ಶುಕ್ರವಾರ, ನವೆಂಬರ್ 22, 2019
20 °C
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ವೇತನ ಕಡಿತ ಶಿಕ್ಷೆ

ದಂಡ ಏರಿಕೆ: ಚಾಲಕರಿಗೆ ಹೆಚ್ಚಿದ ಒತ್ತಡ

Published:
Updated:
Prajavani

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಳದೊಂದಿಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕರ ಮೇಲಿನ ಒತ್ತಡವೂ ಅಧಿಕವಾಗಿದೆ.

ಸಿಗ್ನಲ್‌ ಜಂಪ್‌, ನಿಗದಿತ ಪ್ರದೇಶದಲ್ಲಿ ಬಸ್‌ ನಿಲುಗಡೆ ಮಾಡದಿರುವಂತಹ ಪ್ರಕರಣಗಳಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಾಗಿರುವುದರಿಂದ, ನಿಯಮ ಉಲ್ಲಂಘಿಸುವ ಚಾಲಕರ ವೇತನಕ್ಕೆ ಕತ್ತರಿ ಬೀಳುತ್ತಿದೆ. 

ಸಿಗ್ನಲ್‌ ಜಂಪ್‌ ಮತ್ತು ತಪ್ಪು ಜಾಗದಲ್ಲಿ ವಾಹನಗಳ ನಿಲುಗಡೆಗೆ ಕ್ರಮವಾಗಿ ₹500 ಹಾಗೂ ₹1,000 ದಂಡವನ್ನು ಈಗ ವಿಧಿಸಲಾಗುತ್ತಿದೆ. ಈ ಮೊದಲು ತಲಾ ₹100 ಇತ್ತು. 

ಬಿಎಂಟಿಸಿ ಬಸ್‌ಗಳ ಚಾಲಕರು ನಿಯಮ ಉಲ್ಲಂಘನೆಯಾದರೆ, ಸಂಚಾರ ವಿಭಾಗದ ಪೊಲೀಸರು ದಂಡದ ನೋಟಿಸನ್ನು ಬಿಎಂಟಿಸಿಗೆ ಕಳುಹಿಸುತ್ತಾರೆ. ದಂಡದ ಮೊತ್ತವನ್ನು ನಿಯಮ ಉಲ್ಲಂಘಿಸಿದ ಚಾಲಕನ ವೇತನದಿಂದ ಬಿಎಂಟಿಸಿ ಕಡಿತಗೊಳಿಸುತ್ತಿದೆ. ಈಗ ದಂಡದ ಪ್ರಮಾಣ ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ. ಒಂದು ಬಾರಿ ನಿಯಮ ಉಲ್ಲಂಘಿಸಿದಲ್ಲಿ ಚಾಲಕರ ಒಂದು ದಿನದ ವೇತನಕ್ಕೆ ಕತ್ತರಿ ಬೀಳುತ್ತಿದೆ. 

ಗುರಿ ಕಾರಣ?:  ಒಂದು ಬಸ್‌ನ ಸಂಚಾರದಿಂದ ನಿಗಮಕ್ಕೆ ಬರುವ ಮಾಸಿಕ ಆದಾಯದ ಆಧಾರದ ಮೇಲೆ ಚಾಲಕ ಮತ್ತು ನಿರ್ವಾಹಕರಿಗೆ ವೇತನದ ಶೇ 1.5ಯಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ‘ಗುರಿ’ ಮುಟ್ಟಲು ಉದ್ದೇಶದಿಂದ, ಬೇರೆ ಬಸ್‌ಗಳಿಗಿಂತಲೂ ಬೇಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಧಾವಂತದಲ್ಲಿ ಕೆಲ ಚಾಲಕರು ಸಿಗ್ನಲ್‌ ಜಂಪ್‌ ಮಾಡುತ್ತಿದ್ದಾರೆ. ಇಷ್ಟು ಆದಾಯ ಬರಲೇಬೇಕು ಎಂಬ ಒತ್ತಡವೇ ನಿಯಮ ಉಲ್ಲಂಘನೆಗೆ ಕಾರಣ ಎನ್ನಲಾಗುತ್ತಿದೆ.   

‘ಬಿಎಂಟಿಸಿ ಚಾಲಕರಿಂದ ನಿತ್ಯ 40ರಿಂದ 50 ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ. ಕಳೆದ ತಿಂಗಳು (ಆಗಸ್ಟ್‌) 1,049 ಪ್ರಕರಣಗಳು ದಾಖಲಾಗಿವೆ’ ಎಂದು ಸಂಚಾರ ಪೊಲೀಸರು ಹೇಳುತ್ತಾರೆ. 

ತರಬೇತಿನಿರತ ಚಾಲಕರಿಗೆ ತಿಂಗಳಿಗೆ ₹10 ಸಾವಿರ, ಎರಡು ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ₹23 ಸಾವಿರ ವೇತನವಿದೆ. ಈಗ, ತಿಂಗಳಲ್ಲಿ ಹತ್ತು ಬಾರಿ ನಿಯಮ ಉಲ್ಲಂಘಿಸಿದರೂ, ಅರ್ಧ ಅಥವಾ ಸಂಪೂರ್ಣ ವೇತನ ಕಡಿತಗೊಳ್ಳುವ ಆತಂಕದಲ್ಲಿ ಚಾಲಕರಿದ್ದಾರೆ.

‘ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವೇತನದಿಂದ ದಂಡದ ಪ್ರಮಾಣ ಕಡಿತಗೊಳಿಸಿ, ಪೊಲೀಸ್‌ ಇಲಾಖೆಗೆ ಪಾವತಿಸುವ ವ್ಯವಸ್ಥೆ ಮೊದಲಿನಿಂದಲೂ ಇದೆ. ಆದರೆ, ಬೇರೆ ಚಾಲಕರಿಗೆ ಹೋಲಿಸಿದರೆ, ನಮ್ಮ ಚಾಲಕರು ಶಿಸ್ತಿನಿಂದ ವಾಹನ ಚಲಾಯಿಸುತ್ತಾರೆ. ಶೇ 4ರಿಂದ 5ರಷ್ಟು ಚಾಲಕರಿಂದ ಮಾತ್ರ ತಪ್ಪುಗಳು ಆಗುತ್ತವೆ’ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್.ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ದಂಡದ ಮೊತ್ತ ಹೆಚ್ಚಳವಾದ ನಂತರ ಎಷ್ಟು ಪ್ರಕರಣಗಳು ಬಂದಿವೆ. ಬಿಎಂಟಿಸಿಯಿಂದ ಎಷ್ಟು ದಂಡದ ಮೊತ್ತ ಪಾವತಿಸಬೇಕಾಗುತ್ತದೆ ಎಂಬ ಬಗ್ಗೆ ಈವರೆಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ಹೇಳಿದರು.

ವಾಯುಮಾಲಿನ್ಯ ತಪಾಸಣೆ; ಪ್ರತಿ ಡಿಪೊದಲ್ಲಿ ವ್ಯವಸ್ಥೆ

ಅತಿ ಹೆಚ್ಚು ಹೊಗೆ ಉಗುಳುವ ಬಿಎಂಟಿಸಿ ಬಸ್‌ಗಳಿಗೂ ಅನ್ವಯಿಸಿ  ದಂಡ ವಿಧಿಸಲಾಗುತ್ತಿದೆ. ಇದರಿಂದಲೂ ತೊಂದರೆಯಾಗುತ್ತಿದೆ ಎಂದು ಕೆಲವು ಚಾಲಕರು ದೂರುತ್ತಾರೆ. ಇದನ್ನು ನಿಗಮದ ಅಧಿಕಾರಿಗಳು ಅಲ್ಲಗಳೆಯುತ್ತಾರೆ. 

‘ಎಲ್ಲ ಡಿಪೊಗಳಲ್ಲಿ ಮಾಲಿನ್ಯ ನಿಯಂತ್ರಣ ಪರೀಕ್ಷಿಸುವ ಯಂತ್ರಗಳನ್ನು ಇಡಲಾಗಿದೆ. ನಿಯಮಿತವಾಗಿ ಎಲ್ಲ ಬಸ್‌ಗಳ ತಪಾಸಣೆ ನಡೆಸಲಾಗುತ್ತಿದೆ. 6,500 ಬಸ್‌ಗಳಲ್ಲಿ ಕೆಲವು ಬಸ್‌ಗಳಲ್ಲಿ ಸಮಸ್ಯೆ ಇರಬಹುದು. ಗಮನಕ್ಕೆ ಬಂದ ಕೂಡಲೇ ಸರಿ ಮಾಡಲಾಗುತ್ತಿದೆ. ಬಸ್‌ಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ ಎಂದು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವನಾಥ್‌ ತಿಳಿಸಿದರು.

 

"ಟಾರ್ಗೆಟ್‌ನಿಂದ ಒತ್ತಡ ಆಗುತ್ತಿಲ್ಲ. ಉತ್ತಮವಾಗಿ ಕೆಲಸ ಮಾಡಿದವರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹಾಗೆಂದು ನಿಯಮ ಉಲ್ಲಂಘಿಸಬೇಕು ಎಂದರ್ಥವಲ್ಲ"

- ಕೆ.ಆರ್. ವಿಶ್ವನಾಥ್‌ , ಮುಖ್ಯ ಸಂಚಾರ ವ್ಯವಸ್ಥಾಪಕ, ಬಿಎಂಟಿಸಿ.

ಪ್ರತಿಕ್ರಿಯಿಸಿ (+)