ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕನನ್ನು ಹೊಡೆದು ಕೊಂದವರ ಬಂಧನ

ಅನಂತನಗರ: ಅಪಘಾತದಲ್ಲಿ ಬಾಲಕ ಮೃತಪಟ್ಟ ಪ್ರಕರಣ: ಕಾರು ಬಾಗಿಲು ತೆಗೆದಾಗ ಅವಘಢ
Last Updated 13 ಮಾರ್ಚ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಗೋಡಿ ಠಾಣೆ ವ್ಯಾಪ್ತಿಯ ಅನಂತನಗರದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟನೆಂಬ ಕಾರಣಕ್ಕೆ ಲಾರಿ ಚಾಲಕನನ್ನು ಹಿಗ್ಗಾಮುಗ್ಗ ಥಳಿಸಿ ಕೊಂದಿದ್ದ ಆರೋಪದಡಿ ದಂಪತಿ ಸೇರಿ ಆರು ಮಂದಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಅತ್ತಿಬೆಲೆಯ ನೆರಳೂರಿನ ರಾಘವನಗರದ ರಾಕೇಶ್ (29), ಆತನ ಪತ್ನಿ ಈಶ್ವರಿ, ವಿನಾಯಕನಗರದ ವಿ. ಆನಂದ್‌ಕುಮಾರ್, ಬಿ.ಕೆ.ಪ್ರಕಾಶ್, ಆರ್‌. ಪ‍್ರಮೋದ್‌ಕುಮಾರ್,ನೆರಳೂರಿನ ಎನ್‌.ಎಲ್‌. ರವಿ ಬಂಧಿತರು. ಈ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮಾರ್ಚ್ 10ರಂದು ಸಂಜೆ ಸಂಭವಿಸಿದ್ದ ಅಪಘಾತದಲ್ಲಿ ಆರು ವರ್ಷದ ಬಾಲಕ ಅರ್ಹಾನ್‌ಖಾನ್ ಮೃತಪಟ್ಟಿದ್ದ. ರೊಚ್ಚಿಗೆದ್ದ ಸ್ಥಳೀಯರು, ಲಾರಿ ಚಾಲಕ ಉತ್ತರ ಪ್ರದೇಶದ ರಾಧೆಕೃಷ್ಣನನ್ನು ಹೊಡೆದು ಕೊಂದಿದ್ದರು.

ಕಾರು ಬಾಗಿಲು ತೆರೆದಾಗ ಅಪಘಾತ
‘ಬಾಲಕ ಅರ್ಹಾನ್‌ಖಾನ್‌ ಹಾಗೂ ಆತನ ಚಿಕ್ಕಮ್ಮ ಸದಾಫ್ ಬುಖಾರಿ, ಅನಂತನಗರದಲ್ಲಿ ಸ್ಕೂಟರ್‌ನಲ್ಲಿ ಹೊರಟಿದ್ದರು.ಅದೇ ರಸ್ತೆಯಲ್ಲಿ ರಾಧೆಕೃಷ್ಣ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಲಾರಿ ಪಕ್ಕದಲ್ಲೇ ಸ್ಕೂಟರ್‌ ಚಲಾಯಿಸಿಕೊಂಡು ಹೋಗಿದ್ದ ಸದಾಫ್, ಓವರ್‌ಟೆಕ್‌ ಮಾಡಲು ಪ್ರಯತ್ನಿಸಿದ್ದರು.

ಅದೇ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲನ್ನು ಅದರ ಚಾಲಕ ದಿಢೀರ್‌ ತೆಗೆದಿದ್ದ. ಆ ಬಾಗಿಲಿಗೆ ಸ್ಕೂಟರ್‌ ಗುದ್ದಿದ್ದರಿಂದಾಗಿ ಸದಾಫ್‌, ರಸ್ತೆ ಪಕ್ಕದಲ್ಲಿ ಬಿದ್ದಿದ್ದರು.

ಬಾಲಕ, ನಡುರಸ್ತೆಯಲ್ಲಿ ಬಿದ್ದಿದ್ದ. ಹಿಂದೆಯೇ ಬರುತ್ತಿದ್ದ ಲಾರಿಯ ಚಕ್ರ, ಆತನ ತಲೆ ಮೇಲೆ ಹರಿದು ಹೋಗಿತ್ತು’ ಎಂದು ತಿಳಿಸಿದರು.

‘ಅಪಘಾತ ಕಂಡು ರೊಚ್ಚಿಗೆದ್ದರಾಕೇಶ್, ಈಶ್ವರಿ ಹಾಗೂ ಇತರೆ ಆರೋಪಿಗಳು, ಚಾಲಕ ರಾಧೆಕೃಷ್ಣ ಅವರನ್ನು ಹಿಡಿದು ಥಳಿಸಿದ್ದರು. ತೀವ್ರ ಗಾಯಗೊಂಡ ಅವರನ್ನು ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು’ ಎಂದು ಹೇಳಿದರು.

‘ರಾಧೆಕೃಷ್ಣ ಅವರನ್ನು ಥಳಿಸಿದ್ದ ದೃಶ್ಯಗಳು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಅವುಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

ಕಾರು ಚಾಲಕ ಬಂಧನ
‘ದಿಢೀರ್ ಕಾರಿನ ಬಾಗಿಲು ತೆರೆದಿದ್ದೇ ಅಪಘಾತಕ್ಕೆ ಕಾರಣ. ಹೀಗಾಗಿ, ಕಾರಿನ ಚಾಲಕ ಅಲೋಕ್‌ ಕುಮಾರ್ ಎಂಬಾತನನ್ನು ಬಂಧಿಸಿದ್ದೇವೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಭಾರತದ ಅಲೋಕ್‌ಕುಮಾರ್, ಕೋರಮಂಗಲದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕನಾಗಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT