ಭಾನುವಾರ, ಡಿಸೆಂಬರ್ 15, 2019
26 °C
ನೌಕರರ ಬಾಕಿ ಪಾವತಿಗೆ ಸಿದ್ಧತೆ

ಬಿಎಂಟಿಸಿಗೆ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನ: ಕೊನೆಗೂ ಬಂತು ₹ 100 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ನಲುಗಿ ನೌಕರರ ಸೌಲಭ್ಯ ಸಂಬಂಧಿ ಬಾಕಿ ಮೊತ್ತ ಪಾವತಿಸಲೂ ಪರದಾಡುತ್ತಿದ್ದ ಬಿಎಂಟಿಸಿ ಕೊನೆಗೂ ನಿರಾಳವಾಗಿದೆ.

ರಾಜ್ಯ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಿದ್ದ ₹ 100 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಿಂದಾಗಿ 2017 ಮೇಯಿಂದ 2018ರ ಜೂನ್‌ ಅವಧಿಯಲ್ಲಿ ನಿವೃತ್ತರಾದ/ ರಾಜೀನಾಮೆ ನೀಡಿದ/ ಮರಣ ಹೊಂದಿದ ನೌಕರರ ಉಪಧನ ಹಾಗೂ ಗಳಿಕೆ ರಜೆ ನಗದೀಕರಣದ ಬಾಕಿ ಮೊತ್ತವನ್ನು ಪಾವತಿಸಲು ಅನುಕೂಲವಾಗಿದೆ. ನಿಗಮವು ಬಾಕಿ ಮೊತ್ತ ಪಾವತಿಸುವ ದಿನಾಂಕವನ್ನೂ ಪ್ರಕಟಿಸಿದೆ. 

2017–18ನೇ ಸಾಲಿನಲ್ಲಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಚಾಲಕ– ನಿರ್ವಾಹಕರ ಪೈಕಿ 38 ಜನ ಮೃತಪಟ್ಟಿದ್ದರು. 127 ನೌಕರರು ನಿವೃತ್ತರಾಗಿದ್ದರು. 

‘ನೌಕರರ ದೀರ್ಘ ಕಾಲದ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಿರುವುದು ಹರ್ಷ ಉಂಟು ಮಾಡಿದೆ’ ಎಂದು ಈ ಬಗ್ಗೆ ಹೋರಾಟ ನಡೆಸಿದವರಲ್ಲೊಬ್ಬರಾದ ಯೋಗೇಶ್‌ ಗೌಡ ಹೇಳಿದರು.

ನೌಕರರ ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿ ಆಸ್ಪತ್ರೆಗಳಿಗೆ ಪಾವತಿಸಬೇಕಾದ ₹ 65 ಲಕ್ಷ ಮೊತ್ತ ಬಾಕಿ ಉಳಿದಿದೆ. ವಿದ್ಯಾರ್ಥಿ ಬಸ್‌ ಪಾಸ್‌, ವಿವಿಧ ರಿಯಾಯಿತಿ ಪಾಸ್‌ಗಳ ಮೊತ್ತ, ಜೆ ನರ್ಮ್‌ ಯೋಜನೆಯ ಅನುದಾನ, ವಿಶೇಷ ಅಭಿವೃದ್ಧಿ ಯೋಜನೆ, ಬಂಡವಾಳ ವೆಚ್ಚಗಳ ಅಡಿ ಮೂಲಸೌಲಭ್ಯ ಅಭಿವೃದ್ಧಿಪಡಿಸುವ ಯೋಜನೆಗೆ ಸಂಬಂಧಿಸಿ ಸರ್ಕಾರದಿಂದ ಪಾವತಿಯಾಗಬೇಕಾದ ಪ್ರಸಕ್ತ ಸಾಲಿನ ಅನುದಾನ ಬಾಕಿ ಇದೆ.

ಸಾಲ, ಬಾಕಿ ಅನುದಾನ ಸೇರಿ ಸುಮಾರು ₹ 971 ಕೋಟಿ ಆರ್ಥಿಕ ಹೊರೆಯನ್ನು ನಿಗಮ ಎದುರಿಸುತ್ತಿತ್ತು. ಈಗ ₹ 100 ಕೋಟಿ ಪಾವತಿಯಾಗಿದೆ. ಉಳಿದ ಮೊತ್ತಗಳೆಲ್ಲ ಪಾವತಿಯಾದರೆ ನಿರ್ವಹಣಾ ವೆಚ್ಚವನ್ನು ಸರಿದೂಗಿಸಬಹುದು ಎಂದು ಬಿಎಂಟಿಸಿ ಮೂಲಗಳು ಹೇಳಿವೆ. 

‘ಈ ಹಣವನ್ನು ನೌಕರರ ನಿವೃತ್ತಿ, ರಾಜೀನಾಮೆ ಅಥವಾ ಮರಣ ಹೊಂದಿದ ದಿನಾಂಕದ ಜ್ಯೇಷ್ಠತೆಗೆ ಅನುಗುಣವಾಗಿ ನೀಡಲಾಗುವುದು. ನೌಕರರು ಅಥವಾ ಅವರ ಅವಲಂಬಿತರು ವಿಭಾಗೀಯ ಅಧಿಕಾರಿಗಳ ಆದೇಶದ ಪ್ರತಿ ಹಾಗೂ ಯಾವುದಾದರೂ ಗುರುತಿನ ಚೀಟಿ ಹಾಜರುಪಡಿಸಿ ಪಡೆದುಕೊಳ್ಳಬಹುದು’ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್‌ ತಿಳಿಸಿದರು.

**

ನಿವೃತ್ತರಾದ;ರಾಜೀನಾಮೆ ನೀಡಿದ;ಮರಣಹೊಂದಿದ ತಿಂಗಳು;ಬಾಕಿ ಮೊತ್ತ ವಿತರಣೆ ದಿನಾಂಕ

ಮೇ 2017;ಡಿ. 6

ಜೂನ್‌;ಡಿ.7

ಜುಲೈ;ಡಿ.10

ಆಗಸ್ಟ್‌;ಡಿ.11

ಸೆಪ್ಟೆಂಬರ್‌;ಡಿ.12

ಅಕ್ಟೋಬರ್‌;ಡಿ.13

ನವೆಂಬರ್‌;ಡಿ. 14

ಡಿಸೆಂಬರ್‌;ಡಿ.17

ಜನವರಿ 2018;ಡಿ. 18

ಫೆಬ್ರುವರಿ;ಡಿ.19

ಮಾರ್ಚ್‌;ಡಿ.20

ಏಪ್ರಿಲ್‌;ಡಿ.21

ಮೇ;ಡಿ.26

ಜೂನ್‌;ಡಿ.27 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು