ವಿವಾದಿತ ಜಾಗದಲ್ಲಿ ಬಿಡಿಎ ನಿವೇಶನ

7
ನಾಡಪ್ರಭು ಕೆಂಪೇಗೌಡ ಬಡಾವಣೆ: ಆತಂಕಕ್ಕೊಳಗಾಗಿದ್ದಾರೆ ನಿವೇಶನದಾರರು l ಸಾಲ ಸೌಲಭ್ಯವೂ ಮರೀಚಿಕೆ !

ವಿವಾದಿತ ಜಾಗದಲ್ಲಿ ಬಿಡಿಎ ನಿವೇಶನ

Published:
Updated:
Deccan Herald

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆದ ಸಾವಿರಾರು ಮಂದಿ, ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯಗಳಿಂದಾಗಿ ಅದನ್ನು ಕಳೆದುಕೊಂಡ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ (ಎನ್‌ಪಿಕೆ) ಬಡಾವಣೆಯಲ್ಲೂ ಇಂತಹದ್ದೇ ದೂರುಗಳು ಕೇಳಿಬಂದಿವೆ.

ಎನ್‌ಪಿಕೆ ಬಡಾವಣೆಯಲ್ಲೂ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯಗಳಿರುವ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಇಲ್ಲಿ ನಿವೇಶನ ಪಡೆದ ಕೆಲವರು ದೂರಿದ್ದಾರೆ.

‘ಬಡಾವಣೆಯ ಎರಡನೇ ಹಂತದ ಬ್ಲಾಕ್‌ 1ರಲ್ಲಿ ನನಗೆ 30 X40 ಚದರ ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿದೆ. ಯಶವಂತಪುರ ಹೋಬಳಿಯ ಕನ್ನಳ್ಳಿಯ ಸರ್ವೆ ನಂಬರ್‌ 103ರಲ್ಲಿ ಈ ನಿವೇಶನವಿದೆ. ಈ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಮುಂದೇನಾಗುತ್ತದೋ ಗೊತ್ತಿಲ್ಲ’ ಎಂದು ಎನ್‌.ಅಶೋಕ್‌ ಆತಂಕ ವ್ಯಕ್ತಪಡಿಸಿದರು.

ಸರ್ವೆ ನಂಬರ್‌ 103ರ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿ ರೇಣುಕಾ ಪ್ರಸಾದ್‌ ಎಂಬುವರು ದಾವೆ ಹೂಡಿದ್ದರು. ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ತಾಯಿಗೆ ಪಾಲು ಸಿಕ್ಕಿಲ್ಲ ಎಂಬುದು ಅವರ ವಾದ.

‘ಈ ಜಮೀನಿನ ಮಾಲೀಕರನ್ನು ಸಂಪರ್ಕಿಸಿದ್ದೆವು. ಈ ಜಾಗಕ್ಕೆ ಸಂಬಂಧಿಸಿ 2007ರಿಂದಲೇ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಿವಾದಿತ ಜಾಗದಲ್ಲಿ 15ಕ್ಕೂ ಅಧಿಕ ನಿವೇಶನಗಳನ್ನು ಬಿಡಿಎ ನಿರ್ಮಿಸಿದೆ’ ಎಂದು ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಾದದ ಬಗ್ಗೆ ಗೊತ್ತಿದ್ದೂ ಪ್ರಾಧಿಕಾರದ ಅಧಿಕಾರಿಗಳು ಅದೇ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿದ್ದು ಏಕೆ? ಅವುಗಳನ್ನು ಹಂಚಿಕೆ ಮಾಡಿದ್ದು ಹೇಗೆ’ ಎಂದು ಅವರು ಪ್ರಶ್ನಿಸಿದರು. 

ಬಡಾವಣೆಯ ಬ್ಲಾಕ್‌–1 ಎಚ್‌ ವಿಭಾಗದಲ್ಲಿ ಅವಿನಾಶ್‌ ಅವರ ತಂದೆ ಅರುಣ್‌ ಕುಮಾರ್‌ ಅವರಿಗೆ 30x40 ಚದರ ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿದೆ. ಈ ನಿವೇಶನವೂ ಸರ್ವೆ ನಂಬರ್‌  103ರಲ್ಲಿದ್ದು, ಅವರೂ ಚಿಂತೆಗೀಡಾಗಿದ್ದಾರೆ.

‘ಎಂಟನೇ ಪ್ರಯತ್ನದಲ್ಲಿ ನನ್ನ ತಂದೆಗೆ ಬಿಡಿಎ ನಿವೇಶನ ಸಿಕ್ಕಿದೆ. ಇದು ವಿವಾದಿತ ಜಾಗದಲ್ಲಿರುವ ಬಗ್ಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ಉಪಕಾರ್ಯದರ್ಶಿ–2 ವಿಭಾಗದ  ಅಧಿಕಾರಿಯನ್ನು ಪ್ರಶ್ನಿಸಿದ್ದೆವು. ಹಂಚಿಕೆ ಪತ್ರ ಕೈ ಸೇರಿದ ಬಳಿಕ ಈ ನಿವೇಶನದ ಪೂರ್ಣ ಶುಲ್ಕ ಪಾವತಿಸಿ. ಆಮೇಲೆ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುವಂತೆ ಅವರು ಸಲಹೆ ನೀಡಿದರು’ ಎಂದು ‌ಅವಿನಾಶ್‌ ತಿಳಿಸಿದರು.

‘ವ್ಯಾಜ್ಯದಲ್ಲಿರುವ ಜಾಗಕ್ಕೆ ಶುಲ್ಕ ಪಾವತಿಸುವುದು ಮೂರ್ಖತನವಲ್ಲವೇ? ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಯಾರು ಹೊಣೆ? ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಹಗರಣಗಳು ನಮ್ಮ ಕಣ್ಣಮುಂದೆಯೇ ಇವೆ. ಹಾಗಾಗಿ ನಮಗೆ ವ್ಯಾಜ್ಯಮುಕ್ತವಾದ ನಿವೇಶನ ನೀಡಿದರೆ ಮಾತ್ರ ಪೂರ್ಣ ಪ್ರಮಾಣದ ಶುಲ್ಕ ಪಾವತಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು. ‘ನಾವು ಶುಲ್ಕ ಪಾವತಿಸಲು ಬ್ಯಾಂಕ್‌ ಸಾಲ ಪಡೆಯಬೇಕಾಗುತ್ತದೆ. ವಿವಾದಿತ ಜಾಗಕ್ಕೆ ಯಾವುದಾದರೂ ಬ್ಯಾಂಕ್‌ ಸಾಲ ನೀಡುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಸಾಲ ಪಡೆಯಲು ಇರುವ ತೊಡಕಿನ ಬಗ್ಗೆ ಬಿಡಿಎ ಅಧಿಕಾರಿಯೊಬ್ಬರ ಬಳಿ ಈ ಬಗ್ಗೆ ಚರ್ಚಿಸಿದೆವು. ಸಾಲಕ್ಕೂ ಬಿಡಿಎಗೂ ಸಂಬಂಧ ಇಲ್ಲ. ಪೂರ್ಣ ಪ್ರಮಾಣದ ಶುಲ್ಕ ಪಾವತಿಸುವುದು  ನಿಮ್ಮ ಜವಾಬ್ದಾರಿ ಎಂದು ಆ ಅಧಿಕಾರಿ ಕಡ್ಡಿ ಮುರಿದಂತೆ ಹೇಳಿದರು. ನಾವೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ’ ಎಂದು  ಅಸಹಾಯಕತೆ ವ್ಯಕ್ತಪಡಿಸಿದರು.

‘ವ್ಯಾಜ್ಯದಿಂದ ಸಮಸ್ಯೆ ಇಲ್ಲ’
‘ಈ ಬಡಾವಣೆಯಲ್ಲಿ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿರುವ ಪ್ರಕರಣ ಒಂದೂ ಇಲ್ಲ. ಸರ್ವೆ ನಂಬರ್‌ 103ರ ಜಾಗದ ಮಾಲೀಕತ್ವದ ಪ್ರಕರಣ ರೇಣುಕಾ ಪ್ರಸಾದ್‌ ಹಾಗೂ ಅವರ ಬಂಧುಗಳ ನಡುವಿನದ್ದು. ಇದೊಂದು ಸಿವಿಲ್‌ ವ್ಯಾಜ್ಯ. ಇದರಿಂದ ಇಲ್ಲಿ ನಿವೇಶನ ಪಡೆಯುವವರಿಗೆ ಸಮಸ್ಯೆ ಎದುರಾಗದು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಡಿಎ ಭೂಸ್ವಾಧೀನ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಟ್ಟಿಯಲ್ಲಿ ಈ ಸರ್ವೆ ನಂಬರ್‌ಗಳಿಲ್ಲ’
ಎನ್‌ಪಿಕೆ ಬಡಾವಣೆಗಾಗಿ ಬಿಡಿಎ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ವಿವರವನ್ನು ಒಳಗೊಂಡ ಪುಸ್ತಕದಲ್ಲಿ ಕನ್ನಳ್ಳಿ ಗ್ರಾಮದಲ್ಲಿ ವ್ಯಾಜ್ಯ ಇರುವ ಸರ್ವೆ ನಂಬರ್‌ಗಳ ಉಲ್ಲೇಖವಿಲ್ಲ.

ಈ ಪುಸ್ತಕದಲ್ಲಿ ಸರ್ವೆ ನಂಬರ್‌ 94ರ ಜಮೀನಿನ ಬಳಿಕ ನೇರವಾಗಿ ಸರ್ವೆ ನಂಬರ್‌ 105ರ ಜಮೀನಿನ ವಿವರ ನೀಡಲಾಗಿದೆ.

‘ಈ ಪುಸ್ತಕದಲ್ಲಿ ವಿವರಗಳಿಲ್ಲದಿರುವುದು ನೋಡಿದರೆ, ಸರ್ವೆ ನಂಬರ್‌ 103ರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವುದೇ ಅನುಮಾನ’ ಎಂದು ಅಶೋಕ್‌ ತಿಳಿಸಿದರು.

ಬಿಡಿಎಗೆ ಸಂಬಂಧಿಸಿದಂತೆ ಹೈಕೋರ್ಟ್‌ ಹಾಗೂ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾ ಪ್ರಸಾದ್‌ ಹಾಗೂ ಬಿಡಿಎ ನಡುವೆ ಜಾಗದ ವಿವಾದದ ಕುರಿತ ವಿವರಗಳಿವೆ.

*
ನಾವು ಪೂರ್ಣ ಪ್ರಮಾಣದ ಶುಲ್ಕ ಪಾವತಿಸಬೇಕಾದರೆ, ಈಗ ಹಂಚಿಕೆ ಮಾಡಿದ ನಿವೇಶನದ ಬದಲು ಬಿಡಿಎ ನಮಗೆ ವ್ಯಾಜ್ಯದಿಂದ ಮುಕ್ತವಾದ ನಿವೇಶನ ನೀಡಬೇಕು. 
-ಅಶೋಕ್‌, ಎನ್‌ಪಿಕೆ ಬಡಾವಣೆಯ ನಿವೇಶನದಾರ

ಅಂಕಿ ಅಂಶ
₹ 23.25 ಲಕ್ಷ – ಎನ್‌ಪಿಕೆ ಬಡಾವಣೆಯಲ್ಲಿ 30x40 ಚದರ  ಅಡಿ ವಿಸ್ತೀರ್ಣದ ನಿವೇಶನದ ಶುಲ್ಕ
₹ 2.96 ಲಕ್ಷ–  ಆರಂಭಿಕ ಠೇವಣಿಯ ಮೊತ್ತ
ವಿವಾದಿತ ಜಾಗಗಳು: ಯಶವಂತಪುರ ಹೋಬಳಿ–2ರ ಕನ್ನಳ್ಳಿ ಗ್ರಾಮದ ಸರ್ವೆ ನಂಬರ್‌  49, 98, 100/1, 101/2, 102/1, 102/2,  103, 104, 107, ಹಾಗೂಬ 108 ಕೊಡಗೆಹಳ್ಳಿ ಗ್ರಾಮದ ಸರ್ವೆ ನಂಬರ್‌ 70/6

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !