ಐಟಿ ರಿಟರ್ನ್‌ ಸಲ್ಲಿಸದ ಅಭ್ಯರ್ಥಿ

ಶುಕ್ರವಾರ, ಏಪ್ರಿಲ್ 19, 2019
22 °C
ಪಾರದರ್ಶಕತೆಗೆ ಧಕ್ಕೆ: ರಾಜಕೀಯ ವಿಶ್ಲೇಷಕರ ಅಭಿಮತ

ಐಟಿ ರಿಟರ್ನ್‌ ಸಲ್ಲಿಸದ ಅಭ್ಯರ್ಥಿ

Published:
Updated:
Prajavani

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಹಾಗೂ ಅವರ ಕುಟುಂಬದ ಸದಸ್ಯರು ಐದು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸದಿರುವ ವಿಷಯ ಚರ್ಚೆಗೆ ಗ್ರಾಸವಾಗಿದೆ.

ತಾವು ಹಾಗೂ ಕುಟುಂಬದ ಸದಸ್ಯರು 2014ರಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿಲ್ಲ ಎಂದು ಅಶ್ವತ್ಥ
ನಾರಾಯಣ ಅವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯೂ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್‌ ಸಲ್ಲಿಕೆ ಮಾಡುವುದು ಕಡ್ಡಾಯ. ಒಂದು ವೇಳೆ ಮಾಡದಿದ್ದರೆ ಇಲಾಖೆಯ ಆಯುಕ್ತರಿಗೆ ವಿಳಂಬದ ಬಗ್ಗೆ ಕ್ಷಮಾಪಣೆ ಅರ್ಜಿ ಸಲ್ಲಿಸಬೇಕು. ಅವರು ಒಪ್ಪಿಗೆ ನೀಡಿದ ನಂತರವಷ್ಟೇ ದಂಡ ಸಹಿತ ರಿಟರ್ನ್ಸ್‌ ಸಲ್ಲಿಕೆ ಮಾಡಬೇಕಾಗುತ್ತದೆ. ನಾಲ್ಕೈದು ವರ್ಷಗಳಿಂದ ಆದಾಯದ ಮಾಹಿತಿಯನ್ನು ಇಲಾಖೆಯಿಂದ ಮುಚ್ಚಿಡುವಂತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಪ್ರಮಾಣಪತ್ರ ಸಲ್ಲಿಸುವಾಗ ಐದು ವರ್ಷದ ಆದಾಯದ ವಿವರ ಒದಗಿಸುವುದು ಕಡ್ಡಾಯ. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಅಭ್ಯರ್ಥಿಯ ಸಮಗ್ರ ಹಿನ್ನೆಲೆ ಮತದಾರರಿಗೆ ತಿಳಿದಿರಬೇಕು ಎಂಬ ಉದ್ದೇಶದಿಂದ ಆಯೋಗವೇ ನಿಗದಿಪಡಿಸಿದ ಮಾನದಂಡವಿದು. ಆದಾಯ ತೆರಿಗೆ ರಿಟರ್ನ್ಸ್‌ನ ಹೇಳಿಕೆಗೆ ಅಭ್ಯರ್ಥಿ ಬದ್ಧನಾಗಿರಬೇಕಾಗುತ್ತದೆ. ಆದರೆ, ಅದನ್ನೇ ಸಲ್ಲಿಕೆ ಮಾಡದಿದ್ದರೆ, ಅವರು ಒದಗಿಸಿದ ಮಾಹಿತಿಯ ಸತ್ಯಾಸತ್ಯತೆ ತಿಳಿಯುವುದಾದರೂ ಹೇಗೆ’ ಎಂಬುದು ಚುನಾವಣಾ ವಿಶ್ಲೇಷಕರ ಪ್ರಶ್ನೆ.

‘ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸಲ್ಲಿಸುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ನಾವು ಪ್ರಶ್ನಿಸಲು ಅವಕಾಶ ಇಲ್ಲ. ಅದನ್ನು ಸಾರ್ವಜನಿಕರ ಮುಂದಿಡುವುದಷ್ಟೇ ಆಯೋಗದ ಕೆಲಸ. ಅದರಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ, ಅವರು ನೀಡಿದ ಮಾಹಿತಿ ಸಮರ್ಪಕವಾಗಿ ಇಲ್ಲದಿದ್ದಲ್ಲಿ ಜನರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ಅಭ್ಯರ್ಥಿ ಆದಾಯಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿದ್ದರೆ ಆದಾಯ ತೆರಿಗೆ ಇಲಾಖೆಗೂ ದೂರು ನೀಡಬಹುದು. ಒಂದು ವೇಳೆ ಅಭ್ಯರ್ಥಿ ಸುಳ್ಳು ಮಾಹಿತಿ ನೀಡಿದ್ದು ಸಾಬೀತಾದರೆ ಆಯೋಗವು ಕ್ರಮ ಕೈಗೊಳ್ಳುತ್ತದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭ್ಯರ್ಥಿಗಳು ಸಲ್ಲಿಸುವ ವಿವರಗಳ ಸತ್ಯಾಸತ್ಯತೆ ಪರಿಶೀಲನೆಗೆ ಆಯೋಗವು ಸಾಕಷ್ಟು ಸಮಯಾವಕಾಶ ನೀಡುತ್ತಿಲ್ಲ. ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಹಾಗೂ ಅದರ ಪರಿಶೀಲನೆಯ ನಡುವೆ ಕೇವಲ 2 ದಿನ ನೀಡಲಾಗಿದೆ. ಇದಕ್ಕೆ ಕನಿಷ್ಠ 3 ತಿಂಗಳುಗಳ ಕಾಲಾವಕಾಶವನ್ನಾದರೂ ನೀಡಬೇಕು.

ಒಂದು ವೇಳೆ ಅಭ್ಯರ್ಥಿ ಪ್ರಮಾಣಪತ್ರದಲ್ಲಿ ಸುಳ್ಳು ಹೇಳಿದ್ದರೆ ಅದನ್ನು ಪತ್ತೆ ಹಚ್ಚಿ ಆಕ್ಷೇಪ ಸಲ್ಲಿಸುವುದಕ್ಕೆ ಆಗ ಸಾಧ್ಯವಾಗುತ್ತದೆ’ ಎಂದು ಬೆಂಗಳೂರು– ರಾಜಕೀಯ ಕ್ರಿಯಾಸಮಿತಿಯ (ಬಿ–ಪ್ಯಾಕ್‌) ಎಸ್‌.ಆರ್‌. ಶರತ್‌ ಅಭಿಪ್ರಾಯಪಟ್ಟರು.

‘ಅಭ್ಯರ್ಥಿ, ಮತದಾರರು ಹಾಗೂ ಆಯೋಗದ ನಡುವೆ ಸಮನ್ವಯ ಇರಬೇಕು. ಆಯೋಗಕ್ಕೆ ಅಭ್ಯರ್ಥಿ ನೀಡುವ ಮಾಹಿತಿ ತಪ್ಪಾಗಿದ್ದರೆ ಅವರ ಅಭ್ಯರ್ಥಿತನವೇ ರದ್ದಾಗಬೇಕು. ಅದು ಬಿಟ್ಟು ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಅವರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲ. ಚುನಾವಣಾ ವ್ಯವಸ್ಥೆಯಲ್ಲಿನ ಇಂತಹ ಕೆಲವು ಲೋಪಗಳನ್ನು ಸರಿಪಡಿಸುವತ್ತ  ಆಯೋಗವು ಗಮನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಸ್ನೇಹಿತರ ಜತೆಗಿನ ವಿವಾದದಿಂದಾಗಿ ವಿಳಂಬ: ಅಶ್ವತ್ಥನಾರಾಯಣ

‘ನಾನು ಹಾಗೂ ಸ್ನೇಹಿತರೊಬ್ಬರು ಸೇರಿ ಜಂಟಿ ಸಹಭಾಗಿತ್ವದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದೆವು. ಅದಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ಅವರ ನಡುವೆ ವಿವಾದ ಇದೆ. ನಾನು ನನ್ನ ಆದಾಯ ಇಂತಿಷ್ಟು ಎಂದು ಘೋಷಿಸಿಕೊಂಡರೆ ಅದಕ್ಕೆ ಬದ್ಧನಾಗಬೇಕಾಗುತ್ತದೆ. ಹಾಗಾಗಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿಲ್ಲ. ಸಂಸ್ಥೆಯಿಂದ ಬರುವ ಆದಾಯದ ಹೊರತಾಗಿ, ಇತರ ವೈಯಕ್ತಿಕ ಆದಾಯಕ್ಕೆ ಸಂಬಂಧಿಸಿದಂತೆ ನಾನು ತೆರಿಗೆಯನ್ನು ಮುಂಚಿತವಾಗಿಯೇ ಕಟ್ಟುತ್ತಿದ್ದೇನೆ. ನನ್ನ ಆಸ್ತಿಯ ಸಮಗ್ರ ವಿವರಗಳನ್ನು ಪ್ರಮಾಣಪತ್ರದಲ್ಲಿ ನಮೂದಿಸಿದ್ದೇನೆ’ ಎಂದು ಅಶ್ವತ್ಥನಾರಾಯಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮಾಣಪತ್ರದಲ್ಲಿ ಅಶ್ವತ್ಥನಾರಾಯಣ ಅವರು ನೀಡಿರುವ ಮಾಹಿತಿ ಪ್ರಕಾರ ಅವರು ಮತ್ತು ಕುಟುಂಬದ ಸದಸ್ಯರ ಒಟ್ಟು ಚರಾಸ್ತಿ ₹ 34.27 ಲಕ್ಷ. ಅವರ ಬಳಿ ಒಟ್ಟು ₹ 67.30 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿವೆ. ಒಟ್ಟು ಸ್ಥಿರಾಸ್ತಿಯ ಮೌಲ್ಯ ₹ 25.93 ಕೋಟಿ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !