ಭಾರತ್‌ ಬಂದ್‌: ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತ; ಖಾಸಗಿ ಶಾಲೆಗಳು ತೆರೆಯಲ್ಲ

7
ರಾಜ್ಯಕ್ಕೂ ತಟ್ಟಲಿದೆ ಬಂದ್‌ ಬಿಸಿ

ಭಾರತ್‌ ಬಂದ್‌: ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತ; ಖಾಸಗಿ ಶಾಲೆಗಳು ತೆರೆಯಲ್ಲ

Published:
Updated:

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆಪ್ಟೆಂಬರ್ 10ರಂದು ಕರೆ ನೀಡಿರುವ ‘ಭಾರತ್‌ ಬಂದ್‌’ಗೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

‘ತೈಲ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಬಂದ್‌ಗೆ ಸರ್ಕಾರದ ಸಂಪೂರ್ಣ ಬೆಂಬಲ ಇದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ‘ಬೆಳಿಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯದಲ್ಲೂ ಬಂದ್‌ ಯಶಸ್ವಿಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಸೋಮವಾರ ರಸ್ತೆಗಿಳಿಯುವುದು ಅನುಮಾನ. ಅಲ್ಲದೆ, ಸರ್ಕಾರಿ ಆಡಳಿತ ಯಂತ್ರ ಸಹ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 

ಸಿಪಿಐ, ಎಸ್‌ಯುಸಿಐ, ಎಐಟಿಯುಸಿ ಹಾಗೂ ಸಿಐಟಿಯು ಸೇರಿದಂತೆ ಎಡಪಕ್ಷಗಳ ಸಂಘಟನೆಗಳು, ಸಾರಿಗೆ ನಿಗಮಗಳ ನೌಕರರ ಒಕ್ಕೂಟಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಆಟೊ, ಓಲಾ ಹಾಗೂ ಉಬರ್‌ ಕಂಪನಿಗಳ ಕ್ಯಾಬ್ ಚಾಲಕರು ಮತ್ತು ಮಾಲೀಕರು ಸಹ ಬಂದ್‌ ಬೆಂಬಲಿಸಿದ್ದಾರೆ.

‘ದಿನದಿಂದ ದಿನಕ್ಕೆ ತೈಲ ಬೆಲೆ ಗಗನಕ್ಕೇರುತ್ತಿದೆ. ಅದರಿಂದಾಗಿ ಜನ ಸಾಮಾನ್ಯರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ, ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಬಸ್‌ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದ್ದೇವೆ. ಪ್ರತಿಭಟನಾ ಮೆರವಣಿಗೆ ಬಗ್ಗೆ ಭಾನುವಾರ ಸಂಜೆ ಸಭೆ ನಡೆಸಿ ನಿರ್ಧರಿಸಲಿದ್ದೇವೆ’ ಎಂದು ಕೆಎಸ್ಆರ್‌ಟಿಸಿ ನೌಕರರ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

ಓಲಾ ಮತ್ತು ಉಬರ್ ಚಾಲಕರು ಮತ್ತು ಮಾಲೀಕರ ಸಂಘ‌ದ ಅಧ್ಯಕ್ಷ ತನ್ವೀರ್ ಪಾಷಾ, ‘ಬಂದ್‌ ದಿನದಂದು ಕ್ಯಾಬ್‌ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದ್ದಾರೆ.

ತಟಸ್ಥವಾಗಿರಲು ನಿರ್ಧಾರ: ‘ನಮ್ಮದು ರಾಜಕೀಯೇತರ ಸಂಘಟನೆ. ಪಕ್ಷವೊಂದು ಕರೆ ನೀಡಿರುವ ಬಂದ್‌ನಿಂದ ದೂರವುಳಿದು ತಟಸ್ಥವಾಗಿರಲು ನಿರ್ಧರಿಸಿದ್ದೇವೆ. 10ರಂದು ನಮ್ಮ ಸರಕು ಸಾಗಣೆ ವಾಹನಗಳು ಎಂದಿನಂತೆ ಸಂಚರಿಸಲಿವೆ’ ಎಂದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಿದ್ಧವಾಗಿದೆ. ಆದರೆ, ರಾಜ್ಯ ಸರ್ಕಾರಗಳು ಅದಕ್ಕೆ ಒಪ್ಪುತ್ತಿಲ್ಲ. ರಾಜ್ಯ ಸರ್ಕಾರದ ಹೆಚ್ಚಿನ ಉಪಕರ ಸಹ ತೈಲ ಬೆಲೆ ಏರಿಕೆಗೆ ಕಾರಣ. ಎರಡೂ ಸರ್ಕಾರಗಳ ವಿರುದ್ಧ ಹೋರಾಟ ನಡೆಸುವ ಸಂಬಂಧ ದೆಹಲಿಯಲ್ಲಿ ಇದೇ 21ರಂದು ಸಭೆ ನಡೆಸಿ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದಾರೆ.

**

ಅಲಭ್ಯ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ರಾಜ್ಯದ ಎಲ್ಲ ನಿಗಮಗಳ ಬಸ್‌ಗಳು, ಓಲಾ ಹಾಗೂ ಉಬರ್‌ ಕ್ಯಾಬ್‌ಗಳು, ಐಟಿ–ಬಿಟಿ ಕಂಪನಿಗಳ ವಾಹನಗಳು, ಖಾಸಗಿ ಶಾಲೆ ಹಾಗೂ ಶಾಲಾ ವಾಹನಗಳು, ಆಟೊಗಳು

ಲಭ್ಯ: ಮೆಟ್ರೊ, ಔಷಧಿ ಮಳಿಗೆ, ಆಸ್ಪತ್ರೆ, ತರಕಾರಿ–ಹಾಲು ಸರಬರಾಜು ಹಾಗೂ ತುರ್ತು ಸೇವೆಗಳು

ನಿರ್ಧಾರವಿಲ್ಲ: ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆಗಳು, ಬ್ಯಾಂಕ್‌ಗಳು, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಅಡುಗೆ ಅನಿಲ ಹಾಗೂ ತೈಲ ಸಾಗಣೆ ವಾಹನಗಳ ಚಾಲಕರು ಮತ್ತು ಮಾಲೀಕರು, ಕಟ್ಟಡ ನಿರ್ಮಾಣದ ವಸ್ತುಗಳ ಸಾಗಣೆದಾರರು, ಗಾರ್ಮೆಂಟ್ಸ್‌ ಕಾರ್ಖಾನೆಗಳು, ಐಟಿ–ಬಿಟಿ ಕಂಪನಿಗಳು

**

ಖಾಸಗಿ ಶಾಲೆಗಳಿಗೆ ರಜೆ

ರಾಜ್ಯ ಖಾಸಗಿ ಅನುದಾನರಹಿತ ಶಾಲೆಗಳ ಸಂಘಟನೆಯು ಭಾರತ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಆ ದಿನ ಶಾಲೆಗಳಿಗೆ ರಜೆ ಘೋಷಿಸುವುದಾಗಿ ತಿಳಿಸಿದೆ.

‘ರಾಜಕೀಯ ಪಕ್ಷಗಳ ಪರವಾಗಿ ಬಂದ್‌ಗೆ ನೇರ ಬೆಂಬಲ ನೀಡುತ್ತಿಲ್ಲ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ವಿವೇಚನಾ ಅಧಿಕಾರ ಬಳಸಿ ರಜೆ ನೀಡಲು ಆಯಾ ಶಾಲಾ ಮಂಡಳಿಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ 10ರ ರಜೆ ಬದಲಿಗೆ 15ರ ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸಲಿದ್ದೇವೆ’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಇನ್ನೂ ರಜೆ ಘೋಷಣೆಯಾಗಿಲ್ಲ: ‘ಬಂದ್ ಪರಿಸ್ಥಿತಿಯನ್ನು ಅವಲೋಕಿಸಿ, ಶಾಲೆಗಳಿಗೆ ರಜೆ ಘೋಷಿಸಬೇಕೆ ಅಥವಾ ಬೇಡವೇ ಎನ್ನುವುದನ್ನು ಜಿಲ್ಲಾಧಿಕಾರಿಗಳು ತೀರ್ಮಾನಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಪ್ರಕಟಣೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 35

  Happy
 • 3

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !