ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಬದಲಿ ನಿವೇಶನ ಹಂಚಿಕೆ ಅಕ್ರಮ?

ರಾಜಕಾಲುವೆ ಮೀಸಲು ಪ್ರದೇಶದಲ್ಲಿ ನಿವೇಶನ ಹೊಂದಿಲ್ಲದವರಿಗೂ ಮತ್ತೊಂದು ಕಡೆ ಸೈಟ್‌ ಹಂಚಿಕೆ
Last Updated 23 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಹಂತದಲ್ಲಿ ಬದಲಿ ನಿವೇಶನ ಹಂಚಿಕೆ ವೇಳೆ ಅವ್ಯವಹಾರ ನಡೆದಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಅನೇಕರಿಗೆ ಯಾವುದೇ ಕಾರಣ ಇಲ್ಲದಿದ್ದರೂ ಬದಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂದು ಇಲ್ಲಿನ ನಿವೇಶನದಾರರು ದೂರಿದ್ದಾರೆ.

ಕೆರೆ ಮತ್ತು ರಾಜಕಾಲುವೆಗಳ ಮೀಸಲು (ಬಫರ್‌) ಪ್ರದೇಶಗಳಲ್ಲಿ ನಿವೇಶನ ಹಂಚಿಕೆಯಾಗಿದ್ದ ಬಗ್ಗೆ ಬಿಡಿಎಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ, ಮರು ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಆಯುಕ್ತ ರಾಕೇಶ್‌ ಸಿಂಗ್‌, ‘ಹಂಚಿಕೆಯಾಗಿದ್ದ ನಿವೇಶನಗಳು ರಾಜಕಾಲುವೆಯ ಮೀಸಲು ಪ್ರದೇಶದಲ್ಲಿರುವುದು ಕಂಡು ಬಂದರೆ ಅಂತಹವರಿಗೆ ಇದೇ ಬಡಾವಣೆಯ ಬೇರೆ ಕಡೆ ನಿವೇಶನ ಹಂಚಿಕೆ ಮಾಡಿ’ ಎಂದು ನಿರ್ದೇಶನ ನೀಡಿದ್ದರು.

ಆ ನಂತರ ಸರ್ವೆ ನಡೆಸಿದ್ದ ಅಧಿಕಾರಿಗಳು, ಭೀಮನಕುಪ್ಪೆ ಗ್ರಾಮದ (ಸರ್ವೆ ನಂಬರ್‌ 149) ಕೆರೆಯ 75 ಮೀ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಒಟ್ಟು 26 ನಿವೇಶನ ಹಂಚಿಕೆ ಆಗಿರುವುದನ್ನು ಗುರುತಿಸಿದ್ದರು. ಅದಲ್ಲದೇ ಇಲ್ಲಿ ರಾಜಕಾಲುವೆಯ 35 ಮೀ ಮೀಸಲು ಪ್ರದೇಶದಲ್ಲಿ ನಾಲ್ಕು ನಿವೇಶನಗಳಿರುವುದನ್ನೂ ಪತ್ತೆ ಹಚ್ಚಿಸಿದ್ದರು. ಬದಲಿ ನಿವೇಶನ ನೀಡುವ ಸಲುವಾಗಿ ಅಧಿಕಾರಿಗಳು ರಚಿಸಿರುವ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

6ನೇ ಬ್ಲಾಕ್‌ನ ಇ ಸೆಕ್ಟರ್‌ನಲ್ಲಿ 30 X40 ಚದರ ಅಡಿ ವಿಸ್ತೀರ್ಣದ 2383, 2443, 2444 ಹಾಗೂ 2502 ಸಂಖ್ಯೆಯನಿವೇಶನಗಳು (ಬಿಡಿಎ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಹಂಚಿಕೆ ಪಟ್ಟಿಯ ಪ್ರಕಾರ) ರಾಜಕಾಲುವೆಯ ಮೀಸಲು ಪ್ರದೇಶದಲ್ಲಿವೆ ಎಂದು ಗುರುತಿಸಲಾಗಿದೆ. ಅಚ್ಚರಿ ಎಂದರೆ ಈ ನಾಲ್ಕು ನಿವೇಶನಗಳೂ ವಾಸ್ತವದಲ್ಲಿ ಯಾವುದೇ ರಾಜಕಾಲುವೆಯ
ಮೀಸಲು ಪ್ರದೇಶದಲ್ಲಿಲ್ಲ. ಆದರೂ, ಇವುಗಳಿಗೆ ಕ್ರಮವಾಗಿ 6ನೇ ಬ್ಲಾಕ್‌ನ ಇ–ಸೆಕ್ಟರ್‌ನಲ್ಲಿ 5511/ಇ, 5511/ಎಫ್‌, 5511/ಜಿ, 5511/ ಎಚ್‌ ಸಂಖ್ಯೆಯ ಸೈಟ್‌ಗಳನ್ನು ನೀಡಲು ಬಿಡಿಎ ನಿರ್ಧರಿಸಿದೆ.

‘ಈ ನಿವೇಶನಗಳು ರಾಜಕಾಲುವೆಯ ಮೀಸಲು ಪ್ರದೇಶದಲ್ಲಿದ್ದರೆ, ಅಕ್ಕಪಕ್ಕದ ನಿವೇಶನಗಳೂ(ಉದಾಹರಣೆಗೆ ಸೈಟ್‌ ಸಂಖ್ಯೆ 2382 ಹಾಗೂ 2384) ಮೀಸಲು ಪ್ರದೇಶದಲ್ಲಿರಬೇಕಿತ್ತು. ಆದರೆ, ಇತರ ನಿವೇಶನಗಳ ನಡುವೆ ಇರುವ ಇವುಗಳನ್ನು ಮಾತ್ರ ಗುರುತಿಸಿ ಬದಲಿ ನಿವೇಶನ ನೀಡಲು ಹೊರಟಿರುವುದು ಸಂದೇಹಕ್ಕೆ ಕಾರಣವಾಗಿದೆ’ ಎಂದು 6ನೇ ಬ್ಲಾಕ್‌ನಲ್ಲಿ ನಿವೇಶನ ಪಡೆದವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರಿಗೆ ಬದಲಿ ನಿವೇಶನ ನೀಡಲು ಗುರುತಿಸಿರುವ ಸೈಟ್‌ಗಳು ಬಿಡಿಎ ವಾಣಿಜ್ಯ ಸಂಕೀರ್ಣಕ್ಕೆ ಕಾಯ್ದಿರಿಸಿದ ಜಾಗದ ಸಮೀಪದಲ್ಲಿವೆ’ ಎಂದು ಹೇಳಿದರು.

‘ಬದಲಿ ನಿವೇಶನದ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ’

ಕೆಂಪೇಗೌಡ ಬಡಾವಣೆಯಲ್ಲಿ ಯಾರಿಗೆ, ಎಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ವಿವರವನ್ನು ಬಿಡಿಎ ವೆಬ್‌ಸೈಟ್‌ನಲ್ಲಿ (http://bdabangalore.org) ಪ್ರಕಟಿಸಬೇಕು ಎಂದು ಈ ಬಡಾವಣೆಯ ನಿವೇಶನದಾರರು ಒತ್ತಾಯಿಸಿದ್ದಾರೆ.

‘ಬಿಡಿಎ ಅಧಿಕಾರಿಗಳು ಕೆಲವರಿಂದ ದುಡ್ಡು ಪಡೆದು ಬದಲಿ ನಿವೇಶನ ನೀಡುತ್ತಿದ್ದಾರೆ. ಯಾರಿಗೆಲ್ಲ ಬದಲಿ ನಿವೇಶನ ನೀಡಲಾಗುತ್ತಿದೆ ಎಂಬ ವಿವರವನ್ನು ಕೇಳಿದರೂ ಒದಗಿಸುತ್ತಿಲ್ಲ. ಇದರ ಹಿಂದೆ ಅವ್ಯವಹಾರ ನಡೆಯುತ್ತಿರುವ ಶಂಕೆ ಇದೆ’ ಎಂದು ನಿವೇಶನದಾರರೊಬ್ಬರು ತಿಳಿಸಿದರು.

‘ಬದಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಅವ್ಯವಹಾರ ನಡೆಯುವುದು ಇದೇ ಮೊದಲಲ್ಲ. ಬಿಡಿಎ ಈ ಹಿಂದೆ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲೂ ಅಧಿಕಾರಿಗಳು ಇದೇ ರೀತಿ ಅವ್ಯವಹಾರ ನಡೆಸಿದ್ದಾರೆ’ ಎಂದೂ ಆರೋಪಿಸಿದರು.

‘ಈ ಹಿಂದೆ, ಕೆಲವು ಬಡಾವಣೆಗಳಿಗೆ ರಸ್ತೆ, ಮೋರಿ ಮತ್ತಿತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಿಡಿಎ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆಸದೆಯೇ ಜಾಗವನ್ನು ಬಳಸಿಕೊಂಡಿತ್ತು. ಜಾಗ ಕಳೆದುಕೊಂಡವರಿಗೆ ಬದಲಿ ನಿವೇಶನ ನೀಡುವ ವಿಚಾರದಲ್ಲಿ ಅವ್ಯವಹಾರ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು ಶಶಿಧರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅಕ್ರಮ ನಡೆದಿರುವುದನ್ನು ಸಮಿತಿಯ ವರದಿಯೂ ಖಚಿತಪಡಿಸಿತ್ತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT