ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಸಿಬ್ಬಂದಿಗೆ ಬಸ್‌ ಪಾಸೇ ಐ.ಡಿ ಕಾರ್ಡ್‌; ದಶಕದ ಗೋಳು

ಬಿಎಂಟಿಸಿ ನೌಕರರ ದಶಕದ ಗೋಳು; ಬ್ಯಾಂಕ್‌ ವ್ಯವಹಾರ, ದಾಖಲೆಗಳಿಗೆ ‘ಗುರುತಿನ’ ತೊಡಕು
Last Updated 24 ಅಕ್ಟೋಬರ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಸಿಬ್ಬಂದಿಗೆ ಗುರುತಿನ ಚೀಟಿಯನ್ನೇ ವಿತರಿಸಿಲ್ಲ.

ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಮಾಹಿತಿಗೆ ‘ಸಂಸ್ಥೆಯಿಂದ ಸಿಬ್ಬಂದಿಗೆ ಗುರುತಿನ ಚೀಟಿ ವಿತರಿಸಲಾಗಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಉಚಿತ ಪ್ರಯಾಣ ಸೌಲಭ್ಯದ ಬಸ್‌ ಪಾಸನ್ನೇ ಗುರುತಿನ ಚೀಟಿ ಎಂದು ನಂಬಿಸಲಾಗಿದೆ. ಈ ಬಗ್ಗೆ ಕೇಳಿದರೆ ನಮ್ಮ ಹಿರಿಯ ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ’ ಎಂದು ಈ ಬಗ್ಗೆ ಹೋರಾಟ ನಡೆಸುತ್ತಿರುವ ಯೋಗೇಶ್‌ ಗೌಡ ಅಳಲು ತೋಡಿಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ ನಿಗಮದ ಕಚೇರಿ ಸಹಿತ ವಿವಿಧ ಕಡೆಗಳಲ್ಲಿ ವಾಸ್ತವ ಪರಿಶೀಲಿಸಿದಾಗ, ಸಿಬ್ಬಂದಿ ಬಸ್‌ಪಾಸನ್ನೇ ಗುರುತಿನ ಚೀಟಿ ಎಂದು ತೋರಿಸಿದರು.

ಕಚೇರಿ ಸಿಬ್ಬಂದಿಯೂ ಇದೇ ಪಾಸ್ ತೋರಿಸಿ, ‘ನಿಗಮದ ಗುರುತಿನ ಚೀಟಿ ಕೊಡಿ ಎಂದು ಹಲವಾರು ವರ್ಷಗಳಿಂದ ಅಧಿಕಾರಿಗಳಿಗೆ ಕೋರಿದ್ದೇವೆ. ಯಾರೂ ಸ್ಪಂದಿಸಿಲ್ಲ. ಕೆಲಕಾಲ ಸ್ಮಾರ್ಟ್‌ ಕಾರ್ಡ್‌ ಕೊಟ್ಟಿದ್ದರು. ಮೂರು ವರ್ಷಗಳಿಗೊಮ್ಮೆ ಅದನ್ನು ನವೀಕರಿಸಬೇಕಿತ್ತು. ಆದರೆ, ನವೀಕರಿಸಲೇ ಇಲ್ಲ. ಬಹಳ ಹಿಂದೆ ನೀಡಲಾದ ಬಸ್‌ ಪಾಸ್‌ ಕೂಡಾ ಹರಿದುಹೋಗುವ ಹಂತಕ್ಕೆ ಬಂದಿದೆ’ ಎಂದರು.

‘ಪ್ರಯಾಣದ ಪಾಸಲ್ಲೂ ಸಾರಿಗೆ ನಿಗಮದ ಎಲ್ಲ ವಿಭಾಗಗಳ ಬಸ್‌ಗಳಲ್ಲಿ ಪ್ರಯಾಣದ ಅವಕಾಶ ಕೊಡಬೇಕಿತ್ತು. ಅದರಲ್ಲಿರುವ ಮಾಹಿತಿ ಅಸ್ಪಷ್ಟವಾಗಿದೆ.ಕೆಎಸ್‌ಆರ್‌ಟಿಸಿಯಲ್ಲೂ ಈ ಸಮಸ್ಯೆ ಇದೆ. ಗುರುತಿನ ಚೀಟಿ ಒದಗಿಸುವ ಬಗ್ಗೆ ನಮ್ಮ ಒತ್ತಾಯ ಮುಂದುವರಿದಿದೆ’ ಎಂದು ಮಹಿಳಾ ಸಿಬ್ಬಂದಿ ಹೇಳಿದರು.

ಬ್ಯಾಂಕ್‌ ವ್ಯವಹಾರಕ್ಕೆ ಸಮಸ್ಯೆ: ಗುರುತಿನ ಚೀಟಿ ಇಲ್ಲದಿರುವುದು ಬ್ಯಾಂಕ್‌ ವ್ಯವಹಾರದ ಸಂದರ್ಭದಲ್ಲಿ ತೀರಾ ಸಮಸ್ಯೆ ಆಗಿದೆ. ಬಸ್‌ಪಾಸ್‌ ತೋರಿಸಿದರೆ ಬ್ಯಾಂಕ್‌ ಸಿಬ್ಬಂದಿ ಅದನ್ನು ಒಪ್ಪುವುದಿಲ್ಲ. ಮಾತ್ರವಲ್ಲ ಸಿಬ್ಬಂದಿ ಸಾಲಕ್ಕೆ ಅರ್ಜಿ ಹಾಕಿದ ಸಂದರ್ಭದಲ್ಲಿ ‘ಇವರು ನಮ್ಮ ಸಿಬ್ಬಂದಿ’ ಎಂಬ ದೃಢೀಕರಣ ಪತ್ರವನ್ನೂ (Undertaking letter) ಸಂಸ್ಥೆ ಕೊಡುತ್ತಿಲ್ಲ ಎಂದು ಹೇಳಿದರು. ಅಲ್ಲದೆ ದೃಢೀಕರಣ ಪತ್ರ ನೀಡದಂತೆ ಕಿರಿಯ ಹಂತದ ಅಧಿಕಾರಿಗಳಿಗೆ ನಿಗಮ ಬರೆದ ಸೂಚನಾ ಪತ್ರವನ್ನು ತೋರಿಸಿದರು.

ಮನೆ ಕಟ್ಟುವುದು, ಮಕ್ಕಳ ವಿದ್ಯಾಭ್ಯಾಸ, ಕಾಯಿಲೆ ಅಥವಾ ಇನ್ಯಾವುದೇ ತುರ್ತು ಸಂದರ್ಭದಲ್ಲಿ ಸಾಲ ಪಡೆಯಲು ಅಥವಾ ದಾಖಲೆ ರೂ‍ಪಿಸಲು ಗುರುತಿನ ಚೀಟಿ ಇಲ್ಲದಿರುವುದೇ ಸಮಸ್ಯೆಯಾಗಿದೆ. ಮಾತ್ರವಲ್ಲ ನಾವು ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಕುಟುಂಬದವರೇ (ವಿವಾಹ ಸಂಬಂಧಗಳ ಸಂದರ್ಭ) ನಂಬದಂತಹ ಘಟನೆಗಳೂ ನಡೆದಿವೆ ಎಂದು ವಾಸ್ತವಾಂಶ ತೆರೆದಿಟ್ಟರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಸಂಚಾರ ವಿಭಾಗದ ವ್ಯವಸ್ಥಾಪಕ ಕೆ.ಆರ್‌.ವಿಶ್ವನಾಥ್‌, ‘ನಿಗಮದ ಎಲ್ಲ ಸಿಬ್ಬಂದಿಗೂ ಗುರುತಿನ ಚೀಟಿ ಇದೆ. ಕೊಟ್ಟಿಲ್ಲ ಎಂದು ಯಾರೋ ಹೇಳಿರಬಹುದು. ಹಾಗೇನೂ ಆಗಿಲ್ಲ’ ಎಂದರು.

ಇನ್ನೊಂದು ಮುಖ...: ‘ಸಂಸ್ಥೆಯ ಕೆಲವು ಸಿಬ್ಬಂದಿ ಸಾಲ ಪಡೆದು ಸುಸ್ತಿದಾರರಾದ ಪ್ರಕರಣಗಳು ನಡೆದಿವೆ. ಆಗ ಹಣಕಾಸು ಸಂಸ್ಥೆಗಳು ನಿಗಮಕ್ಕೆ ಪತ್ರ ಬರೆದು ಅವರ ವೇತನದ ಹಣ ಕಡಿತಗೊಳಿಸಿ ಕೊಡುವಂತೆ ಪತ್ರ ಬರೆಯುತ್ತಿದ್ದವು. ನಿಗಮಕ್ಕೆ ಇದು ತಲೆನೋವಾಗಿ ಪರಿಣಮಿಸಿತ್ತು. ನಿಯಮದ ಪ್ರಕಾರ ಅದು ಅಸಾಧ್ಯ. ನೌಕರರೂ ಈ ಸಮಸ್ಯೆ ಎದುರಿಸಬಾರದು. ಆದ್ದರಿಂದ ನಿವೇಶನ/ ಮನೆ ಕೊಳ್ಳುವುದು, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಕಾರಣ, ನಿಗಮದ ಸಹಕಾರ ಸಂಘಗಳಲ್ಲಿ ಸಾಲ ಪಡೆಯುವುದಿದ್ದರೆ ಮಾತ್ರ ದೃಢೀಕರಣ ಪತ್ರ ಕೊಡುತ್ತೇವೆ. ಉಳಿದ ಯಾವುದೇ ಸಾಲಕ್ಕೆ ಪತ್ರ ಕೊಡಲಾಗುವುದಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಯಾರೋ ಮಾಡಿದ ತಪ್ಪಿಗೆ ಇಡೀ ಸಂಸ್ಥೆಯ ನೌಕರರಿಗೆ ಗುರುತಿನ ಚೀಟಿ ನೀಡದಿರುವುದು, ಸೌಲಭ್ಯ ನಿರಾಕರಿಸುವುದು ತಪ್ಪು. ಕೆಲವರಿಗೆ ಮಾತ್ರ ದೃಢೀಕರಣ ಪತ್ರ ನೀಡಿದ ಉದಾಹರಣೆಗಳೂ ಇವೆ. ಈ ತಾರತಮ್ಯ ನಿಲ್ಲಬೇಕು. ನಿಗಮದ ಅಧಿಕಾರಿಗಳೂ ನೌಕರರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು’ ಎಂದು ಯೋಗೇಶ್‌ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT