ಕಾನ್‌ಸ್ಟೆಬಲ್‌ಗೆ ಥಳಿಸಿದ ಭೂಗತ ಪಾತಕಿ !

7
ಕೋರ್ಟ್‌ ಆವರಣದಲ್ಲಿ ಜನ್ಮದಿನ ಆಚರಣೆಗೆ ಮುಂದಾಗಿದ್ದ ಬಚ್ಚಾಖಾನ್; ದೂರು– ಪ್ರತಿದೂರು ದಾಖಲು

ಕಾನ್‌ಸ್ಟೆಬಲ್‌ಗೆ ಥಳಿಸಿದ ಭೂಗತ ಪಾತಕಿ !

Published:
Updated:
Deccan Herald

ಬೆಂಗಳೂರು: ಕೋರ್ಟ್‌ ಆವರಣದಲ್ಲೇ ಜನ್ಮದಿನ ಆಚರಣೆ ವಿಚಾರವಾಗಿ ಭೂಗತ ಪಾತಕಿ ಯುಸೂಫ್ ಬಚ್ಚಾಖಾನ್ ಹಾಗೂ ಪೊಲೀಸರ ನಡುವೆ ಶುಕ್ರವಾರ ಗಲಾಟೆ ಆಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಾಗಿದೆ.

ಉದ್ಯಮಿ ಸುಬ್ಬರಾವ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಚ್ಚಾಖಾನ್‌, ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ. ಬೆಂಗಳೂರಿನ ಕೆಲ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿದ್ದ ಆರೊಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗಾಗಿ ಆತನನ್ನು ಮಧ್ಯಾಹ್ನ ಮೆಯೋಹಾಲ್ ಕೋರ್ಟ್‌ಗೆ ಕರೆತರಲಾಗಿತ್ತು.

ಕೇಕ್ ತಂದಿದ್ದರು: ಶುಕ್ರವಾರ ಬಚ್ಚಾಖಾನ್‌ನ ಜನ್ಮದಿನವಾಗಿದ್ದರಿಂದ ಸಂಬಂಧಿಕರು ಹಾಗೂ ಸಹಚರರು ಕೇಕ್‌ನೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದರು.

‘ಜೀಪಿನಿಂದ ಇಳಿಯುತ್ತಿದ್ದಂತೆಯೇ ಸಂಬಂಧಿಕರನ್ನು ಕಂಡು ಸಂತಸಗೊಂಡ ಬಚ್ಚಾಖಾನ್, ಅವರ ಯೋಗಕ್ಷೇಮ ವಿಚಾರಿಸಿ ನಂತರ ಕೇಕ್ ಕತ್ತರಿಸಲು ಮುಂದಾಗಿದ್ದ. ಈ ವೇಳೆ ಸಹಚರರು ಸೆಲ್ಫಿ ತೆಗೆದುಕೊಳ್ಳಲು ಮೊಬೈಲ್‌ಗಳನ್ನು ಕೈಗೆತ್ತಿಕೊಂಡರು. ಫೋಟೊ ತೆಗೆದುಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನ್‌ಸ್ಟೆಬಲ್‌, ಕೈಕೋಳ ಹಿಡಿದುಕೊಂಡು ಆತನನ್ನು ಕೋರ್ಟ್‌ನೊಳಗೆ ಕರೆದೊಯ್ಯಲು ಮುಂದಾಗಿದ್ದರು. ಈ ಹಂತದಲ್ಲಿ ಕೋಪಗೊಂಡ ಆತ, ಅವರ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ. ಮಧ್ಯಪ್ರವೇಶಿಸಿದ ಇತರೆ ಪೊಲೀಸರಿಂದಗೂ ಗಲಾಟೆ ಪ್ರಾರಂಭಿಸಿದ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಮಾಹಿತಿ ಪಡೆದ ನ್ಯಾಯಾಧೀಶರು: ನ್ಯಾಯಾಲಯದ ಆವರಣದಲ್ಲೇ ನಡೆದ ಗಲಾಟೆ ವಿಷಯ ನ್ಯಾಯಾಧೀಶರ ಗಮನಕ್ಕೆ ಬಂದಿತ್ತು.  ಬಚ್ಚಾಖಾನ್ ಹಾಗೂ ಕಾನ್‌ಸ್ಟೆಬಲ್‌ರನ್ನು ಕರೆಸಿಕೊಂಡ ನ್ಯಾಯಾಧೀಶರು, ಗಲಾಟೆ ಬಗ್ಗೆ ಮಾಹಿತಿ
ಪಡೆದುಕೊಂಡರು.

‘ಜನ್ಮದಿನ ಆಚರಣೆಗೆ ಅನುಕೂಲ ಮಾಡಿಕೊಡುವುದಾಗಿ ಪೊಲೀಸರು ನನ್ನಿಂದ ಹಣ ಪಡೆದಿದ್ದರು. ಇಲ್ಲಿಗೆ ಬಂದ ನಂತರ ಅವಕಾಶ ಕೊಡಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಜೊತೆಯೇ ಜಗಳ ತೆಗೆದರು. ಸಂಬಂಧಿಕರ ಮೇಲೂ ಹಲ್ಲೆ ನಡೆಸಲು ಮುಂದಾದರು’ ಎಂದು ಬಚ್ಚಾಖಾನ್ ನ್ಯಾಯಾಧೀಶರ ಮುಂದೆ ಹೇಳಿದನು.

ಆ ಆರೋಪ ಅಲ್ಲಗೆಳೆದ ಕಾನ್‌ಸ್ಟೆಬಲ್, ‘ಬಚ್ಚಾಖಾನ್‌ ನಮಗೆ ಹೆದರಿಸಿ ಸಂಬಂಧಿಕರ ಬಳಿ ಹೋಗಿದ್ದ. ಸಹಚರರ ಫೋಟೊ ತೆಗೆದುಕೊಳ್ಳಲು ಮುಂದಾದಾಗ ಆತನನ್ನು ಎಳೆದುಕೊಂಡು ಬಂದೆವು. ಮಾತನಾಡುತ್ತಿರುವಾಗಲೇ ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಿದ’ ಎಂದು ತಿಳಿಸಿದರು.

ಇಬ್ಬರ ಹೇಳಿಕೆ ಆಲಿಸಿದ ನ್ಯಾಯಾಧೀಶರು, ‘ಇಬ್ಬರೂ ಅಶೋಕನಗರ ಠಾಣೆಗೆ ದೂರು ನೀಡಿ’ ಎಂದು ಸೂಚನೆ ನೀಡಿದರು.

ಛೋಟಾ ರಾಜನ್ ಬಂಟ

ಕೊಲೆ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಚ್ಚಾಖಾನ್, ಭೂಗತ ಪಾತಕಿ ಛೋಟಾ ರಾಜನ್‌ನ ಬಂಟ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತನನ್ನು ಮೊದಲು ಬೆಳಗಾವಿ ಜೈಲಿನಲ್ಲಿರಿಸಲಾಗಿತ್ತು. ಅಲ್ಲೇ ಕುಳಿತು ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದ ಕಾರಣಕ್ಕೆ ಮೈಸೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !