದ ವಿಚಾರದಲ್ಲಿ ಅಸಮಾಧಾನ ಹೊಂದಿರುವ ಕೆಲವು ಭೂಮಾಲೀಕರು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ನಮ್ಮ ಎಂಜಿನಿಯರ್‌ಗಳು, ಭೂಸ್ವಾಧೀನ ವಿಭಾಗದ ಅಧಿಕಾರಿಗಳು ಜೊತೆ ಚರ್ಚಿಸಿ ಶೀಘ್ರವೇ ವಿವಾದವನ್ನು ಬಗೆಹರಿಸುತ್ತೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ವಿನಾಯಕ ಸುಗೂರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT