ಮಂಗಳವಾರ, ಏಪ್ರಿಲ್ 20, 2021
29 °C
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ‘ಎಚ್ಚೆತ್ತ ಕನ್ನಡ’ ಚರ್ಚೆ

‘ರಾಜ್ಯದಲ್ಲಿ ಬಹುಭಾಷೆ ದೌರ್ಬಲ್ಯವಲ್ಲ, ಬಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಮ್ಮ ಕನ್ನಡದ ಇತಿಹಾಸವೇನು? ಬರಹದ, ಸಾಹಿತ್ಯದ ಭಾಷೆಯಾಗಿ ಕನ್ನಡ ಬೆಳೆದಿದ್ದು ಹೇಗೆ ? ಕರ್ನಾಟಕ ಏಕೀಕರಣವಾಗಲು ನಡೆದ ಹೋರಾಟ ಎಂಥದ್ದು? ಬೀದಿಯಲ್ಲಿನ ಮಕ್ಕಳೆಲ್ಲ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿರುವಾಗ ಕನ್ನಡದ ಭವಿಷ್ಯವೇನು? ಇಂಥ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮಾರ್ಗದಲ್ಲಿ ನಡೆದ ಚರ್ಚೆಗೆ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ಸಾಕ್ಷಿಯಾಯಿತು.

‘ಎಚ್ಚೆತ್ತ ಕನ್ನಡ’ ಶೀರ್ಷಿಕೆಯಡಿ ಬಿಐಸಿಯು ಶುಕ್ರವಾರ ಆಯೋಜಿಸಿದ್ದ ಚರ್ಚೆಯಲ್ಲಿ ಸಂಶೋಧಕ ಎಂ.ಚಿದಾನಂದ ಮೂರ್ತಿ ಕನ್ನಡವು ಹೇಗೆ ಅಸ್ಮಿತೆಯನ್ನು ಪಡೆದುಕೊಳ್ಳುತ್ತಾ ಬೆಳೆಯಿತು, ಅದರ ಇತಿಹಾಸವೇನು ಎಂಬುದರ ಕುರಿತು ಮಾತನಾಡಿದರು. ಭಾಷೆ ಆಧಾರದ ಮೇಲೆ ಕರ್ನಾಟಕ ಏಕೀಕರಣಗೊಂಡಿದ್ದರ ಕುರಿತು ಇತಿಹಾಸಕಾರ ಎಚ್.ಎಸ್.ಗೋಪಾಲ ರಾವ್ ಮಾತನಾಡಿದರು. 

ಕನ್ನಡದ ಭವಿಷ್ಯದ ಕುರಿತು ಮಾತನಾಡಿದ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ಕನ್ನಡಕ್ಕೆ ಇಂದು ಪ್ರಮುಖ ಸವಾಲು ಎದುರಾಗಿರುವುದು ಇಂಗ್ಲಿಷ್‌ನಿಂದ. ಕನ್ನಡ ಮಾತ್ರವಲ್ಲ, ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಇದೇ ಸ್ಥಿತಿಯಲ್ಲಿವೆ. ಹಿಂದಿ, ತಮಿಳು, ತೆಲುಗಿನಿಂದ ಕನ್ನಡಕ್ಕೆ ಅಪಾಯವಿಲ್ಲ. ಮುಂದೆ, ಎಲ್ಲ ಮಕ್ಕಳೂ ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ಶುರು ಮಾಡಿದರೆ ಕನ್ನಡದ ಭವಿಷ್ಯವೇನು ಎಂದು ಚಿಂತಿಸಬೇಕಿದೆ’ ಎಂದರು. 

‘ಹಿಂದಿನ ಜನಗಣತಿಯಲ್ಲಿ ರಾಜ್ಯದಲ್ಲಿ ಕನ್ನಡ ಭಾಷಿಕರ ಪ್ರಮಾಣ ಶೇ 65ರಷ್ಟಿತ್ತು. ಇತರೆ ಅಂದರೆ, ತುಳು, ಕೊಡವ, ಬ್ಯಾರಿ, ಮರಾಠಿ, ತೆಲುಗು, ತಮಿಳು, ಹಿಂದಿ ಮತ್ತು ಉರ್ದು ಮಾತನಾಡುವವರ ಸಂಖ್ಯೆ ಶೇ 35ರಷ್ಟಿತ್ತು. ರಾಜ್ಯ ಒಂದು ಹೂದೋಟ ಎಂದು ಪರಿಗಣಿಸುವುದಾದರೆ, ಈ ಎಲ್ಲ ಭಾಷೆಗಳೂ ಹೂವುಗಳಿದ್ದಂತೆ. ಇಷ್ಟು ಭಾಷೆಗಳನ್ನು ತಿಳಿದಿರುವುದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಇದು ನಮ್ಮ ಸಾಮರ್ಥ್ಯ ಎಂದು ತಿಳಿದುಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು. 

‘ಸಮೀಕ್ಷೆಯೊಂದರ ಪ್ರಕಾರ, ದೇಶದಲ್ಲಿ ಬಹುಭಾಷೆಗಳನ್ನು ಆಡುವವರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚು. ಮನೆಯಲ್ಲಿ ನಮ್ಮ ಮಾತೃಭಾಷೆಯಲ್ಲಿ ಮಾತನಾಡೋಣ. ಹೊರಗಡೆ ಬಂದಾಗ, ಕನ್ನಡವನ್ನು ಬಳಸೋಣ’ ಎಂದು ಸಲಹೆ ನೀಡಿದರು. 

‘ಟಿ.ಪಿ. ಕೈಲಾಸಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಮಾತೃಭಾಷೆ ಬೇರೆ ಇದೆ. ಆದರೆ, ಕನ್ನಡದಲ್ಲಿ ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಈ ಮಹನೀಯರು ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಚಿರಂಜೀವಿ ಸಿಂಗ್‌ ಸ್ಮರಿಸಿದರು.

ವನ್ಯಜೀವಿ ತಜ್ಞ ಉಲ್ಲಾಸ್‌ ಕಾರಂತ್, ‘ನಾವು ಮೊದಲು ಕನ್ನಡಿಗರಾಗದೆ, ಭಾರತೀಯರಾಗಲು ಸಾಧ್ಯವಿಲ್ಲ’ ಎಂದರು.

‘ರಾಜ್‌ ಸಿನಿಮಾ ಇರುವವರೆಗೆ ಕನ್ನಡ ಸಂಸ್ಕೃತಿ ಅಜರಾಮರ’ 

‘ಕನ್ನಡ ಸಿನಿಮಾಗಳನ್ನು ನೋಡುತ್ತಾ, ಕನ್ನಡ ಹಾಡುಗಳನ್ನು ಕೇಳುತ್ತಾ ನಾನು ಕನ್ನಡ ಕಲಿತಿದ್ದೇನೆ. ಚಲನಚಿತ್ರ, ವೃತ್ತಪತ್ರಿಕೆಗಳು ಮತ್ತು ಇಂತಹ ಮಾಧ್ಯಮಗಳು ಇವತ್ತಿನ ಸಂಸ್ಕೃತಿಯ ಕನ್ನಡಿ’ ಎಂದು ಚಿರಂಜೀವಿ ಸಿಂಗ್‌ ಹೇಳಿದರು.

‘ರಾಜ್ಯೋತ್ಸವ ಬಂದಾಗ ಪ್ರಮುಖವಾಗಿ ಬೆಂಗಳೂರಿನಲ್ಲಿ ಡಾ. ರಾಜ್‌ಕುಮಾರ್‌ ಗುಣಗಾನ ನಡೆಯುತ್ತದೆ. ಎಲ್ಲೆಡೆ ಅವರ ಪ್ರತಿಮೆಗಳು ಮತ್ತು ಅವರ ಹೆಸರಿನ ರಸ್ತೆಗಳು ಕಾಣುತ್ತವೆ. ರಾಜ್‌ ಅವರ ಸಿನಿಮಾಗಳನ್ನು ಜನ ಎಲ್ಲಿಯವರೆಗೆ ನೋಡುತ್ತಾರೋ, ಅಲ್ಲಿಯವರೆಗೆ ಕನ್ನಡ ಸಂಸ್ಕೃತಿಯ ವಿಸ್ತಾರವಿರುತ್ತದೆ ಎಂಬ ಮಾತು ನೆನಪಾಗುತ್ತದೆ’ ಎಂದು ಅವರು ಹೇಳಿದರು.

**

ನಿನ್ನೆಯಷ್ಟೇ ಈ ದಿನವೂ ಮುಖ್ಯ. ಈಗಿನಷ್ಟೇ ನಾಳೆಯೂ ಮುಖ್ಯ. ಇತಿಹಾಸವನ್ನು ನೆನಪು ಮಾಡಿಕೊಳ್ಳಬೇಕು. ಇಂದು ಬಾಳಲಾರದವ, ನಾಳೆ ಬೆಳಗಲಾರ
- ಎಂ. ಚಿದಾನಂದ ಮೂರ್ತಿ, ಸಂಶೋಧಕ

**

ನಮ್ಮನ್ನು ನಾವು ಗುರುತಿಸಿಕೊಳ್ಳುವುದಕ್ಕೆ ಕನ್ನಡ ಮುಖ್ಯ. ಕಾಸರಗೋಡು ಕೇರಳದಲ್ಲಿದ್ದರೂ, ಅಲ್ಲಿನವರ ಕನ್ನಡಾಭಿಮಾನ ನಾನು ಬೇರೆ ಯಾರಲ್ಲೂ ನೋಡಿಲ್ಲ
- ಎಚ್.ಎಸ್. ಗೋಪಾಲ ರಾವ್‌, ಇತಿಹಾಸಕಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು