ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆರ್ಭಟ; ವಿದ್ಯುತ್ ತಂತಿಗೆ ಕಾರ್ಮಿಕ ಬಲಿ

*ನೆಲಕ್ಕುರುಳಿದ 58 ಮರಗಳು * ಕತ್ತಲಲ್ಲಿ ಹಲವು ಬಡಾವಣೆಗಳು
Last Updated 27 ಮೇ 2019, 1:34 IST
ಅಕ್ಷರ ಗಾತ್ರ

ಬೆಂಗಳೂರು:ದಕ್ಷಿಣ ಒಳನಾಡಿನಲ್ಲಿ ಪ್ರಬಲ ಸುಳಿಗಾಳಿಯ ಕಾರಣ ಭಾನುವಾರ ರಾತ್ರಿಯೂ ನಗರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.

ರಾತ್ರಿ 7.45ರ ನಂತರ ಗಾಳಿಯ ವೇಗದ ಜತೆಗೆ ಗುಡುಗು–ಮಿಂಚಿನ ಆರ್ಭಟವೂ ಜೋರಾಯಿತು. ಕ್ಷಣ ಮಾತ್ರದಲ್ಲಿ ಮಳೆರಾಯ ರಭಸವಾಗಿಯೇ ಧರೆಗೆ ಅಪ್ಪಳಿಸಿದನು.

ಕೆಂಗೇರಿಯ ಹೊಯ್ಸಳ ವೃತ್ತ, ಜಯಮಹಲ್ ರಸ್ತೆ, ಚಾಲುಕ್ಯ ವೃತ್ತ, ಕಬ್ಬನ್‌ ರಸ್ತೆ, ಸರಸ್ವತಿಪುರ, ಮಲ್ಲೇಶ್ವರ ಸೇರಿದಂತೆ ನಗರದ ವಿವಿಧೆಡೆ 24 ಮರಗಳು ಧರೆಗುರುಳಿದವು. ಜಯಮಹಲ್ 5ನೇ ಮುಖ್ಯರಸ್ತೆಯಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರ ಮನೆ ಮುಂದೆ ಬೃಹತ್ ಮರವೊಂದು ಕಾರಿನ ಮೇಲೇ ಬಿದ್ದಿತು. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.

ಬಿಟಿಎಂ ಲೇಔಟ್‌ನಲ್ಲಿ ಬಿಎಂಟಿಸಿ ಬಸ್ ಮೇಲೆ ಬೃಹತ್ ಹೋರ್ಡಿಂಗ್ಸ್ ಬಿದ್ದು ಚಾಲಕ ಗಾಯಗೊಂಡರು. ಮೆಜೆಸ್ಟಿಕ್, ಓಕಳಿಪುರ, ಸಂಪಿಗೆರಸ್ತೆ, ಶಾಂತಿನಗರ, ಅರಕೆರೆ, ವಿಲ್ಸನ್ ಗಾರ್ಡನ್, ಎಚ್‌ಎಸ್‌ಆರ್ ಲೇಔಟ್, ಬಿಳೇಕಹಳ್ಳಿಯಲ್ಲಿ ರಸ್ತೆಗಳು ಜಲಾವೃತವಾಗಿ ವಾಹನ ದಟ್ಟಣೆ ಉಂಟಾಯಿತು.

ಕ್ರಮಕ್ಕೆ ಸೂಚನೆ: ಮಳೆಯಿಂದ ಯಾವುದೇ ಅನಾಹುತ ಸಂಭವಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.

ಶನಿವಾರ ರಾತ್ರಿ ಸುರಿದ ಮಳೆ, ಗಾಳಿಗೆ 58 ಮರಗಳು ಉರುಳಿಬಿದ್ದಿವೆ. ಮನೆಯ ಮೇಲೆ ಬಿದ್ದಿದ್ದ ತೆಂಗಿನ ಗರಿಯನ್ನು ತೆರವು ಮಾಡಲು ಹೋದ ಕಾರ್ಮಿಕ ಸತೀಶ್‌ (32) ಎಂಬುವರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.

ಗುಡುಗು– ಸಿಡಿಲು ಸಹಿತವಾಗಿ ಸುರಿದ ಮಳೆಯಿಂದಾಗಿ ಉರುಳಿಬಿದ್ದ ಮರಗಳ ತೆರವು ಕಾರ್ಯಾಚರಣೆ ಭಾನುವಾರ ರಾತ್ರಿಯವರೆಗೂ ನಡೆಯಿತು. ಹಲವು ರಸ್ತೆಯಲ್ಲಿ ಕಳಚಿ ಬಿದ್ದಿದ್ದ ಮರಗಳ 594 ಕೊಂಬೆಗಳನ್ನೂ ಭಾನುವಾರ ತೆರವುಗೊಳಿಸಲಾಯಿತು.

ಗರಿ ತೆರವು ವೇಳೆ ಸಾವು: ‘ದಿನಗೂಲಿ ಕಾರ್ಮಿಕರಾಗಿದ್ದ ಸತೀಶ್, ತಾಯಿ ಜೊತೆ ಕಾಕ್ಸ್‌ಟೌನ್‌ ಸಮೀಪದ ರಾಮಚಂದ್ರಪ್ಪ ಲೇಔಟ್‌ನಲ್ಲಿ ವಾಸವಿದ್ದರು. ಅವರ ಮನೆಯ ಪಕ್ಕದಲ್ಲೇ ತೆಂಗಿನ ಮರಗಳು ಇದ್ದು, ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ತೆಂಗಿನ ಮರದ ಗರಿಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದಿದ್ದವು. ನಂತರ, ತಂತಿಯ ಸಮೇತ ಮನೆ ಮೇಲೆ ಗರಿಗಳು ಬಿದ್ದಿದ್ದವು. ಆಗ ವಿದ್ಯುತ್ ಸಂಪರ್ಕವೂ ಸ್ಥಗಿತಗೊಂಡಿತ್ತು’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ರಾತ್ರಿ 11.30ರ ಸುಮಾರಿಗೆ ಮಳೆ ಕಡಿಮೆಯಾಗಿತ್ತು. ಮನೆಯ ಮೇಲೆ ಬಿದ್ದಿದ್ದ ಗರಿಗಳನ್ನು ತೆರವು ಮಾಡಲು ಸತೀಶ್ ಮುಂದಾಗಿದ್ದರು. ಅಷ್ಟರಲ್ಲೇ ವಿದ್ಯುತ್ ಸಂಪರ್ಕ ಪುನಃ ಆರಂಭವಾಗಿತ್ತು. ಅದನ್ನು ಗಮನಿಸದ ಸತೀಶ್, ಗರಿಯನ್ನು ತೆರವು ಮಾಡುವ ವೇಳೆಯಲ್ಲೇ ತಂತಿಯನ್ನು ಸ್ಪರ್ಶಿಸಿದ್ದರು. ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದು ಅವರು ಪ್ರಾಣ ಬಿಟ್ಟರು’ ಎಂದು ವಿವರಿಸಿದರು.

₹ 5 ಲಕ್ಷ ಪರಿಹಾರ: ಮೃತ ಸತೀಶ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ, ₹ 5 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು.

‘ಲೇಔಟ್‌ನಲ್ಲಿರುವ ವಿವಾದಿತ ಸ್ಥಳದಲ್ಲಿ ಕೆಲ ಕಾರ್ಮಿಕರು ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ಕೆಲವರು ವಿದ್ಯುತ್‌ ಸಂಪರ್ಕವನ್ನೂ ಅಕ್ರಮವಾಗಿ ಪಡೆದಿದ್ದಾರೆ. ಆ ತಂತಿಗಳು ತುಂಡರಿಸಿ ಬಿದ್ದು ಈ ಅವಘಡ ಸಂಭವಿಸಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

15ಕ್ಕೂ ಹೆಚ್ಚು ವಾಹನಗಳು ಜಖಂ: ‘ಕೆಲವೆಡೆ ವಾಹನಗಳ ಮೇಲೆಯೇ ಮರಗಳು ಬಿದ್ದಿವೆ. 15ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ’ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹೇಳಿದರು.

‘ವಿಜಯನಗರ, ಚಾಮರಾಜಪೇಟೆ, ಬಾಣಸವಾಡಿ, ಬಸವನಗುಡಿ ಸೇರಿದಂತೆ ಹಲವೆಡೆ ಮರಗಳು ವಾಹನಗಳ ಮೇಲೆ ಬಿದ್ದಿವೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ. ಅಂಥ ಮರಗಳನ್ನು ಸಿಬ್ಬಂದಿ ತೆರವುಗೊಳಿಸಿದ್ದಾರೆ. ವಾಹನಗಳನ್ನು ಮಾಲೀಕರು ತೆಗೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ಮರಗಳು ಉರುಳಿಬಿದ್ದು, ಅದರ ಕೊಂಬೆಗಳು ಫುಟ್‌ಪಾತ್‌ ಮೇಲೆಯೇ ಬಿದ್ದಿದ್ದವು. ಅಲ್ಲಿ ಓಡಾಡಲು ಪಾದಚಾರಿಗಳಿಗೆ ತೊಂದರೆ ಉಂಟಾಯಿತು.

ರೇಸ್‌ಕೋರ್ಸ್‌ ರಸ್ತೆಯಲ್ಲೂ ಮರದ ಕೊಂಬೆಗಳು ನೆಲಕ್ಕುರುಳಿ, ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಆಟೊ ಹಾಗೂ ಕಾರುಗಳು ಜಖಂಗೊಂಡಿವೆ. ವಿಜಯನಗರದ ಆದಿಚುಂಚನಗಿರಿ ಮಠದ ರಸ್ತೆ, ಕ್ಲಬ್ ರಸ್ತೆ, ಅತ್ತಿಗುಪ್ಪೆ ಹಾಗೂ ಸುತ್ತಮುತ್ತಲೂ ಮರದ ಕೊಂಬೆಗಳು ರಸ್ತೆಯಲ್ಲೇ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು.

ನೆಲಕ್ಕುರುಳಿದ 140 ವಿದ್ಯುತ್‌ ಕಂಬಗಳು

ಮಳೆ ವೇಳೆ ನಗರದಾದ್ಯಂತ 140 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅವುಗಳನ್ನು ಭಾನುವಾರ ತೆರವು ಮಾಡಿದ ಬೆಸ್ಕಾಂ ಸಿಬ್ಬಂದಿ, ಹೊಸ ಕಂಬಗಳನ್ನು ನಿಲ್ಲಿಸಿದ್ದಾರೆ.

‘ದಕ್ಷಿಣ ವೃತ್ತದಲ್ಲಿ 37, ಪಶ್ಚಿಮ ವೃತ್ತದಲ್ಲಿ 51, ಉತ್ತರ ವೃತ್ತದಲ್ಲಿ 17 ಹಾಗೂ ಪೂರ್ವ ವೃತ್ತದಲ್ಲಿ 35 ಕಂಬಗಳು ಬಿದ್ದಿವೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

ರಾಜಾನಕುಂಟೆ, ಶಿವಾಜಿನಗರ, ಮಲ್ಲೇಶ್ವರ, ಜೆ.ಪಿ.ನಗರ, ವಿಜಯನಗರ, ಕೋರಮಂಗಲ, ಬಾಣಸವಾಡಿ, ಜೈ ಭಾರತಿ ನಗರ, ಹೆಬ್ಬಾಳ, ಆರ್.ಆರ್.ನಗರ, ರಾಜಾಜಿನಗರ, ಇಂದಿರಾನಗರ, ಆರ್‌.ಟಿ.ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ಕಂಬಗಳ ಮೇಲೆಯೇ ಮರಗಳು ಬಿದ್ದಿದ್ದವು. ಅಲ್ಲೆಲ್ಲ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

***

ಬಿಬಿಎಂಪಿ ವ್ಯಾಪ್ತಿಯಲ್ಲಿ ಮರ, ಕೊಂಬೆ ಬಿದ್ದ ವಿವರ

ವಲಯ ಮರ ಕೊಂಬೆ

ದಕ್ಷಿಣ 21 350

ಪೂರ್ವ 14 109

ಪಶ್ಚಿಮ 5 110

ಆರ್‌.ಆರ್‌. ನಗರ 3 17

ಬೊಮ್ಮನಹಳ್ಳಿ 4 5

ಯಲಹಂಕ 2 –

ದಾಸರಹಳ್ಳಿ 2 –

ಮಹದೇವಪುರ 7 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT