ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿಕಾಯಿ ನೊರೆಗೆ ಟೆಕಿ ಬಲಿ

ರಸ್ತೆಯಲ್ಲಿ ಉರುಳಿಬಿದ್ದ ಬೈಕ್ * ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ಸೀತಾನಾಥನ್ ಸಾವು
Last Updated 9 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಸುರಿದ ವೇಳೆಯಲ್ಲಿ ‘ಕತ್ತಿಕಾಯಿ’ ಮರದ ಕಾಯಿಗಳ ನೊರೆಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಸೀತಾನಾಥನ್ ಚಿನ್ನು (35) ಎಂಬುವರು ಬಲಿಯಾಗಿದ್ದಾರೆ.

ಇಂದಿರಾನಗರದ 100 ಅಡಿ ರಸ್ತೆಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಯಿಗಳಿಂದ ಉಂಟಾಗಿದ್ದ ನೊರೆಯಿಂದಾಗಿ ಬೈಕ್‌ ಉರುಳಿಬಿದ್ದಿದ್ದರಿಂದ, ಸವಾರ ಸೀತಾನಾಥನ್ ಅವರು ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ ಚಕ್ರಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾರೆ.

ಸೋಮವಾರ ರಾತ್ರಿ 8.15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಹಲಸೂರು ಸಂಚಾರ ಠಾಣೆ ಪೊಲೀಸರು, ‘ಕತ್ತಿಕಾಯಿ ಮರದ ಕಾಯಿಗಳ ನೊರೆಯೇ ಅಪಘಾತಕ್ಕೆ ಕಾರಣ’ ಎಂದು ಹೇಳಿದ್ದಾರೆ.

ಆಗಿದ್ದೇನು: ಮೃತ ಟೆಕಿ ಸೀತಾನಾಥನ್,ತಮಿಳುನಾಡಿನವರು. ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದವರ ಜೊತೆ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.

ಕುಟುಂಬಕ್ಕೆ ಆಧಾರವಾಗಿದ್ದರು: ‘ಮೃತ ಸೀತಾನಾಥನ್, ಕುಟುಂಬಕ್ಕೆ ಆಧಾರವಾಗಿದ್ದರು. ಅವರಿಗೆ ಪತ್ನಿ, ಮೂರು ವರ್ಷದ ಪುತ್ರಿ ಹಾಗೂ ಒಂದೂವರೆ ವರ್ಷದ ಪುತ್ರ ಇದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಸೋಮವಾರ ಬೆಳಿಗ್ಗೆ ಕಚೇರಿಗೆ ಹೋಗಿದ್ದ ಸೀತಾನಾಥನ್, ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ
ಬೈಕ್‌ನಲ್ಲಿ ವಾಪಸು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

‘ಇಂದಿರಾ ನಗರದ 100 ಅಡಿ ರಸ್ತೆಯ 9ನೇ ಮುಖ್ಯರಸ್ತೆಯ ಅಕ್ಕ–ಪಕ್ಕದಲ್ಲಿ ಕತ್ತಿಕಾಯಿ ಮರಗಳಿವೆ. ಅವುಗಳ ಕಾಯಿಗಳು ರಸ್ತೆಯಲ್ಲೆಲ್ಲ ಬಿದ್ದಿದ್ದವು. ಸಂಜೆ ಮಳೆ ಸುರಿದಿದ್ದರಿಂದ ರಸ್ತೆಯಲ್ಲೆಲ್ಲ ನೀರು ಹರಿದು ನೊರೆ ಕಾಣಿಸಿಕೊಂಡಿತ್ತು.’

‘ಅದೇ ರಸ್ತೆಯಲ್ಲಿ ಹೊರಟಿದ್ದ ಸೀತಾನಾಥನ್, 9ನೇ ಮುಖ್ಯರಸ್ತೆಯ ತಿರುವಿನಲ್ಲಿ ಎದುರಿಗೆ ಬರುತ್ತಿದ್ದ ವಾಹನಗಳಿಗೆ ದಾರಿ ಮಾಡಿಕೊಡುವುದಕ್ಕಾಗಿ ಬೈಕ್‌ನ ಬ್ರೇಕ್ ಹಾಕಿದ್ದರು. ಆದರೆ, ನೊರೆಯಿಂದ ಬೈಕ್‌ ರಸ್ತೆಯಲ್ಲಿ ಉರುಳಿಬಿದ್ದಿತ್ತು. ಅವರು ಎದುರಿಗೆ ಬರುತ್ತಿದ್ದ ಬಸ್ಸಿನ ಚಕ್ರಕ್ಕೆ ಹೋಗಿ ಸಿಲುಕಿದ್ದರು. ಅವರ ಮೇಲೆಯೇ ಚಕ್ರ ಹರಿದು ಹೋಗಿತ್ತು’ ಎಂದು ಪೊಲೀಸರು ವಿವರಿಸಿದರು.

‘ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ನರಳಾಡುತ್ತಿದ್ದ ಸೀತಾನಾಥನ್ ಅವರನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದರು.

ಬಿಎಂಟಿಸಿ ಚಾಲಕ ಬಂಧನ: ‘ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಬಿಎಂಟಿಸಿ ಬಸ್ ಜಪ್ತಿ ಮಾಡಲಾಗಿದೆ. ಚಾಲಕ ಮಂಜೇಗೌಡ ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಕುಟುಂಬಕ್ಕೆ ಆಧಾರವಾಗಿದ್ದರು

‘ಮೃತ ಸೀತಾನಾಥನ್, ಕುಟುಂಬಕ್ಕೆ ಆಧಾರವಾಗಿದ್ದರು. ಅವರಿಗೆ ಪತ್ನಿ, ಮೂರು ವರ್ಷದ ಪುತ್ರಿ ಹಾಗೂ ಒಂದೂವರೆ ವರ್ಷದ ಪುತ್ರ ಇದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT