ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾರಿ ತಪ್ಪಿರುವುದು ಜನರೋ, ನಾವೋ?’: ಹನುಮಂತಯ್ಯ ವಿಶ್ಲೇಷಣೆ

Last Updated 26 ಮೇ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಕಲಿ ಹಿಂದುತ್ವವನ್ನು ಜನ ನಂಬುತ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ’ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು.

ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಮತ್ತು ಮಾ–ಲೆ ಅಧ್ಯಯನ ಕೂಟ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಲೋಕಸಭಾ ಚುನಾವಣಾ ಫಲಿತಾಂಶ–ಜನತಂತ್ರದ ಮುಂದಿರುವ ಸವಾಲುಗಳು’ ವಿಚಾರ ವಿನಿಯಮದಲ್ಲಿ ಅವರು ಮಾತನಾಡಿದರು.

‘ಸನಾತನ ಧರ್ಮವೇ ನಿಜವಾದ ಹಿಂದೂ ಧರ್ಮ ಎಂದು ಆರ್‌ಎಸ್ಎಸ್‌ನವರು ನಂಬಿದ್ದಾರೆ. ದಲಿತರು, ರೈತರು ಮತ್ತು ಕಾರ್ಮಿಕರ ಪರ ಅವರಿಲ್ಲ. ಎಲ್ಲರೂ ಒಟ್ಟಿಗೆ ಬದುಕಬೇಕು ಎಂಬುದು ನಮ್ಮ ನಂಬಿಕೆ. ಈ ಎರಡರ ನಡುವಿನ ಅಂತರವನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಮ್ಮಿಂದ ಸಾಧ್ಯವಾಗಿಲ್ಲ. ಹೀಗಾಗಿ, ಯಾವ ಹಿಂದೂಗಳ ಪರವಾಗಿ 50 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದೆವೋ, ಅವರು ನಮ್ಮನ್ನು ನಂಬುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚುನಾವಣಾ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಎಲ್ಲಾ ಭಾಷಣಗಳಲ್ಲೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ನಿರುದ್ಯೋಗ ಸಮಸ್ಯೆ, ರಫೆಲ್ ಭ್ರಷ್ಟಾಚಾರ, ರೈತರ ಸಾಲಮನ್ನಾ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಆದರೆ, ಅದನ್ನು ಜನ ಕೇಳಿಸಿಕೊಳ್ಳಲೇ ಇಲ್ಲ’ ಎಂದರು.

‘ನರೇಂದ್ರ ಮೋದಿ ಅವರು ಪುಲ್ವಾಮಾ ದಾಳಿ, ಯೋಧರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಬಿಟ್ಟು ಬೇರೇನೂ ಮಾತನಾಡಲಿಲ್ಲ. ಜನ ತಮ್ಮ ಬದುಕಿನ ಸಮಸ್ಯೆಗಳಿಗಿಂತ ದೇಶ ಮುಖ್ಯ ಎನ್ನುತ್ತಿದ್ದಾರೆ.ದಾರಿತಪ್ಪಿರುವುದು ಜನರೋ ಅಥವಾ ನಾವೋ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಶಸ್ತ್ರಾಸ್ತ್ರ ಹೊಂದಿದ 10 ಲಕ್ಷ ಜನರಿದ್ದಾರೆ’

‘ಬಿಜೆಪಿ ವಿರುದ್ಧದ ಧ್ವನಿ ಅಡಗಿಸಲು ಸಂಘ–ಪರಿವಾರದಲ್ಲಿ ತರಬೇತಿ ಪಡೆದ ಶಸ್ತ್ರಸಜ್ಜಿತ 10 ಲಕ್ಷ ಮಂದಿ ಸಜ್ಜಾಗಿದ್ದಾರೆ’ ಎಂದುಕಮ್ಯುನಿಸ್ಟ್‌ ಮುಖಂಡ ಎಸ್. ಬಾಲನ್ ಹೇಳಿದರು.

‘ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಮುಗಿಸಿದ್ದಾರೆ. ಮುಂದೆ ಕೂಡ ಇವರ ಕಾರ್ಯಾಚರಣೆ ಮುಂದುವರಿಯಲಿದೆ.ಇವರನ್ನು ಎದುರಿಸಲು ನಾವೇನು ಮಾಡಬೇಕು ಎಂಬುದರ ಬಗ್ಗೆಯೂ ಆಲೋಚಿಸಬೇಕು’ ಎಂದರು.

‘ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತಮಿಳುನಾಡಿನಲ್ಲಿ ನಡೆದ ರೀತಿಯ ತೀವ್ರ ತೆರನಾದ ಹೋರಾಟಗಳು ಬೇರೆ ರಾಜ್ಯಗಳಲ್ಲಿ ನಡೆಯಲಿಲ್ಲ. ಹೀಗಾಗಿಯೇ ತಮಿಳುನಾಡು ಬಿಟ್ಟು ಬೇರೆ ಕಡೆಗಳಲ್ಲಿ ಬಿಜೆಪಿ ಗಟ್ಟಿ ನೆಲೆ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಾದರೂ ನಾವು ಬೀದಿಗಳಿದು ಹೋರಾಟ ನಡೆಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT