ಉಪಮುಖ್ಯಮಂತ್ರಿ ಪರಮೇಶ್ವರ ಮಾತುಕತೆ: ಧರಣಿ ಕೈಬಿಟ್ಟ ರೈತರು

ಬುಧವಾರ, ಮಾರ್ಚ್ 27, 2019
26 °C

ಉಪಮುಖ್ಯಮಂತ್ರಿ ಪರಮೇಶ್ವರ ಮಾತುಕತೆ: ಧರಣಿ ಕೈಬಿಟ್ಟ ರೈತರು

Published:
Updated:
Prajavani

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ ಜಾಗ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಶಿವರಾಮ ಕಾರಂತ ಬಡಾವಣೆ ನಿರ್ಮಿಸುವ ಯೋಜನೆಯನ್ನು ಕೈಬಿಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಬಳಿ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ರೈತರು ಬುಧವಾರ ಕೈಬಿಟ್ಟಿದ್ದಾರೆ.

ಪಿಆರ್‌ಆರ್‌ ಹಾಗೂ ಶಿವರಾಮ ಕಾರಂತ ಬಡಾವಣೆಯ ಸಂತ್ರಸ್ತ ರೈತರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಆಹೋರಾತ್ರಿ ಧರಣಿ ಆರಂಭಿಸಿದ್ದರು. ಬಿಡಿಎ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌ ಅವರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದಾಗ, ‘ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯವರಿಂದಲೇ ಖಚಿತ ಭರವಸೆ ಸಿಗದ ಹೊರತು ಧರಣಿ ನಿಲ್ಲಿಸುವುದಿಲ್ಲ’ ಎಂದು ಖಡಾಖಂಡಿತಾವಾಗಿ ಹೇಳಿದ್ದರು. ಹಾಗಾಗಿ ಬುಧವಾರವೂ ಧರಣಿ ಮುಂದುವರಿದಿತ್ತು. ರೈತರು ಮಧ್ಯಾಹ್ನವೂ ಧರಣಿಯ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡಿದ್ದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ರಾತ್ರಿ 7 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರ ಜೊತೆ ಮಾತುಕತೆ ನಡೆಸಿದರು.

‘ಯಾವುದೇ ಕಾರಣಕ್ಕೂ ಪಿಆರ್‌ಆರ್‌ ಯೊಜನೆ ಕೈಬಿಡುವುದಿಲ್ಲ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಶಿವರಾಮ ಕಾರಂತ ಬಡಾವಣೆಯ ವಸ್ತುಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಪರಮೇಶ್ವರ ಭರವಸೆ ನೀಡಿದರು.

‘ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ರೈತ ಮುಖಂಡರ ಜೊತೆ ಸಭೆ ನಡೆಸಬೇಕು ಎಂದು ನಾವು ಕೇಳಿಕೊಂಡಿದ್ದೇವೆ. ಗುರುವಾರ ಸಂಜೆ ಒಳಗೆ ಸಭೆಗೆ ದಿನಾಂಕ ಗೊತ್ತುಪಡಿಸುವುದಾಗಿ ಪರಮೇಶ್ವರ ಅವರು ತಿಳಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾವು ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !