ಚುನಾವಣೆ: ದುಡಿಯುವ ಮಕ್ಕಳ ಪ್ರಣಾಳಿಕೆ

ಶನಿವಾರ, ಏಪ್ರಿಲ್ 20, 2019
24 °C
‘ಭೀಮ ಸಂಘ’ ಸಿದ್ಧಪಡಿಸಿರುವ ಪ್ರಣಾಳಿಕೆ ಬಿಡುಗಡೆ

ಚುನಾವಣೆ: ದುಡಿಯುವ ಮಕ್ಕಳ ಪ್ರಣಾಳಿಕೆ

Published:
Updated:

ಬೆಂಗಳೂರು: ‘ನಮ್ಮ ಊರಿನಲ್ಲೇ ನಮಗೆ ಶಾಲೆ ದೊರಕಬೇಕು, ಎಲ್ಲಾ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕು’ ಎಂದು ದುಡಿಯುವ ಮಕ್ಕಳ ಸಂಘಟನೆ ‘ಭೀಮ ಸಂಘ’ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದೆ.

‘ಭೀಮ ಸಂಘ’ದ ಅಡಿಯಲ್ಲಿ ಮಕ್ಕಳು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ.

‘ಎಲ್ಲಾ ಮಕ್ಕಳಿಗೂ ಶಿಕ್ಷಣ ಮುಂದುವರಿಸಲು ಸ್ಥಳೀಯವಾಗಿ ಕಾಲೇಜುಗಳು ಇರಬೇಕು. ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಪಡೆದು ಪೋಷಕರನ್ನು ಸಂತೋಷ ಪಡಿಸುತ್ತೇವೆ ಎಂಬ ಕನಸಿನೊಂದಿಗೆ ಈ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಕನಸು ನಿಜ ಮಾಡುವವರಿಗೆ ನಮ್ಮ ಮತ್ತು ನಮ್ಮ ಪೋಷಕರ ಬೆಂಬಲ ಇರಲಿದೆ’ ಎಂದು ಮಕ್ಕಳು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

‘ನಾವು ಕೆಲಸ ಮಾಡುವ ಸ್ಥಳದಲ್ಲಿ ರಕ್ಷಣೆ ಸಿಗುತ್ತದೆ. ನಮ್ಮ ನಡುವೆ ಭೇದಭಾವ ಆಗುವುದಿಲ್ಲ. ನಮ್ಮ ಹಾಗೂ ಶಿಕ್ಷಣ ಪಡೆಯುವ ಮಕ್ಕಳ ನಡುವೆ ಯಾವ ತಾರತಮ್ಯ ಇರುವುದಿಲ್ಲ. ನಮಗೆ ಅವಮಾನ ಆಗುವುದಿಲ್ಲ. ಹೋಟೆಲ್‌ನಲ್ಲಿ ನಮಗೆ ಜನರಿಂದ ರಕ್ಷಣೆ ಸಿಗುತ್ತದೆ, ರಕ್ಷಣೆ ಹೆಸರಿನಲ್ಲಿ ನಮ್ಮನ್ನು ಹಿಡಿದು ಶೋಷಣೆ ಮಾಡುವುದಿಲ್ಲ’ ಎಂಬ ಭರವಸೆ ಪ್ರಣಾಳಿಕೆಯಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ.

‘ಶಾಲೆಗೆ ರಜೆ ಇದ್ದಾಗ ಕೆಲಸ ಮಾಡಲು ಆಸಕ್ತಿ ಇದ್ದಲ್ಲಿ, ನಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸಗಳಲ್ಲಿ ಹಿಂಸೆ ಇರುವುದಿಲ್ಲ. ರಜೆಯ ದಿನಗಳಲ್ಲಿ ಮನೆ ಕೆಲಸಗಳಿಗೆ ಹೋಗುವ ನಮಗೆ ಶಿಕ್ಷೆ, ಶೋಷಣೆ ಅಥವ ತೊಂದರೆಗಳು ಇರುವುದಿಲ್ಲ. ಕೆಲಸಕ್ಕೆ ಹೋದಾಗ ಹಿಡಿದುಕೊಂಡು ಹೋಗಿ ಹೊರದೇಶಕ್ಕೆ ಮಾರುವುದಿಲ್ಲ. ಇಂತಹ ತೊಂದರೆಗಳಿಂದ ಬಿಡುಗಡೆ ಇರುತ್ತದೆ’ ಎಂದು ರಾಜಕೀಯ ಪಕ್ಷಗಳು ಭರವಸೆ ನೀಡಬೇಕು ಎಂದಿ‌ದ್ದಾರೆ.

‘ಶಿಕ್ಷಕರಿಂದ ನಮಗೆ ಯಾವುದೇ ರೀತಿಯ ದೌರ್ಜನ್ಯ ಇರುವುದಿಲ್ಲ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಶಾಲೆಯಲ್ಲಿ ನಮ್ಮನ್ನು ಯಾರೂ ಕೆಳ ಅಥವಾ ಮೇಲು ಜಾತಿ ಎಂದು ಹೇಳುವುದಿಲ್ಲ’ ಎಂಬ ಭರವಸೆಯೂ ಪ್ರಣಾಳಿಕೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ.

‘ಭೀಮ ಸಂಘದ ಸದಸ್ಯರು ಉಡುಪಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದಾರೆ. 60ಕ್ಕೂ ಹೆಚ್ಚು ಪ್ರತಿನಿಧಿಗಳು ಚರ್ಚಿಸಿ ‘ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ ಸಂಸ್ಥೆಯ ಸಹಕಾರದಲ್ಲಿ ರಾಜಕೀಯ ಪಕ್ಷಗಳ ಮುಂದೆ ಪ್ರಣಾಳಿಕೆ ಇಡಲಾಗಿದೆ’ ಎಂದು ಭೀಮ ಸಂಘ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !