ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದಲ್ಲಿ ಅಸಮಾಧಾನ ಸ್ಫೋಟ

ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ
Last Updated 26 ಮಾರ್ಚ್ 2019, 20:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಕಾರ್ಯ
ಕರ್ತರೇ ಮಂಗಳವಾರ ಪ್ರತಿಭಟನೆ ನಡೆಸಿದರು. ‘ಗೋ ಬ್ಯಾಕ್‌ ಸೂರ್ಯ’ ಎಂದು ಘೋಷಣೆ ಕೂಗಿದರು.

ತೇಜಸ್ವಿ ಸೂರ್ಯ ಮಂಗಳವಾರ ಬೆಳಿಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಿ–ಫಾರಂ ಪಡೆದರು. ಬಳಿಕ ತೇಜಸ್ವಿನಿ ಅನಂತಕುಮಾರ್ ಮನೆಗೆ ತೆರಳಿದರು. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಜತೆಗಿದ್ದರು. ತೇಜಸ್ವಿನಿ ಅವರ ಮನೆ ಮುಂದೆ ನೂರಾರು ಬಿಜೆಪಿ ಕಾರ್ಯ
ಕರ್ತರು ಸೇರಿದ್ದರು.

ತೇಜಸ್ವಿ ಸೂರ್ಯ ಮನೆಗೆ ಬರುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರು 'ತೇಜಸ್ವಿ ಡೌನ್ ಡೌನ್, ಗೋ ಬ್ಯಾಕ್‌' ಎಂದು ಘೋಷಣೆಗಳನ್ನು ಕೂಗಿದರು. ಮಧ್ಯಪ್ರವೇಶಿಸಿದ ತೇಜಸ್ವಿನಿ ಅನಂತಕುಮಾರ್, 'ಯಾರೂ ಘೋಷಣೆ ಕೂಗಬೇಡಿ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು' ಎಂದು ಸಮಾಧಾನಪಡಿಸಿದರು. ಬಳಿಕ ತೇಜಸ್ವಿ ಮಾತನಾಡಲು ಮುಂದಾದರು. ‘ಇಲ್ಲಿ ಸಂವಾದ ಬೇಡ. ಚರ್ಚೆಯನ್ನು ಇಲ್ಲಿಗೆ ಮುಗಿಸೋಣ’ ಎಂದು ತೇಜಸ್ವಿನಿ ಪ್ರತಿಕ್ರಿಯಿಸಿದರು.

ರಾಜೀವ್ ಚಂದ್ರಶೇಖರ್ ಹೊರಬಂದು ಕಾರಿನಲ್ಲಿ ಕೂರುತ್ತಿದ್ದಂತೆ ಕಾರ್ಯಕರ್ತರು ಸುತ್ತುವರಿದು, ‘ಮೇಡಂಗೆ ಯಾಕೆ ಹೀಗಾಯ್ತು’ ಎಂದು ಪ್ರಶ್ನಿಸಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಉಸ್ತುವಾರಿ ಆರ್‌.ಅಶೋಕ್‌, ಶಾಸಕ ಸತೀಶ್‌ ರೆಡ್ಡಿ, ನಟಿ ತಾರಾ ಅವರು ಮಂಗಳವಾರ ಸಂಜೆ ತೇಜಸ್ವಿನಿ ಅವರ ಮನೆಗೆ ತೆರಳಿ ಸಮಾಲೋಚಿಸಿದರು.

ನಮಗೆ ಅಚ್ಚರಿಯಾಗಿದೆ: ‘ಈ ರೀತಿಯಾಗಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪುತ್ತದೆ ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ. ನಮಗೂ ಒಂದು ರೀತಿ ಆಶ್ಚರ್ಯವಾಗಿದೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿ ಸುಬ್ಬನರಸಿಂಹ (ಸುಬ್ಬಣ್ಣ) ಪ್ರತಿಕ್ರಿಯಿಸಿದರು.

‘ಆದರೆ, ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ತೇಜಸ್ವಿನಿ ಅವರಿಗೆ ಯಾಕೆ ಟಿಕೆಟ್‌ ತಪ್ಪಿಸಲಾಯಿತು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಈಗ ಪರೀಕ್ಷಾ ಕಾಲ. ಯುದ್ಧ ಘೋಷಣೆಯಾಗಿದೆ. ಕೇಂದ್ರದಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಹಾಗಾಗಿ ನಾವೆಲ್ಲಾ ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಲೇಬೇಕು. ತೇಜಸ್ವಿನಿ ಅವರನ್ನು ಪಕ್ಷ ಕೈ ಬಿಟ್ಟಿಲ್ಲ. ಅವರಿಗೆ ಪರ್ಯಾಯ ಗೌರವ ಹಾಗೂ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ’ ಎಂದರು.

ಬಿಜೆಪಿಯಲ್ಲಷ್ಟೇ ಸಾಧ್ಯ: ತೇಜಸ್ವಿ ಸೂರ್ಯ

'ಓ ದೇವರೇ, ನನಗೆ ಇದನ್ನು ನಂಬಲು ಆಗುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಮತ್ತು ದೊಡ್ಡ ರಾಜಕೀಯ ಪಕ್ಷದ ಅಧ್ಯಕ್ಷರು 28 ವರ್ಷದ ಯುವಕನ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ' ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ.

‘ಇದನ್ನು ಟೈಪಿಸುವ ವೇಳೆ ನನ್ನ ಕೈಗಳು ನಡುಗುತ್ತಿವೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವ ಅವಕಾಶ ಕಳೆದ ವರ್ಷ ಸಿಕ್ಕಿತ್ತು. ಒಂದು ಗಂಟೆ ನಮ್ಮಿಬ್ಬರ ಮಾತುಕತೆ ನಡೆಯಿತು. ಅದು ನನ್ನನ್ನು ಸಾಕಷ್ಟು ಪ್ರೇರೇಪಿಸಿತು. ಇದೇ ಗುಂಗಿನಲ್ಲಿ ನಾನು ಒಂದು ವಾರ ನಿದ್ರೆ ಮಾಡಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ತೇಜಸ್ವಿ ಸೂರ್ಯ ಯಾರು?

28ರ ಹರೆಯದ ತೇಜಸ್ವಿ ಸೂರ್ಯ ಅವರು ಕುಮಾರನ್ಸ್‌ ಶಾಲೆ, ಜಯನಗರ ನ್ಯಾಷನಲ್‌ ಕಾಲೇಜು, ರಾಷ್ಟ್ರೀಯ ಕಾನೂನು ಶಾಲೆಯ ಹಳೆ ವಿದ್ಯಾರ್ಥಿ. ಅವರು ಹೈಕೋರ್ಟ್‌ ವಕೀಲ. ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ. ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ. ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಆಂದೋಲನ ತಂಡದ ಸದಸ್ಯ.

ಮೋದಿ ವಿರೋಧಿಗಳು ಭಾರತ ವಿರೋಧಿಗಳು: ತೇಜಸ್ವಿ

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವವರು ಭಾರತದ ವಿರೋಧಿಗಳು’ ಎಂದು ತೇಜಸ್ವಿ ಸೂರ್ಯ ಪುನರುಚ್ಚರಿಸಿದರು.

ಮೋದಿ ವಿರೋಧಿಗಳು ಭಾರತದ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಈ ಹಿಂದೆ ಹೇಳಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಅವರ ಭಾಷಣದ ವಿಡಿಯೊ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದಲ್ಲಿ ಮೋದಿ ವಿರೋಧಿಗಳು ಎಲ್ಲೆ ಮೀರಿ ಹೇಳಿಕೆ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಮಾಡುವುದು ಸಹಜ. ಆದರೆ, ಅದಕ್ಕೆ ಒಂದು ಮಿತಿ ಇರಬೇಕು. ಅವರ ಹೇಳಿಕೆಗಳು ನಮ್ಮ ವಿರೋಧಿ ರಾಷ್ಟ್ರಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT