ಬಂದ್: ಹುಬ್ಬಳ್ಳಿ, ಧಾರವಾಡ ಶಾಲಾ ಕಾಲೇಜು ರಜೆ, ಜನ ಜೀವನದ ಮೇಲೆ ಪರಿಣಾಮ ಸಾಧ್ಯತೆ

ಹುಬ್ಬಳ್ಳಿ/ಧಾರವಾಡ: ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ಗೆ ಹುಬ್ಬಳ್ಳಿ– ಧಾರವಾಡ ಅವಳಿನಗರದ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜನ ಜೀವನ ಮತ್ತು ವಾಣಿಜ್ಯ ವಹಿವಾಟಿನ ಮೇಲೆ ಮೇಲೆ ಬಂದ್ ಪರಿಣಾಮ ಬೀರುವ ಸಾಧ್ಯತೆ ಇದೆ.
ಜಿಲ್ಲೆಯ ಎಲ್ಲ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘವು ಬಂದ್ ಬೆಂಬಲಿಸಿದ್ದು, ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಲಕ್ಷ್ಮಣ ಹಿರೇಕೆರೂರು ಆಟೊ ಮಾಲೀಕರ ಸಂಘ, ಹುಬ್ಬಳ್ಳಿ– ಆಟೊ ಚಾಲೀಕರ ಚಾಲಕರ ಸಂಘ ಸಹ ಬಂದ್ ಬೆಂಬಲಿಸಿದೆ. ಧಾರವಾಡದ ಹೋಟೆಲ್ ಮಾಲೀಕರು ಬಂದ್ ಮಾಡಲು ನಿರ್ಧರಿಸಿದ್ದಾರೆ. ಸುಮಾರು 160 ಹೋಟೆಲ್ಗಳು ಬಾಗಿಲು ಮುಚ್ಚಲಿವೆ.
ಪರಿಸ್ಥಿತಿ ಅವಲೋಕಿಸಿ ಕಾರ್ಯಾಚರಣೆ ನಡೆಸುವ ಬಗ್ಗೆ ವಾಯವ್ಯ ಸಾರಿಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಹುಬ್ಬಳ್ಳಿ ಹೋಟೆಲ್ಗಳು, ಪೆಟ್ರೋಲ್ ಬಂಕ್ಗಳು ಎಂದಿನಂತೆ ತೆರದಿರಲಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಅಭಾದಿತ.
ಡೀಸೆಲ್ ಬೆಲೆ ಏರಿಕೆಯಿಂದಾಗಿ ಲಾರಿ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಇದನ್ನು ವಿರೋಧಿಸಿ ಬಂದ್ಗೆ ಬೆಂಬಲ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಇಳಿಸಬೇಕು ಎಂದು ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗೈನು ಸಾಬ್ ಹೊನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.
ಬಂದ್ಗೆ ಸಂಪೂರ್ಣ ಬೆಂಬಲ ಇದ್ದು, ಸೇವೆ ಸ್ಥಗಿತಗೊಳಿಸುವಂತೆ ಸಂಘದ ಎಲ್ಲ ಸದಸ್ಯರಿಗೆ ಸೂಚನೆ ನೀಡಲಾಗಿದೆ. ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಟೊ ಮಾಲೀಕರ– ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಬಂದ್ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಐದು ಮಂದಿ ಎಸಿಪಿ, 24 ಇನ್ಸ್ಪೆಕ್ಟರ್, 940 ಸಿಬ್ಬಂದಿ, ರಾಜ್ಯ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಗಣೇಶ ಹಬ್ಬ ಹತ್ತಿರವಾಗುತ್ತಿರುವಂತೆ ವ್ಯಾಪಾರ– ವಹಿವಾಟು ಹೆಚ್ಚಾಗಿದ್ದು, ಬಂದ್ ಇದರ ಮೇಲೆ ಪರಿಣಾಮ ಬೀರಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.