ಭಾನುವಾರ, ಆಗಸ್ಟ್ 18, 2019
24 °C

ದೃಷ್ಟಿಮಾಂದ್ಯರಿಗೆ ಕಣ್ಣಾದ ‘ಧ್ವನಿಧಾರೆ’

Published:
Updated:
Prajavani

ಆಕಾಶವಾಣಿ ಎಫ್‌.ಎಂ. ರೈನ್‌ಬೊ ಅರೆಕಾಲಿಕ ಕಾರ್ಯಕ್ರಮ ನಿರ್ವಾಹಕರು (ಆರ್‌.ಜೆ.) ಹುಟ್ಟು ಹಾಕಿದ ‘ಪ್ರತಿಬಿಂಬ’ ಟ್ರಸ್ಟ್‌, ದೃಷ್ಟಿಮಾಂದ್ಯರಿಗೂ ಎಲ್ಲ ಬಗೆಯ ಸಾಹಿತ್ಯ ಓದಲು ಸಿಗುವಂತಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಆಡಿಯೊ ಪುಸ್ತಕ ಮಾಲಿಕೆ ‘ಧ್ವನಿಧಾರೆ’ಯನ್ನು ಹೊರತಂದಿದೆ.

ಬ್ರೈಲ್‌ ಲಿಪಿಯಲ್ಲಿ ದೊರೆಯದ ಸಾಹಿತ್ಯ ಕನ್ನಡ ಮತ್ತು ಇಂಗ್ಲಿಷ್‌ನ ಆಯ್ದ ಕತೆ, ಕವನ, ಪ್ರವಾಸ ಕಥನ ಸಾಹಿತ್ಯ ಧ್ವನಿಧಾರೆ ಆಡಿಯೊ ಮಾಲಿಕೆಯಲ್ಲಿ ಲಭ್ಯ.  ಪಂಚತಂತ್ರ, ಈಸೋಪನ ನೀತಿ ಕತೆ, ವಿಜ್ಞಾನ ಮಾಲಿಕೆ, ವ್ಯಕ್ತಿ ಪರಿಚಯ, ನೀಳ್ಗತೆಗಳನ್ನು ಧ್ವನಿಮುದ್ರಿಸಿ ಅಂಧ ಮಕ್ಕಳಿಗೆ ಉಚಿತವಾಗಿ ವಿತರಿಸಲು ಟ್ರಸ್ಟ್‌ ನಿರ್ಧರಿಸಿದೆ. 
ಮಾಗಡಿ ರಸ್ತೆಯ ದೀಪಾ ವಿಶೇಷ ಮಕ್ಕಳ ಶಾಲೆ ಮಕ್ಕಳಿಗೆ ಧ್ವನಿಹೊತ್ತಿಗೆ ವಿತರಿಸಿ ಧ್ವನಿಧಾರೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಅಡಿಯೊದಲ್ಲಿ ಕತೆ ಕೇಳಿ  ಮಕ್ಕಳು ಸಂಭ್ರಮಪಟ್ಟಿದ್ದಾರೆ. ಅವರ ಮೊಗದಲ್ಲಿ ಅರಳಿದ ಸಂತಸ ಕಂಡು ಶ್ರಮ ಸಾರ್ಥಕ ಎಂಬ ಧನ್ಯತಾಭಾವ ಪ್ರತಿಬಿಂಬ ಟೀಂ ಸದಸ್ಯರಲ್ಲಿ ಮೂಡಿದೆ.

ವಿನೂತನ ಪ್ರಯತ್ನ
ದೃಷ್ಟಿಮಾಂಧ್ಯರಿಗಾಗಿ ಧ್ವನಿ ಹೊತ್ತಿಗೆ, ಅಡಿಯೊ ಬುಕ್ಸ್‌ ಅಥವಾ ಧ್ವನಿಸುವ ಅಕ್ಷರಲೋಕ ಕನ್ನಡದಲ್ಲಿ ಹೊಸ ಪ್ರಯತ್ನ ಎನ್ನುತ್ತಾರೆ ಧ್ವನಿಧಾರೆಯ ರೂವಾರಿಗಳಾದ ಜ್ಯೋತಿ ಪ್ರಶಾಂತ್, ತೇಜಾ ಅನ್ನದಾನಯ್ಯ, ನಾಗರಾಜ್ ವಸಿಷ್ಠ ಹಾಗೂ ಅಮೂಲ್ಯ ಎಸ್. 
ಸುಲಭವಾಗಿ ಎಲ್ಲ ಪುಸ್ತಕಗಳನ್ನೂ ಆಲಿಸಲು ಮತ್ತು ಅರ್ಥೈಸಿಕೊಳ್ಳಲು ಧ್ವನಿಧಾರೆ ದೃಷ್ಟಿದೋಷವುಳ್ಳ ಸಾಹಿತ್ಯಾಸಕ್ತರಿಗೆ ನೆರವಾಗಲಿ ಎನ್ನುವುದು ತಂಡದ ಮಹದಾಸೆ. ಸಂಪರ್ಕ ಸಂಖ್ಯೆ: 9353213946/9483816419 

ಮನೆಯಲ್ಲೇ ಸ್ಟುಡಿಯೊ
ಬೇಸಿಗೆ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ‘ಚಿನ್ನರ ಕತೆ’ಯ 8 ಕತೆಗಳಿಗೆ ಧ್ವನಿ ನೀಡಿದ್ದಾರೆ. ಕಾಯ್ಕಿಣಿ ಅವರ ಏಳು ಕವನ, ನೇಮಿಚಂದ್ರರ ಕತೆ, ಎರಡು ಸಣ್ಣಕತೆ, ಒಂಬತ್ತು ವ್ಯಕ್ತಿಗಳ ಪರಿಚಯ ಅಡಿಯೊ ಈಗಾಗಲೇ ಧ್ವನಿಧಾರೆಯಲ್ಲಿ ಸಿದ್ಧವಾಗಿವೆ.

ಉತ್ತರಹಳ್ಳಿಯಲ್ಲಿರುವ ತಂಡದ ಸದಸ್ಯರೊಬ್ಬರ ಮನೆಯ ಕೊಠಡಿಯೇ ರೆಕಾರ್ಡಿಂಗ್‌ ಸ್ಟುಡಿಯೊ ಆಗಿ ಬದಲಾಗಿದೆ. ಕತೆಗಳ ಸಂದರ್ಭ, ಓದಿನ ಭಾವಕ್ಕೆ ತಕ್ಕಂತೆ ಸಂಗೀತ ಅಳವಡಿಸಲಾಗುತ್ತದೆ. ಕಾಡಿನ ಕತೆಗಳಿಗೆ ಪ್ರಾಣಿಗಳು ಘೀಳಿಡುವ ಮತ್ತು ಹಕ್ಕಿಗಳ ಚಿಲಿಪಿಲಿ ಧ್ವನಿ ಹಿನ್ನೆಲೆಯಲ್ಲಿ ಮೂಡಿಬರುತ್ತದೆ. ನದಿ,ಜಲಪಾತ ಪ್ರಸ್ತಾಪ ಬಂದರೆ ನೀರಿನ ಶಬ್ದ ಕೇಳುತ್ತದೆ.

ನೂರು ಪುಟಗಳ ಪುಸ್ತಕವನ್ನು ಆಡಿಯೊಗೆ ಅಳವಡಿಸಲು ಆರು ಸಾವಿರ ರೂಪಾಯಿ ಖರ್ಚಾಗುತ್ತದೆ. ಭಾರತದ ಯಾವುದೇ ಲೇಖಕ ಮತ್ತು ಪ್ರಕಾಶನದ ಪುಸ್ತಕಗಳನ್ನು ಅಡಿಯೊಕ್ಕೆ ಅಳವಡಿಸಲು ಅನುಮತಿ ಬೇಕಾಗಿಲ್ಲ. ಇನ್ನುಳಿದ ಖರ್ಚು ಭರಿಸಬೇಕಾಗಿದೆ. ತಂಡದ ಸದಸ್ಯರು ಹಣ ಹೂಡಿದ್ದು, ಸ್ನೇಹಿತರು, ಸಂಘ, ಸಂಸ್ಥೆ ನೆರವು ನೀಡಿವೆ. 

Post Comments (+)