ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗಿದ ‘ಇಎಸ್‌ಝಡ್’: ಕಳವಳ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ * ಮಾನವ– ವನ್ಯಜೀವಿ ಸಂಘರ್ಷ ಹೆಚ್ಚುವ ಆತಂಕ
Last Updated 19 ನವೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (ಬಿಎನ್‌ಪಿ) ಸುತ್ತಲಿನ ‘ಪರಿಸರ ಸೂಕ್ಷ್ಮ ವಲಯ’ (ಇಎಸ್‌ಝಡ್) ವ್ಯಾಪ್ತಿಯನ್ನು ಕಡಿಮೆ ಮಾಡುವ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಸ್ತಾವಕ್ಕೆ ಪರಿಸರ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಸಚಿವಾಲಯವು 2016ರಲ್ಲಿ ಹೊರಡಿಸಿದ್ದ ಕರಡು ಅಧಿಸೂಚನೆ ಪ್ರಕಾರ, ಇಎಸ್‌ಝಡ್ ವ್ಯಾಪ್ತಿಯನ್ನು 268.9 ಚದರ ಕಿ.ಮೀ. ಎಂದು ಗುರುತಿಸಲಾಗಿತ್ತು. ಆದರೆ, ಈ ಕುರಿತ ಅಂತಿಮ ಅಧಿಸೂಚನೆಯನ್ನು ಹೊರಡಿಸಿರಲಿಲ್ಲ. ಹಾಗಾಗಿ ಇಎಸ್‌ಜೆಡ್‌ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಸಚಿವಾಲಯವು 2018ರ ನವೆಂಬರ್‌ 2ರಂದು ಹೊಸದಾಗಿ ಪ್ರಕಟಿಸಲಾಗಿರುವ ಕರಡು ಅಧಿಸೂಚನೆ ಪ್ರಕಾರ ಇಎಸ್‌ಝಡ್ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶಕ್ಕೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಕನಿಷ್ಠ 100 ಮೀಟರ್‌ಗಳಿಂದ ಗರಿಷ್ಠ 1 ಕಿ.ಮೀ ವ್ಯಾಪ್ತಿಯಷ್ಟು ಪರಿಸರ ಸೂಕ್ಷ್ಮ ಪ್ರದೇಶ ಇರಲಿದೆ.

ಆಘಾತ ತಂದಿದೆ: ‘ಸತತ ಹೋರಾಟ ನಡೆಸುವ ಮೂಲಕ ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಗಣಿಗಾರಿಕೆ ನಿಂತ ಬಳಿಕ ಈ ಪ್ರದೇಶದಲ್ಲಿ ವನ್ಯಜೀವಿ ಚಟುವಟಿಕೆ ಹೆಚ್ಚಳವಾಗಿತ್ತು. ಬನ್ನೇರುಘಟ್ಟ ಉದ್ಯಾನದಲ್ಲಿ 85 ಕಾಡಾನೆಗಳು ಬಂದು ಸೇರಿಕೊಂಡಿರುವುದೇ ಇದಕ್ಕೆ ಸಾಕ್ಷಿ. ನಾವು ನಿಟ್ಟುಸಿರುವ ಬಿಡುವಷ್ಟರಲ್ಲೇ ಕೇಂದ್ರ ಪರಿಸರ ಸಚಿವಾಲಯವು ಇಎಸ್‌ಝಡ್ ವ್ಯಾಪ್ತಿಯನ್ನು ಕಡಿಮೆಗೊಳಿಸಲು ಮುಂದಾಗಿರುವುದು ಆಘಾತ ತಂದಿದೆ’ ಎಂದು ಪರಿಸರ ಹೋರಾಟಗಾರ ವಿಜಯ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಎಸ್‌ಜೆಡ್‌ ಎಂಬುದು ರಾಷ್ಟ್ರೀಯ ಉದ್ಯಾನಕ್ಕೆ ರಕ್ಷಾ ಕವಚವಿದ್ದಂತೆ. ಇದರ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಉದ್ಯಾನದ ಆಸುಪಾಸಿನಲ್ಲಿ ಮಾನವ ಚಟುವಟಿಕೆ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಲಿದೆ. ಇದು ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಲಿದೆ. ಮಹಾನಗರದ ಸೆರಗಿನಲ್ಲೇ ಇರುವ ಈ ರಾಷ್ಟ್ರೀಯ ಉದ್ಯಾನಕ್ಕೂ ಇದರಿಂದ ಧಕ್ಕೆ ಉಂಟಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯಾವ ಕಾರಣಕ್ಕೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿಯೂ ಸ್ಪಷ್ಟ ಉತ್ತರವಿಲ್ಲ.

‘ನಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಇಎಸ್‌ಜೆಡ್‌ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾವ ನಮ್ಮ ಕಚೇರಿಯಿಂದಲೇ ಹೋಗಿದೆಯೇ ಅಥವಾ ಉನ್ನತ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆಯೇ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗೃತಿ ಮೂಡಿಸುತ್ತೇವೆ: ಬನ್ನೇರುಘಟ್ಟದ ಬಗ್ಗೆ ಕರಡು ಅಧಿಸೂಚನೆಯ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶ ಕಡಿಮೆ ಆದರೆ ಭವಿಷ್ಯದಲ್ಲಿ ಏನೆಲ್ಲ ಸಮಸ್ಯೆ ಉಂಟಾಗಲಿದೆ ಎಂಬ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ. ಶಾಲಾ ಕಾಲೇಜುಗಳಿ ಹಾಗೂ ರಾಷ್ಟ್ರೀಯ ಉದ್ಯಾನದ ಆಸುಪಾಸಿ ಹಳ್ಳಿಗಳಿಗೆ ತೆರಳಿ ಈ ಬಗ್ಗೆ ತಿಳಿ ಹೇಳಲಿದ್ದೇವೆ’ ಎಂದು ‘ಯುನೈಟೆಡ್‌ ಬೆಂಗಳೂರು’ ಸಂಸ್ಥೆಯ ಸಂಚಾಲಕ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಕ್ಷೇಪ ಸಲ್ಲಿಸಲು ಹಾಗೂ ಸಲಹೆ ನೀಡಲು ಕರಡು ಅಧಿಸೂಚನೆ ಪ್ರಕಟವಾದ 60 ದಿನಗಳವರೆಗೆ ಕಾಲಾವಕಾಶ ನೀಡಲಾಗಿದೆ.

‘ಈ ಅಧಿಸೂಚನೆಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪ ಸಲ್ಲಿಕೆ ಆಗುವಂತೆ ನೋಡಿಕೊಳ್ಳುತ್ತೇವೆ. ಜತೆಗೆ ಕಾನೂನು ಹೋರಾಟವನ್ನೂ ನಡೆಸುತ್ತೇವೆ’ ಎಂದು ವಿಜಯ್‌ ನಿಶಾಂತ್‌ ತಿಳಿಸಿದರು.

ಅಂಕಿ ಅಂಶ

260.51 ಚದರ ಕಿ.ಮೀ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣ

16

ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಗ್ರಾಮಗಳು

77

ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯ ಗ್ರಾಮಗಳು

* ಬೆಂಗಳೂರಿನ ಸಮೀಪ ಇರುವುದು ಇದೊಂದೇ ಕಾಡು. ಈ ಕಾಡು ಸತ್ತರೆ ಭವಿಷ್ಯದಲ್ಲಿ ಬೆಂಗಳೂರು ನಗರಕ್ಕೂ ಅದೇ ಗತಿ ಬಂದೊದಗಲಿದೆ

-ಸುರೇಶ್‌, ‘ಯುನೈಟೆಡ್‌ ಬೆಂಗಳೂರು’ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT