ಭಾನುವಾರ, ಆಗಸ್ಟ್ 25, 2019
28 °C

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಿಎಂಟಿಸಿ

Published:
Updated:
Prajavani

ಬೆಂಗಳೂರು: ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್‌ಗಳು, ಇಳಿದು ತಳ್ಳುವ ಪ್ರಯಾಣಿಕರು, ಹೆಚ್ಚಾಗುವ ಸಂಚಾರ ದಟ್ಟಣೆ ಸಮಸ್ಯೆ...

ಇದು ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಬಸ್‌ಗಳನ್ನು ಹತ್ತುವ ಪ್ರಯಾಣಿಕರು ಇಳಿದು ತಳ್ಳಲು ಕೂಡ ಸಿದ್ಧರಿರಬೇಕು.

ಮಂಗಳವಾರ ಒಂದೇ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ಮೂರು ಬಸ್‌ಗಳು ಕೆಟ್ಟು ನಿಂತು ಪ್ರಯಾಣಿಕರು ತೊಂದರೆ ಅನುಭವಿಸಿದರು. ಟಿ.ವಿ ಟವರ್, ವಿಧಾನಸೌಧ ರಸ್ತೆ, ಹೈಗ್ರೌಂಡ್ ಬಳಿ ಬಸ್‌ಗಳು ಇದ್ದಕ್ಕಿದ್ದಂತೆ ಕೆಟ್ಟು ನಿಂತವು.

ಅಸಹಾಯಕರಾದ ಚಾಲಕರು, ಇಳಿದು ತಳ್ಳುವಂತೆ ಪ್ರಯಾಣಿಕರನ್ನು ಕೇಳಿಕೊಂಡರು. ಒಂದಷ್ಟು ದೂರ ತಳ್ಳಿದರೂ ಚಾಲನೆಗೊಳ್ಳದ ಕಾರಣ ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳಿಗೆ ಶಾಪ ಹಾಕುತ್ತಲೇ ಆಟೋರಿಕ್ಷಾ, ಕ್ಯಾಬ್ ಏರಿ ಮುಂದೆ ಸಾಗಿದರು.

‘ಸುಸ್ಥಿತಿಯಲ್ಲಿ ಇರದ ಬಸ್‌ಗಳನ್ನು ಚಾಲನೆ ಮಾಡುವುದು ಕಷ್ಟ ಎಂದು ಹೇಳಿದರೂ ಅಧಿಕಾರಿಗಳು ಕೇಳುವುದಿಲ್ಲ. ಹೀಗಾಗಿ ರಸ್ತೆ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತವೆ. ಇದು ಒಂದು ದಿನದ ಸಮಸ್ಯೆಯಲ್ಲ, ನಿತ್ಯವೂ ಇದೇ ರೀತಿ ಆಗುತ್ತಿದೆ’ ಎಂದು ಚಾಲಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಊರಿಂದ ಬಂದಿದ್ದ ನೆಂಟರಿಗೆ ಬೆಂಗಳೂರು ತೋರಿಸಲು ಕರೆದೊಯ್ದಿದ್ದೆ. ಅವರಿಗೆ ಬಿಎಂಟಿಸಿ ಬಸ್‌ಗಳ ದುಸ್ಥಿತಿಯ ದರ್ಶನವೂ ಆಯಿತು’ ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಸಂಚಾರ ದಟ್ಟಣೆ: ‘ರಸ್ತೆ ಮಧ್ಯದಲ್ಲೇ ಬಸ್‌ಗಳು ಕೆಟ್ಟು ಗಂಟೆಗಟ್ಟಲೆ ನಿಲ್ಲುತ್ತವೆ. ಈ ಸಂದರ್ಭದಲ್ಲಿ ವಾಹನ ದಟ್ಟಣೆ ನಿಭಾಯಿಸುವುದು ಪ್ರಯಾಸದ ಕೆಲಸ. ಬಿಎಂಟಿಸಿಯಲ್ಲಿರುವ ಈ ರೀತಿಯ ಬಸ್‌ಗಳಿಂದಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಸಂಚಾರ ಪೊಲೀಸರು ಬೇಸರ ವ್ಯಕ್ತಪಡಿಸಿದರು.

‘ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮಾತ್ರ ರಸ್ತೆಗೆ ಇಳಿಸುವಂತೆ ಸೂಚನೆ ನೀಡಲಾಗಿದೆ. ಆದರೂ, ಬಸ್‌ಗಳು ಕೆಟ್ಟು ನಿಲ್ಲುವ ದೂರುಗಳು ಹೆಚ್ಚಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ. ಪ್ರಸಾದ್ ತಿಳಿಸಿದರು.

ಬರಲಿವೆ 300 ಎಲೆಕ್ಟ್ರಿಕ್ ಬಸ್

300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಪರಿಸರ ಸ್ನೇಹಿ ಬಸ್‌ಗಳ ಸಂಚಾರಕ್ಕೆ ಕಾಲ ಹತ್ತಿರವಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತೀರ್ಮಾನಿಸಿದ್ದಂತೆ ಗುತ್ತಿಗೆ ಆಧಾರದಲ್ಲಿಯೇ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯಲು ಬಿಎಂಟಿಸಿ ಆಲೋಚನೆ ನಡೆಸಿದೆ. ಸದ್ಯದಲ್ಲೇ ಟೆಂಡರ್ ಕರೆಯಲು ಸಿದ್ಧತೆ ಆರಂಭಿಸಿದೆ. ಈ ಹಿಂದಿನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಗುತ್ತಿಗೆ ಒಪ್ಪಂದ ರದ್ದುಪಡಿಸಿ ಬಸ್‌ಗಳ ಖರೀದಿಗೆ ತೀರ್ಮಾನಿಸಿದ್ದರು.

‘ಬಸ್‌ಗಳಿಗೆ ಬೇಕಿರುವ ಚಾರ್ಜಿಂಗ್ ಯೂನಿಟ್, ನಿರ್ವಹಣಾ ಘಟಕವೂ ಟೆಂಡರ್‌ನಲ್ಲಿ ಒಳಗೊಳ್ಳಲಿದೆ’ ಎಂದು ಎನ್‌.ವಿ. ಪ್ರಸಾದ್ ಹೇಳಿದರು.

Post Comments (+)