ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿಗೆ ‘ಬೂಸ್ಟ್‌’: ರಸ್ತೆ ಮಧ್ಯೆ ನಿದ್ರೆಗೆ ಜಾರುವ ಬಸ್‌

ಇದು ಬಿಎಂಟಿಸಿ ಬಸ್‌ಗಳ ಕಥೆ * ಚಾಲಕ–ನಿರ್ವಾಹಕರ ವ್ಯಥೆ
Last Updated 5 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಂದೆಡೆಫೆಬ್ರುವರಿ ತಿಂಗಳ‌ಲ್ಲಿ ಇಂಧನ ಉಳಿತಾಯ ಸಪ್ತಾಹ ಆಚರಿಸಿದೆ. ಇನ್ನೊಂದೆಡೆ ಸಂಸ್ಥೆಯ ಅನೇಕ ಬಸ್‌ಗಳಿಗೆ ಬ್ಯಾಟರಿಯನ್ನೇ ಪೂರೈಸದ ಕಾರಣ ಚಾಲಕರು ಆ ವಾಹನವನ್ನು ದಿನವಿಡೀ ಚಾಲೂ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇಂಧನ ಪೋಲಾಗಲುಇದು ದಾರಿ ಮಾಡಿಕೊಡುತ್ತಿದೆ.

ಬಿಎಂಟಿಸಿ ವ್ಯಾಪ್ತಿಯ ಬಹುತೇಕ ಘಟಕಗಳಲ್ಲಿ ಒಂದೂವರೆ ತಿಂಗಳಿನಿಂದಬಸ್‌ಗಳಿಗೆ ಕಾರ್ಯಕ್ಷಮತೆಯುಳ್ಳ ಬ್ಯಾಟರಿಗಳು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹಳೆ ಬ್ಯಾಟರಿಗಳಲ್ಲಿ ಸತ್ವವಿಲ್ಲ. ಬೆಳಿಗ್ಗೆ ಹೊತ್ತು ಮೆಕ್ಯಾನಿಕ್‌ಗಳು ತಳ್ಳುಗಾಡಿಗಳಲ್ಲಿ ಎರಡು ಬೂಸ್ಟರ್‌ಗಳನ್ನು ತಂದು ಬಸ್‌ಗಳ ಬ್ಯಾಟರಿಗೆ ಶಕ್ತಿ ತುಂಬುವ ಮೂಲಕ ‘ಚಿಕಿತ್ಸೆ’ ನೀಡುತ್ತಾರೆ. ಒಮ್ಮೆ ಬೂಸ್ಟ್‌ ಮಾಡಿದ ಬ್ಯಾಟರಿಯನ್ನೇ ನಂಬಿಕೊಂಡು ಮೂರು ಪಾಳಿಗಳಲ್ಲೂ ಬಸ್‌ ಓಡಿಸಬೇಕಾದ ಪರಿಸ್ಥಿತಿ ಕೆಲವು ಡಿಪೋಗಳಲ್ಲಿದೆ.

‘ಬೂಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಶಕ್ತಿಹೀನವಾಗಿ ಬಸ್‌ಗಳುರಸ್ತೆ ಮಧ್ಯೆಯೇ ಮತ್ತೆ ಕೆಟ್ಟು ನಿಲ್ಲುತ್ತಿವೆ. ನಾವು ಗೋಗರೆದರೂ ಧಾವಂತದಲ್ಲಿರುವ ಜನ ಗಾಡಿಯನ್ನು ತಳ್ಳಲು ಬರುವುದಿಲ್ಲ. ಅವರು ಬಿಎಂಟಿಸಿಯನ್ನು ಶಪಿಸುತ್ತಾ ಬೇರೆ ಬಸ್‌ ಹತ್ತುತ್ತಾರೆ’ ಎಂದು ಬಿಎಂಟಿಸಿ ಬಸ್‌ನ ಚಾಲಕರೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಬಸ್‌ಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುವುದರಿಂದ ವಾಹನ ದಟ್ಟಣೆಯೂ ಉಂಟಾಗುತ್ತಿದೆ. ಸಾಲುಗಟ್ಟಿ ನಿಲ್ಲುವ ಇತರ ವಾಹನಗಳ ಚಾಲಕರು ನಮ್ಮನ್ನು ಹೀನಾಯವಾಗಿ ನಿಂದಿಸುತ್ತಾರೆ. ನಮ್ಮದಲ್ಲದ ತಪ್ಪಿಗೆ ನಾವು ಬೈಗುಳ ಕೇಳಬೇಕಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಉಪಾಹಾರ ಸೇವಿಸಲು ತೆರಳುವಾಗಲೂ ನಾವು ಬಸ್‌ ಅನ್ನು ಚಾಲೂ ಸ್ಥಿತಿಯಲ್ಲಿಡಬೇಕು. ಕೆಟ್ಟು ನಿಂತ ವಾಹನದ ದುರಸ್ತಿಗೂ ಸಮಯ ಹಿಡಿಯುತ್ತದೆ. ಬಸ್‌ ಮಾರ್ಗ ಮಧ್ಯೆ ಕೆಟ್ಟರೆ ಇನ್ನೊಂದು ಪಾಳಿಗೂ ವಾಹನದ ಕೊರತೆ ಉಂಟಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಪಾಳಿಗೆ ಕೆಲಸಕ್ಕೆ ಬರುವ ಚಾಲಕರು ಮತ್ತು ನಿರ್ವಾಹಕರು ಬಸ್‌ ಇಲ್ಲದೇ ವಾಪಸ್ಸು ಹೋಗಬೇಕಾದ ಪರಿಸ್ಥಿತಿ ಇದೆ’ ಎಂದು ಇನ್ನೊಬ್ಬರು ಚಾಲಕ ಪರಿಸ್ಥಿತಿಯನ್ನು ವಿವರಿಸಿದರು.

‘ಹೊಸ ಬ್ಯಾಟರಿ ಒದಗಿಸುವಂತೆ ಅಧಿಕಾರಿಗಳನ್ನು ಕೇಳಿದರೆ, ‘ಸಂಸ್ಥೆ ನಷ್ಟದಲ್ಲಿದೆ. ಬಹುತೇಕ ವರಮಾನ ಇಂಧನಕ್ಕೆ ಖರ್ಚಾಗುತ್ತದೆ. ಬ್ಯಾಟರಿ ಖರೀದಿಗೆ ಹಣವಿಲ್ಲ. ಬ್ಯಾಟರಿ ಖರೀದಿಗೆಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ’ ಎಂದೆಲ್ಲ ಸಬೂಬು ಹೇಳುತ್ತಿದ್ದಾರೆ. ಆದರೆ ಹೊಸ ಬ್ಯಾಟರಿ ಸಿಗುತ್ತಿಲ್ಲ’ ಎಂದು ನಿರ್ವಾಹಕರೊಬ್ಬರು ತಿಳಿಸಿದರು.

‘ಘಟಕ 9ರಲ್ಲಿ 35ಕ್ಕೂ ಹೆಚ್ಚು ಬಸ್‌ಗಳಿಗೆ ಬ್ಯಾಟರಿಗಳಿಲ್ಲ. ಸಿಗ್ನಲ್‌ ಬಿದ್ದಾಗಲೂ ಇಂತಹ ಬಸ್‌ಗಳನ್ನು ಚಾಲೂ ಸ್ಥಿತಿಯಲ್ಲಿಯೇ ಇರಬೇಕು. ಇದರಿಂದ ಇಂಧನವೂ ವ್ಯರ್ಥವಾಗುತ್ತದೆ. ಅನುಭವಿ ಚಾಲಕರು ತಾವೇ ಹೇಗೋ ಬಸ್‌ ದುರಸ್ತಿ ಮಾಡಿಕೊಳ್ಳುತ್ತಾರೆ. ಹೊಸ ಚಾಲಕರು ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗುತ್ತದೆ. ಈ ಲೋಪಕ್ಕೆ ಪ್ರಯಾಣಿಕರು ಚಾಲಕರನ್ನು ದೂರುತ್ತಾರೆ. ಜಗಳವನ್ನೂ ಆಡುತ್ತಾರೆ’ ಎಂದು ಚಾಲಕರೊಬ್ಬರು ಅಳಲು ತೋಡಿಕೊಂಡರು.

‘ಬಹುತೇಕ ಬಸ್‌ಗಳು ಉತ್ತಮ ಬ್ಯಾಟರಿಗಳನ್ನು ಹೊಂದಿವೆ. ಕೆಲವೊಂದು ಬಸ್‌ಗಳ ಬ್ಯಾಟರಿ ಬೂಸ್ಟ್‌ ಮಾಡಬೇಕಾದ ಪರಿಸ್ಥಿತಿ ಇರುವುದು ನಿಜ. ಇಂತಹ ಸಣ್ಣಪುಟ್ಟ ತೊಂದರೆಗಳನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದು ಡಿಪೋ 9ರ ವ್ಯವಸ್ಥಾಪಕ ತಿಳಿಸಿದರು.

***

ಕೆಲವು ಬಸ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಹೊಸ ಬ್ಯಾಟರಿ ಖರೀದಿಗೆ ಟೆಂಡರ್‌ ಕರೆಯಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ

–ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT