ಬೈಕ್ ಆಂಬುಲೆನ್ಸ್ ಸೇವೆ ಸ್ಥಗಿತಕ್ಕೆ ನಿರ್ಧಾರ!

ಭಾನುವಾರ, ಜೂನ್ 16, 2019
28 °C
ಆರೋಗ್ಯ ಇಲಾಖೆಗೆ ಈ ಸೇವೆಯ ನಿರ್ವಹಣೆಯದ್ದೇ ದೊಡ್ಡ ಸವಾಲು

ಬೈಕ್ ಆಂಬುಲೆನ್ಸ್ ಸೇವೆ ಸ್ಥಗಿತಕ್ಕೆ ನಿರ್ಧಾರ!

Published:
Updated:
Prajavani

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಸವಾರಿ ಆರಂಭಿಸಿದ ಬೈಕ್ ಆಂಬುಲೆನ್ಸ್‌ ನಿರ್ವಹಣೆ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಹಾಗಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ 2015ರಲ್ಲಿ ಬೈಕ್ ಆಂಬುಲೆನ್ಸ್‌ಗಳು ರಸ್ತೆಗಿಳಿದವು. ರಸ್ತೆ ಅಪಘಾತಗಳಿಂದ ಸಂಭವಿಸುತ್ತಿದ್ದ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಸಂಚಾರ ದಟ್ಟಣೆಯ ನಡುವೆ ಆದಷ್ಟು ಶೀಘ್ರ ವೈದ್ಯಕೀಯ ಸೇವೆ ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ನಗರದಲ್ಲಿ 2017ರಲ್ಲಿ 5,064 ಹಾಗೂ 2018ರಲ್ಲಿ 4,611 ರಸ್ತೆ ಅಪಘಾತಗಳು ಸಂಭವಿಸಿದ್ದು, ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದೆ.

ಕಳೆದ ವರ್ಷ 1,337 ಬೈಕ್ ಹಾಗೂ 1,473 ಕಾರು ಅಪಘಾತ ಪ್ರಕರಣಗಳು ವರದಿಯಾಗಿವೆ. ಅಪಘಾತದಲ್ಲಿ 684 ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತ ಸಂಭವಿಸಿದಾಗ ವ್ಯಕ್ತಿ ಗಂಭೀರವಾಗಿ ಗಾಯಗೊಂಡಲ್ಲಿ ಆಂಬುಲೆನ್ಸ್‌ಗೆ ಮೊರೆ ಹೋಗುತ್ತಾರೆ. ಸಣ್ಣ ಗಾಯವಾದವರು ಬೈಕ್ ಆಂಬುಲೆನ್ಸ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಬೈಕ್ ಆಂಬುಲೆನ್ಸ್ ಸೇವೆಗೆ ಹಿನ್ನಡೆಯಾಗಿದೆ. ಅದೇ ರೀತಿ, ಸಂಚಾರ ದಟ್ಟಣೆಯ ಪ್ರದೇಶದಲ್ಲಿ ತ್ವರಿತಗತಿಯಲ್ಲಿ ಸ್ಥಳವನ್ನು ತಲುಪುವುದು ಬೈಕ್‌ ಆಂಬುಲೆನ್ಸ್‌ ಸವಾರರಿಗೂ ಸವಾಲಾಗಿದೆ. 

‘ಕೆಲವು ರಾಷ್ಟ್ರಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಯಶಸ್ವಿಯಾಗಿದೆ. ಅಧಿಕ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಶೀಘ್ರ ಸೇವೆ ಒದಗಿಸಲು ಸಹಕಾರಿ ಎಂಬ ಕಾರಣಕ್ಕೆ ಈ ಸೇವೆ ಪರಿಚಯಿಸಲಾಯಿತು. ಆದರೆ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಸಿಬ್ಬಂದಿ ರಜಾ ಇದ್ದಲ್ಲಿ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ಹಂತ ಹಂತವಾಗಿ ಬೈಕ್ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿ ಸಮಸ್ಯೆ: ‘ಈ ಯೋಜನೆ ಹಿನ್ನಡೆ ಅನುಭವಿಸಲು ಸಿಬ್ಬಂದಿ ಸಮಸ್ಯೆ ಕೂಡ ಕಾರಣ. ಪ್ರತಿ ಬೈಕ್ ಆಂಬುಲೆನ್ಸ್‌ಗೆ ಒಬ್ಬ ಬೈಕ್‌ ಸವಾರ ಮಾತ್ರ ಇರುತ್ತಾರೆ. ಒಂದು ವೇಳೆ ಅವರು ರಜೆ ಪಡೆದಲ್ಲಿ ಆ ಬೈಕ್‌ನ ಸೇವೆ ಸ್ಥಗಿತಗೊಳಿಸ ಬೇಕಾಗುತ್ತದೆ. ಗಾಯಗೊಂಡವರಿಗೆ ಬೈಕ್‌ ಆಂಬುಲೆನ್ಸ್‌ನ ಸವಾರರೇ ಶೂಶ್ರೂಷೆ ಮಾಡಬೇಕಾಗುತ್ತದೆ. ಹೀಗಾಗಿ ನರ್ಸಿಂಗ್ ಕೋರ್ಸ್ ಓದಿದವರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕಾಗಿದೆ. ಆದರೆ, ನರ್ಸಿಂಗ್ ಪದವೀಧರರು ಬೈಕ್ ಆಂಬುಲೆನ್ಸ್‌ ಸೇವೆ ಒದಗಿಸಲು ಅಷ್ಟಾಗಿ ಮುಂದೆ ಬರುತ್ತಿಲ್ಲ. ಆಸ್ಪತ್ರೆಗಳಲ್ಲಿಯೇ ಸೇವೆ ಸಲ್ಲಿಸಲು ಹೆಚ್ಚು ಆಸಕ್ತಿ ತೋರುತ್ತಾರೆ’ ಎಂದು ಮಾಹಿತಿ ನೀಡಿದರು.

**

ಲಭ್ಯವಿದ್ದ ಚಿಕಿತ್ಸೆ

ಗ್ಲುಕೊಮೀಟರ್, ಆಕ್ಸಿಜನ್ ಸಿಲಿಂಡರ್, ಹೃದಯಬಡಿತ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಇನ್ಕ್ಯುಬೇಟರ್ ಕಿಟ್, ಬ್ಯಾಂಡೇಜ್, ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು

***

ಅಂಕಿ–ಅಂಶ

₹1.76 ಲಕ್ಷ - ಒಂದು ಬೈಕ್ ಆಂಬುಲೆನ್ಸ್‌ ಖರೀದಿಗೆ ತಗಲುವ ವೆಚ್ಚ
30 - ರಾಜ್ಯದಲ್ಲಿರುವ ಒಟ್ಟು ಬೈಕ್ ಆಂಬುಲೆನ್ಸ್‌ಗಳು
19 - ನಗರದಲ್ಲಿರುವ ಬೈಕ್ ಆಂಬುಲೆನ್ಸ್‌ಗಳು
1.21 ಲಕ್ಷ - ನಾಲ್ಕು ವರ್ಷಗಳಲ್ಲಿ ಸೇವೆ ಪಡೆದವರು
₹2.06 ಕೋಟಿ - ನಾಲ್ಕು ವರ್ಷಗಳಲ್ಲಿ ಇವುಗಳ ನಿರ್ವಹಣೆಗೆ ಮಾಡಿರುವ ವೆಚ್ಚ

**

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !