ಭಾನುವಾರ, ಆಗಸ್ಟ್ 25, 2019
27 °C

ಸಾಧಾರಣ ಮಳೆಗೂ ಸಂಚಾರ ವ್ಯತ್ಯಯ

Published:
Updated:
Prajavani

ಬೆಂಗಳೂರು: ನಗರದ ಹಲವೆಡೆ ಸೋಮವಾರ ಸಂಜೆ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದ ಮಧ್ಯೆಯೇ ಆಗಾಗ ಬಿಸಿಲು ಕಾಣಿಸಿಕೊಂಡಿತ್ತು.

ಭಾನುವಾರ ಸಂಜೆಯೂ ಸಾಧಾರಣ ಮಳೆಯಾಗಿತ್ತು. ಸೋಮವಾರ ಸಂಜೆ ಜಿಟಿ ಜಿಟಿ ಆರಂಭವಾದ ಮಳೆ, 10 ನಿಮಿಷಗಳವರೆಗೆ ನಿರಂತರವಾಗಿ ಸುರಿಯಿತು.

ವೈಟ್‌ಫೀಲ್ಡ್, ಮಹದೇವಪುರ, ಸರ್ಜಾಪುರ, ಬೆಳ್ಳಂದೂರು, ಎಂ.ಜಿ.ರಸ್ತೆ, ಶಿವಾಜಿನಗರ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಿತು. ಯಶವಂತಪುರ, ಪೀಣ್ಯ, ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಯಿತು.

ಕೆಲವೆಡೆ ರಸ್ತೆ ಮೇಲೆಯೇ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಸವಾರರು, ದ್ವಿಚಕ್ರವಾಹನಗಳನ್ನು ಹರಿಯುತ್ತಿದ್ದ ನೀರಿನಲ್ಲೇ ನಿಧಾನವಾಗಿ ಚಲಾಯಿಸಿಕೊಂಡು ಹೋದರು. ಕೆಲ ವಾಹನಗಳು, ರಸ್ತೆ ಮಧ್ಯೆಯೇ ಕೆಟ್ಟು ನಿಂತಿದ್ದು ಕಂಡುಬಂತು. 

ಪಟ್ಟಂದೂರು ಅಗ್ರಹಾರ ಕೆರೆಯಲ್ಲಿ ಬೆಂಕಿ: ವೈಟ್‌ಫೀಲ್ಡ್‌ ಸಮೀಪದ ಇಸಿಸಿ ರಸ್ತೆ ಬಳಿ ಹಾದು ಹೋಗಿರುವ ಪಟ್ಟಂದೂರು ಅಗ್ರಹಾರ ಕೆರೆಯಲ್ಲಿ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಮೋಡ ಕವಿದ ವಾತಾವರಣ: ‘ನಗರದಲ್ಲಿ ಇನ್ನು ಕೆಲದಿನ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ’ ಎಂದು ಇಲಾಖೆ ಹೇಳಿದೆ.

Post Comments (+)