ಬಿಜೆಪಿ ಮಕ್ಕಳು–ಮೊಮ್ಮಕ್ಕಳ ಪಕ್ಷವಲ್ಲ: ಸದಾನಂದ ಗೌಡ

ಗುರುವಾರ , ಏಪ್ರಿಲ್ 25, 2019
33 °C
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಬಿಜೆಪಿಯ ಸದಾನಂದಗೌಡ ನಾಮಪತ್ರ ಸಲ್ಲಿಕೆ

ಬಿಜೆಪಿ ಮಕ್ಕಳು–ಮೊಮ್ಮಕ್ಕಳ ಪಕ್ಷವಲ್ಲ: ಸದಾನಂದ ಗೌಡ

Published:
Updated:
Prajavani

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಿ.ವಿ.ಸದಾನಂದಗೌಡ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಲುವಾಗಿ ನಡೆದ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ತೊಟ್ಟು ಹೆಜ್ಜೆಹಾಕಿದರು.

ಕುಟುಂಬ ಸದಸ್ಯರು, ಪಕ್ಷದ ಮುಖಂಡರೊಂದಿಗೆ ‌ಸಂಜಯನಗರದ ರಾಧಾಕೃಷ್ಣ ದೇವಸ್ಥಾನ ಹಾಗೂ ಮೈಸೂರು ಬ್ಯಾಂಕ್ ವೃತ್ತದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸದಾನಂದಗೌಡ, ‘ಉತ್ತಮ ಆಡಳಿತದಿಂದಾಗಿ ಕಳೆದ 5 ವರ್ಷಗಳಲ್ಲಿ ಭಾರತ ವಿಶ್ವದ 5 ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ ವಿಶ್ವದ ನಂ.1 ರಾಷ್ಟ್ರವಾಗಲಿದೆ’ ಎಂದರು.

‘ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮತದಾರರ ‌ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ರಾಮಚಂದ್ರಗೌಡ ಮಾತನಾಡಿ, ‘ಇಲ್ಲಿಯವರೆಗೆ ದೇಶವನ್ನು ಲೂಟಿ ಹೊಡೆದವರಿಗೆ ಮೋದಿಯಿಂದ ಆತಂಕ ಶುರುವಾಗಿದೆ. ಮೂಲೆಗುಂಪಾಗುವ ಆತಂಕದಿಂದ ಲೂಟಿಕೋರರು ಒಂದಾಗುತ್ತಿದ್ದಾರೆ. ಬಿಜೆಪಿ ಮಕ್ಕಳು-ಮೊಮ್ಮಕ್ಕಳ ಪಕ್ಷವಲ್ಲ’ ಎಂದರು.

ಶಾಸಕರಾದ ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಕೆ.ಪಿ.ನಂಜುಂಡಿ, ಪಕ್ಷದ ಮುಖಂಡ ಮುನಿರಾಜು, ಶ್ರುತಿ, ಕೆ.ಶಿವರಾಂ, ನರೇಂದ್ರ ಬಾಬು, ಎಸ್.ಹರೀಶ್, ಎ.ರವಿ, ಚಿ.ನಾ.ರಾಮು, ಮಹೇಶ್ವರಿ  ಜತೆಯಲ್ಲಿದ್ದರು.

ಸದಾನಂದಗೌಡ ಬಳಿ ₹18.15 ಕೋಟಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ₹15.59 ಕೋಟಿ ಸ್ಥಿರಾಸ್ತಿ ಮತ್ತು ₹2.56 ಕೋಟಿ ಚರಾಸ್ತಿ ಹೊಂದಿದ್ದಾರೆ.

₹10.34 ಕೋಟಿ ಸಾಲ ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪತ್ನಿ ಡಾಟಿ ಹೆಸರಿನಲ್ಲಿ ₹76.05 ಲಕ್ಷ ಚರಾಸ್ತಿ, ₹2.02 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ₹9 ಲಕ್ಷ ಸಾಲವೂ ಇದೆ.

‘ತುಕಡೇ ಗ್ಯಾಂಗ್‌ ಒಂದಾಗಿವೆ’

‘ಪ್ರಧಾನಿ ಮೋದಿ ಬಗ್ಗೆ ಆತಂಕಗೊಂಡಿರುವ ತುಕಡೇ ಗ್ಯಾಂಗ್‌ಗಳು ಒಂದಾಗಿವೆ’ ಎಂದು ನಟ ಜಗ್ಗೇಶ್ ಹೇಳಿದರು.

‘ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪರಿವರ್ತನೆ ಆರಂಭವಾಗಿರುವುದು ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಇದರಿಂದ ಆತಂಕಕ್ಕೆ ಈಡಾಗಿರುವರ ಬೇರೆಲ್ಲಾ ಪಕ್ಷಗಳು ಒಂದಾಗಿವೆ. ಇದರಿಂದಲೇ ಮೋದಿ ಎಂತಹ ಆಟಂ ಬಾಂಬ್ ಎಂಬುದು ಗೊತ್ತಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !