ಗುರುವಾರ , ನವೆಂಬರ್ 21, 2019
21 °C
‘ಬೆಸ್ಕಾಂ’ ಗ್ರಾಹಕ ಸಂಪರ್ಕ ಸಭೆಯಲ್ಲಿ ಭರವಸೆ

ಜಾನಕೊಂಡಕ್ಕೆ ಟಿ.ಸಿ. ಒದಗಿಸಲು ಕ್ರಮ

Published:
Updated:
Prajavani

ಚಿತ್ರದುರ್ಗ: ತಾಲ್ಲೂಕಿನ ಜಾನಕೊಂಡ ಗ್ರಾಮದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಕೊರೆಸಿದ ಕೊಳವೆ ಬಾವಿಗೆ ವಿದ್ಯುತ್‌ ಪರಿವರ್ತಕ ಒದಗಿಸಿ, ವಿದ್ಯುದೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ‘ಬೆಸ್ಕಾಂ’ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜೆ.ರಮೇಶ್‌ ಆಶ್ವಾಸನೆ ನೀಡಿದರು.

‘ಬೆಸ್ಕಾಂ’ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಹಕ ಸಂಪರ್ಕ ಸಭೆಯಲ್ಲಿ ಜಾನಕೊಂಡ ಗ್ರಾಮಸ್ಥರು ಮುಂದಿಟ್ಟ ಸಮಸ್ಯೆಗೆ ಅವರು ಪ್ರತಿಕ್ರಿಯೆ ನೀಡಿದರು.

ಕುಡಿಯುವ ನೀರಿನ ಉದ್ದೇಶಕ್ಕೆ ಕೊರೆಸಿದ ಕೊಳವೆ ಬಾವಿಗೆ ಐದು ತಿಂಗಳಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ ಎಂಬ ಬಗ್ಗೆ ಕೆ.ಎಸ್‌.ಗುರುಸಿದ್ಧಪ್ಪ ಅವರು ಸಭೆಯ ಗಮನಕ್ಕೆ ತಂದರು. ‘ವಾರದ ಒಳಗೆ ವಿದ್ಯುತ್‌ ಪರಿವರ್ತಕ ಒದಗಿಸುವುದಾಗಿ’ ಎಂಜಿನಿಯರ್‌ ಭರವಸೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪಗಳು ಹಗಲು ವೇಳೆಯೂ ಬೆಳೆಗುತ್ತಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ವಿದ್ಯುತ್‌ ಪೋಲಾಗುತ್ತಿದ್ದು, ಕೂಡಲೇ ಇದನ್ನು ತಡೆಯುವಂತೆಯೂ ಒತ್ತಾಯಿಸಿದರು.

‘ಬೀದಿ ದೀಪ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಸಿ ಸರ್ಕಾರ 2014ರಲ್ಲಿ ಆದೇಶ ಹೊರಡಿಸಿದೆ. ದುರಸ್ತಿ ಹೊಣೆ ಮಾತ್ರ ಬೆಸ್ಕಾಂ ಮೇಲಿದೆ. ಹಗಲು ಹೊತ್ತಿನಲ್ಲೂ ವಿದ್ಯುತ್‌ ದೀಪಗಳು ಉರಿಯುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಗಮನಕ್ಕೆ ಬಂದಿದೆ. ವಿದ್ಯುತ್‌ ಪೋಲು ಮಾಡದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡುತ್ತೇನೆ’ ಎಂದು ರಮೇಶ್‌ ತಿಳಿಸಿದರು.

‘ಹಾಯ್ಕಲ್ ಗ್ರಾಮದಲ್ಲಿ ಬೀದಿ ದೀಪಕ್ಕೆ ನೇರ ಸಂಪರ್ಕ ಕಲ್ಪಿಸಿಕೊಳ್ಳಲಾಗಿತ್ತು. ವಿದ್ಯುತ್‌ ಬಿಲ್‌ ಪಾವತಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ ಎಂಬುದು ಪರಿಶೀಲನೆಯ ವೇಳೆ ಗೊತ್ತಾಯಿತು. ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಉದ್ದೇಶಕ್ಕೆ ಪೂರೈಕೆ ಮಾಡುತ್ತಿರುವ ವಿದ್ಯುತ್‌ ಏಕಾಏಕಿ ಕಡಿತಗೊಳ್ಳುತ್ತದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಎನ್‌.ಬಳಘಟ್ಟ ಗ್ರಾಮದ ಅಜ್ಜಪ್ಪ, ‘ಕೃಷಿ ಉದ್ದೇಶಕ್ಕೆ ನಿತ್ಯ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರದ ಸೂಚನೆ ಇದೆ. ಆದರೆ, ನಿತ್ಯ ಐದು ಗಂಟೆ ಕೂಡ ವಿದ್ಯುತ್‌ ಸಿಗುತ್ತಿಲ್ಲ. ಈ ಬಗ್ಗೆ ಬೆಸ್ಕಾಂ ಸಿಬ್ಬಂದಿಯನ್ನು ವಿಚಾರಿಸಿದರೆ ಸರಿಯಾದ ಉತ್ತರ ಕೊಡುತ್ತಿಲ್ಲ. ಇದರಿಂದ ಅಡಿಕೆ ತೋಟ ಒಣಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಈಚೆಗೆ ಸುರಿದ ಭಾರಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿರುವ ಬಗ್ಗೆ ರೈತರು ಪ್ರಸ್ತಾಪಿಸಿದರು. ಮೂರು ದಿನಗಳ ಒಳಗೆ ಕಂಬ ದುರಸ್ತಿಗೊಳಿಸಿ, ವಿದ್ಯುತ್‌ ಪೂರೈಕೆ ಮಾಡುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದರು. ಎರಡು ವರ್ಷಗಳಿಂದ ವಿದ್ಯುತ್‌ ಪರಿವರ್ತಕ ಒದಗಿಸಿಲ್ಲ ಎಂದು ಹುಣಸೆಕಟ್ಟೆ ಗ್ರಾಮಸ್ಥರು ಆರೋಪಿಸಿದರು. ವಿದ್ಯುತ್ ದರ ಏರಿಕೆಯ ಬಗ್ಗೆಯೂ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)