ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಕೆರೆ ಮೀಸಲು ಪ್ರದೇಶದಲ್ಲಿ ಬೆಂಕಿ

ಅಗ್ನಿಶಾಮಕ ದಳದಿಂದ ಎರಡು ತಾಸು ಕಾರ್ಯಾಚರಣೆ
Last Updated 30 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆಯ ಮೀಸಲು ಪ್ರದೇಶದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಆತಂಕದ ಸನ್ನಿವೇಶ ಸೃಷ್ಟಿಯಾಯಿತು.

ಸಂಜೆ 4.15ಕ್ಕೆ ಒಂದು ಭಾಗದಲ್ಲಿ ಹೊತ್ತಿಕೊಂಡ ಬೆಂಕಿ, ಕೆಲವೇ ಕ್ಷಣಗಳಲ್ಲಿ ವ್ಯಾಪಾಕವಾಗಿ ಹರಡಿಕೊಂಡಿತು. ಕೆರೆ ಕಾವಲಿಗಿದ್ದ ಮಾರ್ಷಲ್‌ಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಯಸಿಬ್ಬಂದಿ ಬೆಂಕಿ ನಂದಿಸಲು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದರು.

‘ನಾವು ಕೆರೆ ಹಾಗೂ ಮಿಸಲು ಪ್ರದೇಶದಲ್ಲಿ ಬೆಂಕಿ ನಂದಿಸಲು ಆರಂಭಿಸಿದೆವು. ಕೋರಮಂಗಲ ಕಡೆಗಿರುವ ಎಸ್‌ಟಿ ಬೆಡ್‌ ಪ್ರದೇಶದ ಕಡೆ ಬೆಂಕಿ ವ್ಯಾಪಿಸದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ನಂತರ ಮಂದಗತಿಯಲ್ಲಿ ಹಬ್ಬುತ್ತಿರುವ ಪ್ರದೇಶಗಳಲ್ಲಿಯೂ ನಂದಿಸಲು ಮುಂದಾದೆವು’ ಎಂದು ಮಾರ್ಷಲ್‌ ಒಬ್ಬರು ಮಾಹಿತಿ ನೀಡಿದರು.

‘ಮಾಹಿತಿ ಸಿಕ್ಕಿದ ಅರ್ಧಗಂಟೆಯಲ್ಲೇ ನಾವು ಸ್ಥಳಕ್ಕೆ ಧಾವಿಸಿದ್ದೆವು. ಆದರೆ, ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿದ್ದವು. ವಿಪರೀತ ಹಬ್ಬುತ್ತಿದ್ದ ಅದನ್ನು ನಿಯಂತ್ರಿಸಲು ಅರ್ಧ ಗಂಟೆ ಬೇಕಾಯಿತು’ ಎಂದು ಅವರು ತಿಳಿಸಿದರು.

10 ಬಾರಿ ಬೆಂಕಿ: ಬೆಳ್ಳಂದೂರು ಕೆರೆ ಹಾಗೂ ಮೀಸಲು ಪ್ರದೇಶದಲ್ಲಿ ಈ ವರ್ಷ 10 ಸಲ ಬೆಂಕಿ ಕಾಣಿಸಿಕೊಂಡಿದೆ. ಡಿಸೆಂಬರ್‌ ತಿಂಗಳಲ್ಲೇ ಎರಡನೇ ಬಾರಿ ಬೆಂಕಿ ಕಾಣಿಸಿಕೊಂಡಿದೆ.

‘ಇಬ್ಬಲೂರು ಭಾಗದಲ್ಲಿ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿರ್ಮಾಣ ನಡೆಯುತ್ತಿದೆ. ಈ ಕಾಮಗಾರಿ ಪ್ರದೇಶದ ಹಿಂಭಾಗದಲ್ಲಿ ಮೊದಲು ಬೆಂಕಿ ಕಾಣಸಿಕೊಂಡಿದೆ. ರಾಷ್ಟ್ರೀಯ ಹಸಿರು ನ್ಯಾಯ ಪೀಠವು ಇಲ್ಲಿ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸಿ ಸೂಚನೆ ನೀಡಿತ್ತು. ಆ ಬಳಿಕ ಬಿಲ್ಡರ್‌ಗಳು ಈ ಪ್ರದೇಶವನ್ನು ಬಿಟ್ಟುಕೊಟ್ಟಿದ್ದರು’ ಎಂದು ಸ್ಥಳದಲ್ಲಿದ್ದ ಬಿಡಿಎ ಅಧಿಕಾರಿಗಳು ಹೇಳಿದರು.

‘ಮೊದಲು ಸುಮಾರು 250 ಚದರ ಅಡಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ಅದು ನಾಲ್ಕೈದು ಎಕರೆಗೆ ವ್ಯಾಪಿಸಿತು. ಮೀಸಲು ಪ್ರದೇಶ ಮತ್ತು ಖಾಸಗಿಯವರಿಗೆ ಸೇರಿದ ಆಸ್ತಿಯ ಪ್ರದೇಶ ಸುಟ್ಟು ಹೋಗಿದೆ. ಈ ಪ್ರದೇಶಕ್ಕೆ ಬೇಲಿ ಹಾಕಲಾಗಿದೆ. ಹೀಗಾಗಿ, ಮಾರ್ಷಲ್‌ಗಳಿಗೂ ಅಲ್ಲಿ ಹೋಗಲಾಗುತ್ತಿಲ್ಲ. ಹೀಗಾಗಿ ಕಿಡಿಗೇಡಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದಂತಾಗಿದೆ’ ಎಂದು ಅವರು ಹೇಳಿದರು.

ಕೆರೆಯ ಮಾರ್ಷಲ್‌ ಕರ್ನಲ್‌ ರಾಜ್‌ಬೀರ್‌, ‘ಒಂದೇ ಸ್ಥಳದಲ್ಲಿ ಮೂರನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಿಂಗಳ ಹಿಂದೆ ಇಲ್ಲಿ ವೈರ್‌ಗಳನ್ನು ಸುಟ್ಟು ತಾಮ್ರ ಸಂಗ್ರಹಿಸುತ್ತಿದ್ದ ಮೂವರನ್ನು ಬಂಧಿಸಿ, 90 ಕೆಜಿ ತಾಮ್ರ ವಶಪಡಿಸಿಕೊಂಡಿದ್ದೆವು. ಇಂಥ ಪ್ರಕರಣಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕಿದೆ’ ಎಂದು ಹೇಳಿದರು.

‘ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗುತ್ತಿದ್ದಾರೆ’ ಎಂದು ಸಿಟಿಝನ್‌ ವಾಚ್‌ ಗ್ರೂಪ್‌ನ ಸದಸ್ಯೆ ಸೋನಾಲಿ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT