ಮಂಗಳವಾರ, ಡಿಸೆಂಬರ್ 10, 2019
26 °C
ಇತಿಹಾಸದ ಪುಟ ಸೇರಿದ ಬಿಎಂಟಿಸಿಯ ಅತಿ ಉದ್ದನೆಯ ಮಾರ್ಗ

ದಟ್ಟಣೆಗೆ ಬೆಚ್ಚಿ ಓಡಾಟ ನಿಲ್ಲಿಸಿದ ಬಿಎಂಟಿಸಿಯ 600ನೇ ನಂಬರಿನ ಬಸ್‌!

ಭೀಮಣ್ಣ ಮಾದೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದು ಅಂತಿಂಥ ಬಸ್‌ ಮಾರ್ಗವಲ್ಲ. ಬಿಎಂಟಿಸಿಯ ಅತಿ ಉದ್ದನೆಯ ರೂಟ್‌ ಎಂಬ ಹಿರಿಮೆಯೇ ಇದಕ್ಕಿತ್ತು. ಭೂಮಿಯನ್ನು ಚಂದ್ರ ಸುತ್ತು ಹಾಕುವಂತೆ 600ನೇ ನಂಬರಿನ ಬಸ್‌ ನಗರವನ್ನು ಒಂದು ಪೂರ್ಣ ಸುತ್ತನ್ನು ಹಾಕಿಕೊಂಡು ಬರುತ್ತಿದ್ದ ಮಾರ್ಗವದು. ದಿನೇ ದಿನೆ ಹೆಚ್ಚುತ್ತಿರುವ ದಟ್ಟಣೆಗೆ ಈ ಮಾರ್ಗದಲ್ಲಿ ಓಡುತ್ತಿದ್ದ ಬಸ್‌ ಎಷ್ಟೊಂದು ಬೆಚ್ಚಿ ಬಿತ್ತು ಎಂದರೆ ಅದೀಗ ತನ್ನ ಸಂಚಾರವನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದೆ!

ಹೌದು, ಬಿಎಂಟಿಸಿಯಿಂದ ಕಾರ್ಯಾಚರಣೆ ನಡೆಸುವ ಮಾರ್ಗಗಳಲ್ಲಿ 600ನೇ ನಂಬರ್‌ ಬಸ್‌ನ ಮಾರ್ಗವೇ ಅತೀ ಉದ್ದದ್ದು. ಈ ಬಸ್‌ ತನ್ನ 117 ಕಿ.ಮೀ ಪ್ರಯಾಣವನ್ನು ಬನಶಂಕರಿಯ ನಿಲ್ದಾಣದಿಂದ ಪ್ರಾರಂಭಿಸಿ ಮತ್ತೆ ಅಲ್ಲಿಗೇ ಬಂದು ಕೊನೆಗೊಳಿಸುತ್ತಿತ್ತು. 

ಸಂಚರಿಸುತ್ತಿದ್ದ ಮಾರ್ಗ: ರಾಗಿಗುಡ್ಡ, ಜಯದೇವ ಆಸ್ಪತ್ರೆ, ಕುವೆಂಪುನಗರ, ಸಿಲ್ಕ್‌ ಬೋರ್ಡ್‌, ಬೊಮ್ಮನಹಳ್ಳಿ, ಕೂಡ್ಲುಗೇಟ್‌, ಹೊಸ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ, ವರ್ತೂರು, ವೈಟ್‌ಫೀಲ್ಡ್‌, ಟಿನ್ ಫ್ಯಾಕ್ಟರಿ ಹಾಗೂ ಕೆಂಗೇರಿ ಸೇರಿದಂತೆ 158 ನಿಲುಗಡೆ ತಾಣಗಳ ಮೂಲಕ ಸಂಚರಿಸಿ ನಗರ ಪ್ರದಕ್ಷಿಣೆ ಹಾಕುತ್ತಿತ್ತು. ಇದಕ್ಕೆ ಬರೋಬ್ಬರಿ ಅದು 5.30 ಗಂಟೆ ತೆಗೆದುಕೊಳ್ಳುತ್ತಿತ್ತು. ವಾಹನ ದಟ್ಟಣೆ ಇದ್ದಾಗ ಇದಕ್ಕಿಂತಲೂ ಹೆಚ್ಚು ಸಮಯ ಹಿಡಿಯುತ್ತಿತ್ತು.

ಸಂಚಾರ ಸ್ಥಗಿತಗೊಳ್ಳಲು ಕಾರಣ? ಬಸ್‌ ಸಂಚಾರ ಸ್ಥಗಿತಗೊಳ್ಳಲು ಮುಖ್ಯವಾಗಿ ನಗರದ ವಾಹನ ದಟ್ಟಣೆಯೇ ಕಾರಣ. ದಟ್ಟಣೆಯ ಕಾರಣದಿಂದಾಗಿ ‘ಪಾರ್ಕಿಂಗ್‌ ಪ್ರದೇಶ’ಗಳೆಂದು ಕುಹಕಕ್ಕೆ ಒಳಗಾದ ಸಿಲ್ಕ್‌ ಬೋರ್ಡ್, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಟಿನ್‌ ಫ್ಯಾಕ್ಟರಿ ಪ್ರದೇಶಗಳನ್ನು ದಾಟಲು ಬಸ್‌ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಹೀಗಾಗಿ ದಿನಕ್ಕೆ ಒಂದೇ ಟ್ರಿಪ್‌ ಪೂರೈಸಲು ಈ ಬಸ್‌ಗೆ ಸಾಧ್ಯವಾಗುತ್ತಿತ್ತು.

ಅಲ್ಲದೆ, ಚಾಲಕರು ಚಹಾ ಕುಡಿಯಲು ಮಾರ್ಗ ಮಧ್ಯೆ ಬಸ್‌ ನಿಲ್ಲಿಸಿದಾಗ ಪ್ರಯಾಣಿಕರು ತಾಳ್ಮೆ ಕಳೆದುಕೊಂಡು ಚಾಲಕ ಹಾಗೂ ನಿರ್ವಾಹಕರೊಂದಿಗೆ ಜಗಳ ಕಾಯುತ್ತಿದ್ದರು. ದಟ್ಟಣೆಯ ಹಾದಿಯಲ್ಲೇ ಹೋಗಬೇಕಿದ್ದ ಕಾರಣ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಚಾಲಕ ಮತ್ತು ನಿರ್ವಾಹಕರು ಹಿಂದೇಟು ಹಾಕುತ್ತಿದ್ದರು. ಯಾರಾದರೂ ಸಿಬ್ಬಂದಿ ತರಲೆ ಮಾಡಿದರೆ ಶಿಕ್ಷೆಯ ರೂಪದಲ್ಲಿ ಈ ಮಾರ್ಗದಲ್ಲಿಯೇ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು ಎಂದು ಬಿಎಂಟಿಸಿಯ ಬನಶಂಕರಿ ಘಟಕದ ಅಧಿಕಾರಿಗಳು ಹೇಳುತ್ತಾರೆ.

ಬದಲಿ ವ್ಯವಸ್ಥೆ: ಸಂಚಾರ ದಟ್ಟಣೆಯ ಕಾರಣ ಆ ಮಾರ್ಗದ ಬಸ್‌ಗಳನ್ನು ನಿಲ್ಲಿಸಿದ ಮೇಲೆ 500 ಹಾಗೂ 501ನೇ ನಂಬರಿನ ಬಸ್‌ಗಳ ಸೇವೆ ಆರಂಭಿಸಲಾಗಿದೆ. ಈ ಬಸ್‌ಗಳ ಸಂಚಾರವೂ ಬನಶಂಕರಿಯಿಂದ ಪ್ರಾರಂಭವಾಗಿ ಬನಶಂಕರಿಗೆ ಕೊನೆಗೊಳ್ಳುತ್ತದೆ. ಇವು ಮಾರ್ಗ ಸಂಖ್ಯೆ 600ರ ಬಸ್‌ ಸಂಚರಿಸುತ್ತಿದ್ದ ಕೆಲವು ಸ್ಥಳಗಳನ್ನು ಹೊರತುಪಡಿಸಿ, ಒಂದಿಷ್ಟು ಉದ್ದವನ್ನೂ ಕಡಿತ ಮಾಡಿಕೊಂಡು 76 ಕಿ.ಮೀ. ದೂರ ಸಂಚರಿಸುತ್ತವೆ. ಈ ಪ್ರಯಾಣಕ್ಕೂ 3.30 ಗಂಟೆ ಹಿಡಿಯುತ್ತದೆ. 

‘ಉದ್ದ ಮಾರ್ಗದ ಆ ಬಸ್‌ನ ಅಗತ್ಯ ಈಗಿಲ್ಲ. ಜನ ತಾವು ಪ್ರಯಾಣಿಸುವ ನಿರ್ದಿಷ್ಟ ಸ್ಥಳದ ಬಸ್‌ಗಳನ್ನೇ ಬಯಸುತ್ತಾರೆ. ಅದಕ್ಕಾಗಿ ಸದ್ಯ ಬೇರೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಸಂಚಾರ ನಿಯಂತ್ರಣಾಧಿಕಾರಿ ಮಂಜುನಾಥ ವಿವರಿಸುತ್ತಾರೆ.

**

ಮಾರ್ಗ 600ರ ವಿಶೇಷಗಳು

117 ಕಿ.ಮೀ - ಸಂಚರಿಸುತ್ತಿದ್ದ ದೂರ

5.30 ಗಂಟೆ - ತೆಗೆದುಕೊಳ್ಳುತ್ತಿದ್ದ ಅವಧಿ

158  - ನಿಲುಗಡೆ ತಾಣಗಳು

10 - ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆ

**

ಸಂಚಾರ ತಡವಾಗುತ್ತಿದ್ದಂತೆ ತಾಳ್ಮೆ ಇಲ್ಲದ ಜನರು ಜಗಳ ಕಾಯುತ್ತಿದ್ದರು. ಇಂಧನ ಸಹ ಹೆಚ್ಚು ವ್ಯಯವಾಗುತ್ತಿತ್ತು. ಅದಕ್ಕಾಗಿ ಈ ಬಸ್‌ ನಿಲ್ಲಿಸಲಾಗಿದೆ.
- ಮಂಜುನಾಥ, ಸಂಚಾರ ನಿಯಂತ್ರಣಾಧಿಕಾರಿ, ಬಿಎಂಟಿಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು