ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಸಿಬ್ಬಂದಿಗೆ ಹಬ್ಬದ ಉಡುಗೊರೆ!

ಅಂತರ್‌ ಘಟಕ ವರ್ಗಾವಣೆಗೆ ಸಿದ್ಧತೆ l ಈಡೇರಿದ ಬಹುದಿನಗಳ ಆಸೆ l ಸಾಫ್ಟ್‌ವೇರ್ ಮೂಲಕ ಕೌನ್ಸೆಲಿಂಗ್‌ಗೆ ತಯಾರಿ
Last Updated 8 ನವೆಂಬರ್ 2018, 20:11 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿಯ ಸಂದರ್ಭದಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಸಿಬ್ಬಂದಿಯ ಅಂತರ್‌ ಘಟಕದ (ಡಿಪೋ) ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ನೌಕರರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

‘ಇಡೀ ವರ್ಗಾವಣೆ ಪ್ರಕ್ರಿಯೆಯನ್ನು ಕಾರ್ಯದಕ್ಷತೆಯ ರ‍್ಯಾಂಕಿಂಗ್‌ನ ಶ್ರೇಷ್ಠತೆ ಮೇಲೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ನಡೆಸಲಾಗುವುದು. ಅದೇ ಅವರ ಹಿರಿತನವನ್ನು ನಿರ್ಧರಿಸಲಿದೆ. ಈ ಮೂಲಕ ತರಬೇತಿ ನೌಕರರಾಗಿರುವವರೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬಹುಪಾಲು ಮಂದಿಗೆ ಈ ಬಾರಿ ವರ್ಗಾವಣೆಗೆ ಅವಕಾಶ ಸಿಗಲಿದೆ’ ಎಂದು ಬಿಎಂಟಿಸಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬೃಹತ್‌ ಸಂಖ್ಯೆಯ ವರ್ಗಾವಣೆ: ‘ಬಿಎಂಟಿಸಿಯಿಂದ 2,338 ಸಿಬ್ಬಂದಿ (ಚಾಲಕ, ನಿರ್ವಾಹಕ, ಮೆಕ್ಯಾನಿಕ್‌ಗಳು, ತಾಂತ್ರಿಕ ಸಹಾಯಕರು) ಅಂತರ್ ನಿಗಮ ವರ್ಗಾವಣೆ ಮೂಲಕ ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ, ವಾಯವ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ತೆರಳುತ್ತಿದ್ದಾರೆ. ಬೇರೆ ನಿಗಮಗಳಿಂದ 400 ಸಿಬ್ಬಂದಿ ಬಿಎಂಟಿಸಿಗೆ ಬರುತ್ತಿದ್ದಾರೆ. ಹೀಗೆ ತೆರವಾಗುವ ಸ್ಥಾನಗಳಿಗೆ ಹಾಲಿ ಇರುವ ನೌಕರರು ಅರ್ಜಿ ಸಲ್ಲಿಸಿದ್ದಾರೆ. ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಸಿಬ್ಬಂದಿ ವರ್ಗಾವಣೆಯ ಸಂದರ್ಭದಲ್ಲಿಯೂ ಪ್ರತಿ ಘಟಕದಲ್ಲಿ ಆಯಾ ಸಿಬ್ಬಂದಿ ಸ್ಥಾನ ಖಾಲಿಯಾಗಲಿದೆ. ಹೀಗಾದಾಗ ಅರ್ಜಿ ಸಲ್ಲಿಸಿದ ಬಹುಪಾಲು ಮಂದಿಗೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ತಿಳಿಸಿದರು.

‘2 ವರ್ಷಗಳ ನಂತರ ಈ ಪ್ರಮಾಣದ ವರ್ಗಾವಣೆಗೆ ಅವಕಾಶ ನೀಡಿದ್ದೇವೆ. ನಿಯಮಗಳನ್ನೂ ಸಡಿಲಗೊಳಿಸಿದ್ದೇವೆ. ಒಂದು ಬಾರಿ ಎಲ್ಲರಿಗೂ ವರ್ಗಾವಣೆ ನೀಡುವ ಅವಕಾಶ ಕಲ್ಪಿಸುತ್ತಿದ್ದೇವೆ. ಕೌನ್ಸೆಲಿಂಗ್‌ಗೆ ಹಾಜರಾಗುವವರಿಗೆ ಆಯಾ ಘಟಕಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಬಹಿರಂಗವಾಗಿ ಪ್ರದರ್ಶಿಸಲಾಗುತ್ತದೆ. ಅವರೇ ಘಟಕ ಆಯ್ಕೆ ಮಾಡಿಕೊಳ್ಳಬಹುದು. ಇಡೀ ವ್ಯವಸ್ಥೆ ಪಾರದರ್ಶಕವಾಗಿರಲಿದೆ’ ಎಂದು ಅವರು ಹೇಳಿದರು.

ಸಾಫ್ಟ್‌ವೇರ್‌ ಸಿದ್ಧತೆ: ‘ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಸಾಫ್ಟ್‌ವೇರ್‌ ಸಿದ್ಧಗೊಳಿಸಲಾಗುತ್ತಿದೆ. ಅದರ ಪರೀಕ್ಷೆ ನಡೆದಿದೆ. ಒಂದು ವೇಳೆ ಸಾಫ್ಟ್‌ವೇರ್‌ ಮೂಲಕ ಅಸಾಧ್ಯವಾದಲ್ಲಿ ಎಕ್ಸೆಲ್‌ ಷೀಟ್‌ ಮೂಲಕವೂ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಅವರು ಹೇಳಿದರು.

ಅಂತರ್‌ ನಿಗಮಗಳಿಗೆ ಹೋಗುವವರ ತರಾತುರಿ: ‘ಅಂತರ್‌ನಿಗಮಗಳಿಗೆ ವರ್ಗಾವಣೆ ಆದೇಶ ಪಡೆದ ಸಿಬ್ಬಂದಿ ಬಿಡುಗಡೆ ಪತ್ರ ಪಡೆಯಲು ಸೋಮವಾರ ಬಿಎಂಟಿಸಿ ಕಚೇರಿಯಲ್ಲಿ ಕಾತರದಿಂದ ಕಾಯುತ್ತಿದ್ದರು. ಕೆಲವರಿಗೆ ಪತ್ರ ನೀಡಲಾಗಿದೆ. ಒಮ್ಮೆಲೆ ಬಿಡುಗಡೆ ಮಾಡಿದರೆ ನಿತ್ಯ ಕಾರ್ಯಾಚರಣೆಗೆ ತೊಂದರೆಯಾಗಲಿದೆ’ ಎಂದು ಸಂಸ್ಥೆಯ ಮೂಲಗಳು ಹೇಳಿವೆ. ಅಂತರ್‌ ನಿಗಮ ವರ್ಗಾವಣೆ ಪಡೆದವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರೇ ಇದ್ದರು.

‘ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆಗೆ ಕಾಯುತ್ತಿದ್ದೇವೆ. ಅಂತರ್‌ನಿಗಮಗಳಿಗೆ ಹೋಗುವವರ ಆದೇಶಗಳೂ ಸಿದ್ಧವಾಗಿವೆ. ಅಂತರ್‌ಘಟಕ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆಯನ್ನು ಬೇಗನೆ ಮುಗಿಸಲಿ’ ಎಂದು ವಾಯು ವಜ್ರ ಬಸ್‌ ಸಿಬ್ಬಂದಿಯೊಬ್ಬರು ಹೇಳಿದರು.

**

ಪರಿಗಣಿಸುವ ಅಂಶಗಳು

ಹಾಜರಾತಿ, ಸಮಯ ಪಾಲನೆ, ನಡವಳಿಕೆ, ವ್ಯವಹಾರ ಶಿಸ್ತು, ಇಂಧನ ಉಳಿತಾಯ (ಚಾಲಕರಿಗೆ), ಅಗತ್ಯಬಿದ್ದಾಗ ಹೆಚ್ಚುವರಿ ಕೆಲಸ ನಿರ್ವಹಣೆ. ಹೀಗೆ ಸುಮಾರು 26 ಅಂಶಗಳು ರ‍್ಯಾಂಕಿಂಗ್ ವರ್ಗಾವಣೆಗೆ ಮಾನದಂಡಗಳಾಗಿವೆ. ಆಯಾ ವಿಭಾಗದ ಮುಖ್ಯಸ್ಥರು ಸಿಬ್ಬಂದಿಯ ಕಾರ್ಯಕ್ಷಮತೆ ಬಗ್ಗೆ ಕಳುಹಿಸುವ ವರದಿಯನ್ನೂ ಪರಿಗಣಿಸಲಾಗುತ್ತದೆ.

**

34 ಸಾವಿರ:ಬಿಎಂಟಿಸಿಯ ಒಟ್ಟು ಸಿಬ್ಬಂದಿ

3 ಸಾವಿರ:ಅಂತರ್‌ ಘಟಕ ವರ್ಗಾವಣೆ ಕೋರಿ ಬಂದ ಅರ್ಜಿಗಳು

45:ಡಿಪೋಗಳು

2,800 :ಹೊಸ ನೇಮಕಾತಿಯಾದ ಸಿಬ್ಬಂದಿ

**

ನೌಕರರ ಕಾರ್ಯದಕ್ಷತೆಯನ್ನು ಗಮನಿಸಲಾಗುತ್ತದೆ. ಅದು ಇಲ್ಲವಾದಲ್ಲಿ, ನಿರಂತರ ಅಶಿಸ್ತು, ದೂರು ಬರುವ ನೌಕರರನ್ನು ಮುಂದಿನ ವರ್ಷದಿಂದ ಕಡ್ಡಾಯ ವರ್ಗಾವಣೆ ಮಾಡಲಾಗುವುದು.

-ವಿ.ಪೊನ್ನುರಾಜ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT