ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ಹಾವಳಿ ನಿಯಂತ್ರಿಸಲು ವರ್ಷಕ್ಕೆ ₹ 697 ವೆಚ್ಚ

ವರ್ತೂರು, ಬೆಳ್ಳಂದೂರು ಕೆರೆಗಳ ಸುತ್ತಮುತ್ತಲಿನ ನಿವಾಸಿಗಳ ಅಳಲು
Last Updated 25 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರು ಕೆರೆ ಮತ್ತು ಬೆಳ್ಳಂದೂರು ಕೆರೆಗಳ ಆಸುಪಾಸಿನ ಕುಟುಂಬಗಳು ಸೊಳ್ಳೆ ನಿವಾರಕಗಳಿಗಾಗಿಯೇ ವರ್ಷಕ್ಕೆ ಸುಮಾರು ₹ 697 ಖರ್ಚು ಮಾಡುತ್ತಿವೆ.

ಕೆರೆ ಪುನರುಜ್ಜೀವನ ಸಂಬಂಧಿಸಿ ಅಧ್ಯಯನ ನಡೆಸಿದಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ನೇತೃತ್ವದ ತಜ್ಞರ ಸಮಿತಿ ಈ ಕುತೂಹಲಕರ ಮಾಹಿತಿಯನ್ನು ಹೊರಹಾಕಿದೆ.

‘ಕೆರೆಯ ನೀರಿನಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆದಿರುವ ಪಾಚಿ, ಹಾವಸೆ ಸಸ್ಯಗಳು, ಹರಿದು ಬರುತ್ತಿರುವ ಕೊಳಕು ನೀರಿನಲ್ಲಿ ಸಾಕಷ್ಟು ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗಿ ನಿವಾಸಿಗಳಿಗೆ ಕಾಟ ಕೊಡುತ್ತಿವೆ’ ಎಂದು ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

‘ಗೂಗಲ್‌ ಅರ್ತ್‌ನ ದೂರಸಂವೇದಿ ಮಾಹಿತಿ ಪ್ರಕಾರ, ಸದ್ಯ ಕೆರೆಯ ಬಹುಭಾಗವನ್ನು ಈ ಸಸ್ಯಗಳು ಆವರಿಸಿವೆ. ಬೇಸಿಗೆಯಲ್ಲಿ ಮುಕ್ಕಾಲು ಭಾಗವನ್ನು ಈ ಸಸ್ಯಗಳು ಆವರಿಸಿರುತ್ತವೆ’ ಎಂದೂ ವರದಿ ಉಲ್ಲೇಖಿಸಿದೆ.

‘ಕೆರೆಯಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆ ಪ್ರಮಾಣ ದಿಗಿಲು ಹುಟ್ಟಿಸುವಂತಿದೆ. ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ಭೇಟಿಯ ಸಂದರ್ಭದಲ್ಲೂ ನಮ್ಮ ಪರಿಸ್ಥಿತಿಯನ್ನು ಅವರಿಗೆ ಹೇಳಿದ್ದೆವು. ಇಲ್ಲಿ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ. ಸೊಳ್ಳೆ ಕಾಟದಿಂದ ಹೊರಗೆ ಹೆಜ್ಜೆಯಿಡಲೂ ಅಸಾಧ್ಯ’ ಎಂದು ಬೆಳ್ಳಂದೂರು ನಿವಾಸಿ ಸೋನಾಲಿ ಸಿಂಗ್‌ ಹೇಳಿದರು.

‘ನಮ್ಮ ಸಹಾಯಕರು, ಮನೆಕೆಲಸದವರು ಸೊಳ್ಳೆ ಕಾಟದಿಂದ ನಿದ್ದೆಯಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾವಲುಗಾರರ ಪರಿಸ್ಥಿತಿ ಇನ್ನೂ ಶೋಚನೀಯ. ಎಂಥ ನಿವಾರಕಗಳನ್ನು ಬಳಸಿದರೂ ಅವರು ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಕಲುಷಿತಗೊಂಡಿರುವ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆ ನಿವಾರಕಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಇಂಥ ಕೆರೆಗಳ ಪುನರುಜ್ಜೀವನಕ್ಕೆ ಹೆಚ್ಚು ಒತ್ತು ನೀಡಬೇಕು. ನಾನಂತೂ ಗಿಡಮೂಲಿಕೆಗಳಿಂದ ತಯಾರಿಸಲಾದ ಸೊಳ್ಳೆ ನಿವಾರಕಗಳಿಗಾಗಿ ಪ್ರತಿ ತಿಂಗಳೂ ₹ 1 ಸಾವಿರ ವೆಚ್ಚ ಮಾಡುತ್ತೇನೆ. ಕೆರೆಯಿಂದ ಸ್ವಲ್ಪ ದೂರವಿದ್ದರೂ ನಾವು ಸೊಳ್ಳೆ ನಿವಾರಕಗಳಿಗೆ ದುಬಾರಿ ವೆಚ್ಚ ಮಾಡಬೇಕಾಗುತ್ತದೆ’ ಎಂದು ಸೋನಾಲಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT