ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ನಿವೇಶನಗಳಲ್ಲಿ ಒತ್ತುವರಿ ತೆರವು ಇಲ್ಲ

ಪುಲಿಕೇಶಿನಗರ, ಎಚ್‌ಬಿಆರ್‌ ಬಡಾವಣೆ ನಿವಾಸಿಗಳು ನಿರಾಳ
Last Updated 29 ಮೇ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಪುಲಿಕೇಶಿನಗರ, ಎಚ್‌ಬಿಆರ್‌ ಬಡಾವಣೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ರಾಜಕಾಲುವೆ ಪಕ್ಕದಲ್ಲಿ ಕಟ್ಟಡ ನಿರ್ಮಿಸಿಕೊಂಡಿರುವವರು ಇನ್ನು ನಿಟ್ಟುಸಿರು ಬಿಡಬಹುದು. ಈ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಬಿಡಲುಬಿಬಿಎಂಪಿ ನಿರ್ಧರಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಬಿಬಿಎಂಪಿಯೂ ಸೇರಿದಂತೆ ವಿವಿಧ ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳು ಒತ್ತುವರಿ ತೆರವು ಕುರಿತು ಮಾಹಿತಿ ನೀಡಿದ್ದರು.

‘ನಗರದ ವ್ಯಾಪ್ತಿಯಲ್ಲಿ 2,515 ಕಡೆ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಒಟ್ಟು 714 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಬಿಡಿಎ ಬಡಾವಣೆಗಳಲ್ಲಿ ಹಂಚಿಕೆ ಮಾಡಲಾಗಿರುವ 124 ನಿವೇಶನಗಳು ಒತ್ತುವರಿ ಪ್ರದೇಶದಲ್ಲಿದ್ದು, ಇವುಗಳನ್ನು ತೆರವುಗೊಳಿಸುವ ಪ್ರಸ್ತಾಪ ಕೈಬಿಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಪಾಲಿಕೆ ಅಧಿಕಾರಿಗಳು ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ‘ಒತ್ತುವರಿ ಪತ್ತೆಗೆ ಯಲಹಂಕ ವಲಯದಲ್ಲಿ ಇತ್ತೀಚೆಗೆ 10 ದಿನ ಸಮೀಕ್ಷೆ ನಡೆಸಲಾಗಿದೆ. ಬಿಡಿಎ ನಿರ್ಮಿಸಿರುವ ಎಚ್‌ಬಿಆರ್‌ ಬಡಾವಣೆಯಲ್ಲಿ ಈ ಹಿಂದಿನ ಗ್ರಾಮನಕ್ಷೆಗಳಲ್ಲಿದ್ದ ರಾಜಕಾಲುವೆಯನ್ನು ಮರುವಿನ್ಯಾಸಗೊಳಿಸಿ ಅಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 124 ನಿವೇಶನಗಳು ಇಲ್ಲಿ ಮೂಲ ರಾಜಕಾಲುವೆಯ ವ್ಯಾಪ್ತಿಯಲ್ಲಿದ್ದವು. ಇಲ್ಲಿ ಬಿಡಿಎ ಹಂಚಿಕೆ ಮಾಡಿರುವ ಈ ನಿವೇಶನಗಳನ್ನು ಒತ್ತುವರಿ ಎಂದು ಪರಿಗಣಿಸಲು ಬರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಎಚ್‌ಬಿಆರ್‌ ಬಡಾವಣೆ, ಪುಲಕೇಶಿನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ರಾಜಕಾಲುವೆಯನ್ನು ಮರುವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇಲ್ಲಿ ಒತ್ತುವರಿ ಎಂದು ಗುರುತಿಸಿದ್ದ 124 ನಿವೇಶನಗಳನ್ನು ತೆರವುಗೊಳಿಸುವುದಿಲ್ಲ’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದರು.

1,801 ಕಡೆ ಒತ್ತುವರಿ ತೆರವು ಬಾಕಿ’

‘ಯಲಹಂಕ ವಲಯದಲ್ಲಿ ಇತ್ತೀಚೆಗೆ ಒತ್ತುವರಿ ತೆರವು ಅಭಿಯಾನ ನಡೆಸಿದ್ದೇವೆ. ಇಲ್ಲಿ ಆರು ಕಡೆ ತೆರವು ಮಾಡಲಾಗಿದೆ. ನಗರದಲ್ಲಿ ಇದುವರೆಗೆ ಗುರುತಿಸಿರುವ ಒತ್ತುವರಿಗಳ ಪೈಕಿ 1,801 ಕಡೆ ತೆರವು ಕಾರ್ಯ ಬಾಕಿ ಇದೆ. ಒತ್ತುವರಿ ಪತ್ತೆ ಹಚ್ಚುವ ಸಲುವಾಗಿ ನಡೆಯುತ್ತಿರುವ ಸರ್ವೆ ಕಾರ್ಯವೂ ಮುಕ್ತಾಯದ ಹಂತದಲ್ಲಿದ್ದು, ಶೀಘ್ರವೇ ಇಲ್ಲೂ ತೆರವು ಕಾರ್ಯಾಚರಣೆ ನಡೆಸಲಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT