ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿಗಾನಹಳ್ಳಿಗೆ ಬೇಕು, ಒಂದು ಸ್ಕೈವಾಕು

ಈ ರಸ್ತೆ ದಾಟಲು ಇರಬೇಕು ಉಪಾಯ: ಮೈಮರೆತರೆ ಬಂದೊದಗಲಿದೆ ಅಪಾಯ
Last Updated 31 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಹಳೆಮದ್ರಾಸ್‌ ರಸ್ತೆಯ ಬೆನ್ನಿಗಾನಹಳ್ಳಿಯಲ್ಲಿ ಸ್ಕೈವಾಕ್‌ ಸೌಕರ್ಯ ಇಲ್ಲದ ಕಾರಣ, ಜನ ರಸ್ತೆ ದಾಟುವಾಗ ಅಪಾಯದ ಬಾಯಿಂದ ಹಾದುಹೋಗುತ್ತಿದ್ದಾರೆ.

ನಗರದ ಕೇಂದ್ರ ಭಾಗದಿಂದ ಹೊಸಕೋಟೆ, ವೈಟ್‌ಫೀಲ್ಡ್‌ ಮತ್ತು ಮಾರತ್ತಹಳ್ಳಿ ಕಡೆಗೆ ಓಡಾಡುವ ಸಾವಿರಾರು ವಾಹನಗಳು ಈ ರಸ್ತೆಯನ್ನು ಬಳಸುತ್ತವೆ. ಬೆನ್ನಿಗಾನಹಳ್ಳಿಯಲ್ಲಿ ಈ ರಸ್ತೆಯ ಅಗಲ 200 ಅಡಿಗಿಂತ ಹೆಚ್ಚಿದೆ. ಹಾಗಾಗಿ ವಾಹನಗಳು ಇಲ್ಲಿ ವೇಗವಾಗಿ ಸಂಚರಿಸುತ್ತವೆ. ಪಾದಚಾರಿಗಳು ಆ ವೇಗವನ್ನು ಸೂಕ್ಷ್ಮವಾಗಿ ಲೆಕ್ಕಹಾಕಿ, ಉಸಿರು ಬಿಗಿ ಹಿಡಿದುಕೊಂಡು, ಉಪಾಯದಿಂದ ರಸ್ತೆ ದಾಟುವ ಸ್ಥಿತಿ ಇಲ್ಲಿದೆ. ಕ್ಷಣಕಾಲ ಮೈಮರೆತರೆ ವಾಹನಗಳಿಂದ ಊನವಾಗುವುದಂತು ಖಚಿತ.

ಈ ಸ್ಥಳದ ಪೂರ್ವಕ್ಕೆ ಟಿನ್‌ ಫ್ಯಾಕ್ಟರಿ ಬಸ್‌ನಿಲ್ದಾಣ, ಕೃಷ್ಣರಾಜಪುರ ರೈಲ್ವೆ ನಿಲ್ದಾಣವಿದೆ. ಪಶ್ಚಿಮಕ್ಕೆ ಗೋಪಾಲನ್‌ ಮಾಲ್‌ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಆರ್‌.ಎಂ.ಜಡ್‌. ಸಂಕೀರ್ಣವಿದೆ. ಉತ್ತರಕ್ಕೆ ಬೆನ್ನಿಗಾನಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ದಕ್ಷಿಣಕ್ಕಿರುವ ನಾಗವಾರಪಾಳ್ಯದ ರಸ್ತೆಬದಿಯಲ್ಲಿ ನೂರಾರು ವ್ಯಾಪಾರಿ ಮಳಿಗೆಗಳಿವೆ. ಹಾಗಾಗಿ ಈ ಜಂಕ್ಷನ್‌ನಲ್ಲಿ ದಿನದ ಬಹುತೇಕ ಸಮಯ ಜನಜಂಗುಳಿ ಇರುತ್ತದೆ. ‘ಇಂಥ ಜಾಗದಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯಾಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದರು ರಸ್ತೆ ದಾಟಲು ನಿಂತಿದ್ದ ಲಕ್ಷ್ಮಿಕಾಂತರಾಜು.

ಸ್ಥಳದಲ್ಲಿ ಟ್ರಾಫಿಕ್‌ ಸಿಗ್ನಲ್‌ ದೀಪಗಳನ್ನು ಅವಳಡಿಸಿದ್ದಾರೆ. ಅವು ಸರಿಯಾಗಿ ಉರಿಯುತ್ತಿಲ್ಲ. ‘ನಿಯೋಜಿಸುವ ಸಂಚಾರ ಪೋಲಿಸರು ಸಹ ಹತ್ತಿರದ ಅಂಗಡಿಗಳಲ್ಲಿ ಕೂತ ಹರಟೆ ಹೊಡೆಯುತ್ತಾರೆ. ಇದರಿಂದ ರಸ್ತೆ ದಾಟುವ ಕಷ್ಟ ಮತ್ತಷ್ಟು ಹೆಚ್ಚಿದೆ. ದಿನಾಲು ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಡೆಯುತ್ತವೆ’ ಎನ್ನುತ್ತಾರೆ ಸ್ಥಳೀಯರು.

ಜಾಹೀರಾತು ಫಲಕಗಳ ಲಾಬಿ: ‘ಈ ಸ್ಥಳದ ಸುತ್ತಲೂ ಜಾಹೀರಾತು ಪ್ರದರ್ಶನ ಫಲಕಗಳನ್ನು ನಿರ್ಮಿಸಲಾಗಿತ್ತು. ಸ್ಕೈವಾಕ್‌(ಪಾದಚಾರಿ ಮೇಲುಸೇತುವೆ) ನಿರ್ಮಾಣಗೊಂಡರೆ, ಆ ಫಲಕಗಳಿಗೆ ಅಡ್ಡವಾಗುತ್ತಿತ್ತು. ಜಾಹೀರಾತು ಪ್ರದರ್ಶನದ ಬಾಡಿಗೆ ಕುಸಿಯುತ್ತಿತ್ತು. ಹಾಗಾಗಿ ಇಷ್ಟುದಿನ ನಿರ್ಮಾಣಕ್ಕೆ ಸ್ಥಳೀಯ ಮುಖಂಡರೇ ಅಡ್ಡಗಾಲು ಹಾಕಿದರು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಕುರಿತು ವಿಚಾರಿಸಲು ಬೆನ್ನಿಗಾನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯೆ ಮೀನಾಕ್ಷಿ ಅವರಿಗೆ ಕರೆ ಮಾಡಿದಾಗ ‘ಸ್ಕೈವಾಕ್‌ ನಿರ್ಮಿಸಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ. ಆದರೆ, ಅದಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲಿಲ್ಲ. ರಸ್ತೆ ಪಕ್ಕದಲ್ಲೇ ಬಸ್‌ ಪ್ರಯಾಣಿಕರ ತಂಗುದಾಣ, ರಾಜಕಾಲುವೆ ಮತ್ತು ವಾಣಿಜ್ಯ ಮಳಿಗೆಗಳು ಇವೆ. ಹಾಗಾಗಿ ನಿರ್ಮಾಣದ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಅವರ ಪತಿ ಉತ್ತರಿಸಿದರು.

* ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ಅಂಗವಿಕಲರು ಈ ರಸ್ತೆ ದಾಟಲು ಬಹಳ ಪ್ರಯಾಸ ಪಡಬೇಕಿದೆ

-ವನಿತಾ, ಸ್ಥಳೀಯ ನಿವಾಸಿ

* ಇಲ್ಲಿ ಸ್ಕೈವಾಕ್‌ ಕಟ್ಟಲೇಬೇಕು. ಜನರು ಕಡ್ಡಾಯವಾಗಿ ಸ್ಕೈವಾಕ್‌ ಬಳಸುವಂತಾಗಲು ರಸ್ತೆ ವಿಭಜಕದ ಗೋಡೆಯನ್ನು ಎತ್ತರಿಸಬೇಕು

-ಲಕ್ಷ್ಮಿಕಾಂತರಾಜು, ಸ್ಥಳೀಯ

* ಫ್ರೆಂಡ್ಸ್‌ ಎಲ್ಲ ಒಟ್ಟಾಗಿರಸ್ತೆ ದಾಟುವಾಗ ಒಳ್ಳೆ ಡ್ರೈವರ್‌ ಆಗಿದ್ದರೆ, ವಾಹನ ನಿಲ್ಲಿಸಿ ಅನುವು ಮಾಡಿಕೊಡುತ್ತಾರೆ. ಇಲ್ಲದಿದ್ದರೆ ದೊಡ್ಡವರು ಯಾರಾದರೂ ರಸ್ತೆ ದಾಟುತ್ತಿದ್ದರೆ, ಅವರ ಹಿಂದೆ ಓಡುತ್ತೇವೆ

-ಮಂಜುನಾಥ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT