ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಮೀಸಲಿಗೂ ಕೈಹಾಕಿದ ಭೂಗಳ್ಳರು

* ಇನ್ನು ಐದೇ ವರ್ಷಗಳಲ್ಲಿ ನಗರದ ಶೇ 98.5ರಷ್ಟು ಭೂಪ್ರದೇಶ ಕಾಂಕ್ರೀಟ್‌ಮಯ * ಬೆಳ್ಳಂದೂರು–ವರ್ತೂರು ಕೆರೆಗಳಲ್ಲಿ ಹೆಚ್ಚಿದ ಒತ್ತುವರಿ
Last Updated 13 ಫೆಬ್ರುವರಿ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ವ್ಯಾಲಿ’ಯಲ್ಲಿ ಸದ್ಯದ ವೇಗದಲ್ಲಿಯೇ ನಿರ್ಮಾಣ ಕಾಮಗಾರಿಗಳು ಮುಂದುವರಿದರೆ 2025ರ ವೇಳೆಗೆ ನಗರದ ಶೇ 98.5ರಷ್ಟು ಭೂಪ್ರದೇಶ ಕಾಂಕ್ರೀಟ್‌ ಇಲ್ಲವೆ ಟಾರ್‌ನಿಂದ ಸಂಪೂರ್ಣವಾಗಿ ಮುಚ್ಚಿ ಹೋಗಲಿದೆ. ಇದರಿಂದ ಮಳೆಗಾಲದಲ್ಲಿ ಪ್ರವಾಹಗಳು ಹೆಚ್ಚಿದರೆ, ಮಿಕ್ಕ ಋತುಗಳಲ್ಲಿ ಕುಡಿಯುವ ನೀರಿನ ಅಭಾವ ಮತ್ತಷ್ಟು ಹೆಚ್ಚಾಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರ ತಂಡ, ಜಲಮೂಲಗಳ ಮೀಸಲು ಪ್ರದೇಶ (ಬಫರ್‌ ಜೋನ್‌) ಕುರಿತು, ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಈ ಆತಂಕಕಾರಿ ವರ್ತಮಾನ ಹೊರಬಿದ್ದಿದೆ.

ಇನ್ನೊಂದೇ ವರ್ಷದಲ್ಲಿ ಮಣ್ಣಿನ ನೆಲದ ಪ್ರಮಾಣ ನಗರದ ಒಟ್ಟು ಭೂಪ್ರದೇಶದ ಶೇ 7ಕ್ಕೆ ಕುಸಿಯಲಿದೆ. 5–6 ವರ್ಷಗಳಲ್ಲಿ ಇಲ್ಲಿನ ಪರಿಸರ ಗಂಡಾಂತರ ಸ್ಥಿತಿಗೆ ತಲುಪಲಿದೆ. ಆಗ ಶುದ್ಧ ನೀರು, ಗಾಳಿ ಹಾಗೂ ಉತ್ತಮ ಪರಿಸರದ ಅಭಾವದಿಂದ ಬೆಂಗಳೂರು ಬದುಕಲು ಯೋಗ್ಯ ನಗರವಾಗಿ ಉಳಿಯದು ಎನ್ನುವ ಭೀತಿಯನ್ನೂ ಐಐಎಸ್‌ಸಿ ತಜ್ಞರ ತಂಡ ವ್ಯಕ್ತಪಡಿಸಿದೆ.

ಡಾ. ಟಿ.ವಿ.ರಾಮಚಂದ್ರ, ಎಸ್‌.ವಿನಯ್‌ ಹಾಗೂ ಭರತ್‌ ಐತಾಳ ಅವರಿದ್ದ ತಂಡ ಈ ಅಧ್ಯಯನವನ್ನು ನಡೆಸಿದೆ. ನಗರದಲ್ಲಿ ಉಂಟಾಗುವ ಪ್ರವಾಹದ ಅವಘಡಗಳನ್ನು ತಡೆಯುವ ಜತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಮೀಸಲು ಪ್ರದೇಶಗಳು ಬೇಕೇಬೇಕು. ಆದರೆ, ಅವುಗಳನ್ನು ಶರವೇಗದಲ್ಲಿ ‘ಇಲ್ಲ’ವಾಗಿಸುತ್ತಿರುವ ಕಾರಣ ನಗರಕ್ಕೂ ಉಳಿಗಾಲವಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಒಂದೆಡೆ ಮೀಸಲು ಪ್ರದೇಶವನ್ನು ಉಳಿಸಿಕೊಳ್ಳುವ ಅಗತ್ಯವನ್ನು ತಜ್ಞರು ಪ್ರತಿಪಾದಿಸುತ್ತಿದ್ದರೆ, ಇನ್ನೊಂದೆಡೆ ಈ ಮೀಸಲಿಗೂ ಕೈಹಾಕಲು ಭೂಗಳ್ಳರಿಂದ ಸಂಚುಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ಸರ್ಕಾರವೇ ಮೀಸಲು ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡುವಂತೆ ಕಾನೂನುಸಮರ ನಡೆಸುತ್ತಿವೆ.

ಮೀಸಲು ಪ್ರದೇಶ ಏಕೆ ಬೇಕು?

ಮೀಸಲು ಪ್ರದೇಶವನ್ನು ಪ್ರವಾಹ ತಡೆಯುವಂತಹ ನೈಸರ್ಗಿಕ ಬೋಗುಣಿ ಎಂದೇ ಗುರ್ತಿಸಲಾಗುತ್ತದೆ. ರಾಜಕಾಲುವೆ ಹಾಗೂ ಕೆರೆ ಸುತ್ತಲಿನ ಮೀಸಲು ಪ್ರದೇಶ ಪ್ರವಾಹವನ್ನು ತಡೆಗಟ್ಟುತ್ತದೆ ಮತ್ತು ಅದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲ, ಒಡಲಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೈಸರ್ಗಿಕ ಸಂಸ್ಕರಣೆ ಮೂಲಕ ನೀರಿನ ಶುದ್ಧತೆಯನ್ನು ಹೆಚ್ಚಿಸುತ್ತದೆ. ಹಸಿರು ವಲಯವನ್ನು ವೃದ್ಧಿಸುತ್ತದೆ. ಇಂತಹ ಮೀಸಲು ಪ್ರದೇಶವನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಉಳಿಸಿಕೊಳ್ಳಲು ಪಾಲಕ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ ಸೋತಿವೆ ಎನ್ನುವ ಸಂಗತಿಯತ್ತ ವರದಿ ಬೊಟ್ಟು ಮಾಡಿ ತೋರಿಸಿದೆ.

ಕೆರೆಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡ ಕ್ರಮದ ವಿಷಯವಾಗಿಯೂ ಆಕ್ಷೇಪ ಎತ್ತಲಾಗಿದೆ. ಅತ್ಯಧಿಕ ಲಾಭ ಮಾಡಿಕೊಳ್ಳುವ ದಾಹದಿಂದ ಲೇಕ್‌ವ್ಯೂನಂತಹ ಯೋಜನೆ ರೂಪಿಸುವ ಸಂಸ್ಥೆಗಳು, ತಮ್ಮ ಯೋಜನೆಯು ಪರಿಸರಕ್ಕೆ ಮಾಡಿದ ಹಾನಿ ಪ್ರಮಾಣವೆಷ್ಟು ಎಂಬ ಸಂಗತಿಯತ್ತ ಕಿಂಚಿತ್ತೂ ಯೋಚಿಸುವುದಿಲ್ಲ ಎಂದು ದೂರಲಾಗಿದೆ.

ನೂರು ಎಕರೆ ಇಲ್ಲವೆ ಅದಕ್ಕಿಂತ ಕಡಿಮೆ ಪ್ರದೇಶದಲ್ಲಿ ವ್ಯಾಪಿಸಿದ ಕೆರೆಯ ಸುತ್ತ ಕನಿಷ್ಠ 75 ಮೀಟರ್‌ ಹಾಗೂ 100–500 ಎಕರೆ ಪ್ರದೇಶದಲ್ಲಿ ಹರಡಿರುವ ಕೆರೆಗೆ 200 ಮೀಟರ್‌ನಷ್ಟು ಮೀಸಲು ಪ್ರದೇಶ ಬಿಡಬೇಕು ಎನ್ನುವುದು ತಜ್ಞರು ನೀಡುವ ಲೆಕ್ಕಾಚಾರ. ಆದರೆ, ಇಷ್ಟೊಂದು ಪ್ರಮಾಣದ ಮೀಸಲು ಪ್ರದೇಶವನ್ನು ಹುಡುಕುತ್ತಾ ಹೋದರೆ, ಅಂತಹ ಸೌಲಭ್ಯ ಹೊಂದಿದ ಒಂದು ಕೆರೆಯೂ ಸಿಗುವುದು ಕಷ್ಟ.

ಐಐಎಸ್‌ಸಿ ತಂಡ, ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ನಡೆಸಿದ ಅಧ್ಯಯನದಲ್ಲಿ ಮೀಸಲು ಪ್ರದೇಶದ ಶೇ 45ರಷ್ಟು ಭಾಗದಲ್ಲಿ ಕಟ್ಟಡಗಳು ಎದ್ದಿರುವುದು ಗೊತ್ತಾಗಿದೆ. ಕಟ್ಟಡಗಳು ನಿರ್ಮಾಣವಾಗಿರುವ ಈ ಪ್ರದೇಶದಲ್ಲಿ ಒಂದೊಮ್ಮೆ ತೋಟಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ವರ್ತೂರು ಕೆರೆಯ ಮೀಸಲು ಪ್ರದೇಶದ ಶೇ 30ರಷ್ಟು ಭೂಭಾಗದಲ್ಲೂ ಕಟ್ಟಡಗಳು ತಲೆ ಎತ್ತಿವೆ. ಎರಡೂ ಕೆರೆಗಳ ಪಾತ್ರ ಅತಿಕ್ರಮಣಗೊಂಡಿದ್ದು, ಕಟ್ಟಡ ತ್ಯಾಜ್ಯವನ್ನು ಈ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ಬಿಡಿಎಯ ಮಹಾಯೋಜನೆ ಪ್ರಕಾರ, ಮೀಸಲು ಪ್ರದೇಶ 30 ಮೀಟರ್‌ ಇರಬೇಕು. ಆದರೆ, ರಾಷ್ಟ್ರೀಯ ಹಸಿರು ಮಂಡಳಿ (ಎನ್‌ಜಿಟಿ) ಈ ಮಿತಿಯನ್ನು 75 ಮೀಟರ್‌ಗೆ ಹೆಚ್ಚಿಸಿದೆ. ಎನ್‌ಜಿಟಿಯ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಕೆರೆಯ ಸುತ್ತಲಿನ ಮೀಸಲು ಪ್ರದೇಶವನ್ನು 30 ಮೀಟರ್‌ಗೆ ಸೀಮಿತಗೊಳಿಸಿದರೆ ಅಲ್ಲಿ 6 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ನೀರು ಸಂಗ್ರಹವಾಗಲಿದೆ. ಅದೇ ಮಿತಿ 75 ಮೀಟರ್‌ಗೆ ಹೆಚ್ಚಿದರೆ 12 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ನೀರು ಹಿಡಿದಿಡುವ ಸಾಮರ್ಥ್ಯವನ್ನು ಆ ಪ್ರದೇಶ ಪಡೆಯಲಿದೆ. ಬೆಳ್ಳಂದೂರು ಕೆರೆಯ ಮೇಲ್ಭಾಗದ ಕೆರೆಗಳಲ್ಲೂ ಮೀಸಲು ಪ್ರದೇಶ ಹೆಚ್ಚಾದರೆ ಒಟ್ಟಾರೆ 71 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ನೀರನ್ನು ಹೆಚ್ಚುವರಿಯಾಗಿ ಶೇಖರಿಸಬಹುದು ಎಂದು ಲೆಕ್ಕಾಚಾರ ಕೊಡುತ್ತದೆ ಅಧ್ಯಯನ ತಂಡ.

ಕೆರೆಗಳಿಗೆ ಮರುಜೀವ: ಏನು ಮಾಡಬೇಕು?

* ಅತ್ಯುತ್ತಮ ಆಡಳಿತ ವ್ಯವಸ್ಥೆ: ಸದ್ಯ ಕೆರೆಗಳ ನಿರ್ವಹಣೆಯು ಒಂದೇ ಸಂಸ್ಥೆಯಿಂದ ಆಗುತ್ತಿಲ್ಲ. ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಈ ಹೊಣೆ ಹರಿದು ಹಂಚಿಹೋಗಿದ್ದರಿಂದ ನಿರ್ಧಾರ ತೆಗೆದುಕೊಳ್ಳುವುದು, ತೆಗೆದುಕೊಂಡ ನಿರ್ಧಾರವನ್ನು ಅನುಷ್ಠಾನಗೊಳಿಸುವುದು ಕಷ್ಟ. ಎಲ್ಲ ಕೆರೆಗಳ ಶಾಸನಬದ್ಧ ಮಾಲೀಕತ್ವ ಒಂದೇ ಸಂಸ್ಥೆಗೆ ವಹಿಸಿ, ಆ ಕೆರೆಗಳಿಗೆ ಅಗತ್ಯವಾದ ಹಣ ಖರ್ಚು ಮಾಡುವ ಅಧಿಕಾರವನ್ನು ಅದಕ್ಕೇ ವಹಿಸಿಕೊಡಬೇಕು

* ಭೂದಾಖಲೆಗಳ ಡಿಜಟಲೀಕರಣ: ಕೆರೆಗಳಿಗೆ ಸಂಬಂಧಿಸಿದ ಭೂದಾಖಲೆಗಳನ್ನು ಡಿಜಟಲೀಕರಣ ಮಾಡಬೇಕು

* ಅತಿಕ್ರಮಣ ತೆರವು: ಕೆರೆ ಪಾತ್ರ, ಮೀಸಲು ಪ್ರದೇಶದ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸಬೇಕು

* ಶುದ್ಧ ನೀರು ಹರಿಸಬೇಕು: ಶುದ್ಧ ನೀರಷ್ಟೇ ಕೆರೆಗೆ ಹರಿದುಬರುತ್ತಿದೆ ಎನ್ನುವುದನ್ನು ಖಾತ್ರಿಪಡಿಸುವ ವ್ಯವಸ್ಥೆ ಮಾಡಬೇಕು

* ರಂಜಕದ ಬಳಕೆ ನಿರ್ಬಂಧಿಸಬೇಕು: ಮಾರ್ಜಕದ ತಯಾರಿಕೆಯಲ್ಲಿ ರಂಜಕದ ಬಳಕೆ ನಿರ್ಬಂಧಿಸಿ ನೊರೆ ಹಾವಳಿಯನ್ನು ತಡೆಗಟ್ಟಬೇಕು

ಬೆಂಗಳೂರು ದಟ್ಟಣೆ ನಿವಾರಿಸಿ

ನಗರದ ಪರಿಸರವನ್ನು ಕಾಪಾಡಲು ಕೆಲವು ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ಅಧ್ಯಯನ ವರದಿ ಶಿಫಾರಸು ಮಾಡಿದೆ:

* ನಗರದಲ್ಲಿರುವ ಕೆಲವು ಪ್ರಮುಖ ಸರ್ಕಾರಿ ಸಂಸ್ಥೆಗಳನ್ನು ರಾಜ್ಯದ ಬೇರೆ ನಗರಗಳಿಗೆ ಸ್ಥಳಾಂತರಿಸಬೇಕು

* ನಗರದಲ್ಲಿ ಇನ್ನುಮುಂದೆ ಯಾವುದೇ ಕಾರಣಕ್ಕೂ ಕೈಗಾರಿಕೆ ಘಟಕಗಳ ಸ್ಥಾಪನೆಗೆ ಅವಕಾಶ ಕೊಡಬಾರದು

* ನೈಸರ್ಗಿಕ ಸಂಪನ್ಮೂಲಗಳನ್ನು (ಭೂಮಿ, ಪರಿಸರ, ನೀರು) ಆದ್ಯತೆ ಮೇರೆಗೆ ಕಾಪಾಡಬೇಕು

* ನಾಗರಿಕರಿಗೆ ಬೇಕಾದ ಆಮ್ಲಜನಕ ಮತ್ತು ನೀರಿನ ಸಂರಕ್ಷಣೆಗಾಗಿ ನಗರದ ಬೆಳವಣಿಗೆಯನ್ನು ನಿಯಂತ್ರಿಸಬೇಕು

* ಅಗತ್ಯ ಪ್ರಮಾಣದ ನೀರಿನ ಲಭ್ಯತೆಯಿಲ್ಲದ ಜಲಮಂಡಳಿ ದೊಡ್ಡ ಕಟ್ಟಡ ಯೋಜನೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡುವುದನ್ನು ನಿರ್ಬಂಧಿಸಬೇಕು

ಡಾ.ಟಿ.ವಿ.ರಾಮಚಂದ್ರ
ಡಾ.ಟಿ.ವಿ.ರಾಮಚಂದ್ರ

ಮೀಸಲು ಪ್ರದೇಶವನ್ನು ಕಡಿಮೆಗೊಳಿಸುವ ಪ್ರಯತ್ನ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಅದು ನಗರ ಪರಿಸರದ ಪಾಲಿಗೆ ಮಾರಕವಾದ ನಡೆ

– ಡಾ.ಟಿ.ವಿ.ರಾಮಚಂದ್ರ, ಐಐಎಸ್‌ಸಿ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT