ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಗಯಾ ಸ್ಫೋಟ ಸಂಚು: ಹೆಚ್ಚುವರಿ ದೋಷಾರೋಪ ಪಟ್ಟಿ

Last Updated 31 ಜನವರಿ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷದ ಜನವರಿಯಲ್ಲಿ ಬೋಧಗಯಾದ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರು ಆರೋಪಿಗಳ ವಿರುದ್ಧ ಪಟ್ನಾದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಬಾಂಗ್ಲಾದಿಂದ ಓಡಿಬಂದು ತಲೆ ಮರೆಸಿಕೊಂಡಿದ್ದ ಮಹಮದ್‌ ಜಹೀದುಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಇತರರ ಜೊತೆಗೂಡಿ ಜನವರಿ 19ರಂದು ಬೋಧಗಯಾದಲ್ಲಿ ಮೂರು ಸುಧಾರಿತ ಸ್ಫೋ ಟಕಗಳ‌ನ್ನಿಟ್ಟು ಬೌದ್ಧರ ಪವಿತ್ರ ಕ್ಷೇತ್ರವನ್ನು ಸ್ಫೋಟಿಸುವ ಸಂಚು ರೂಪಿಸಿದ್ದ. ಇವುಗಳಲ್ಲಿ ಒಂದು ಸ್ಫೋಟಗೊಂಡಿತ್ತು. ಉಳಿದೆರಡು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಕೃತ್ಯದ ಬಳಿಕ ಕೆಲವು ಆರೋಪಿಗಳು ಬೆಂಗಳೂರು ಸುತ್ತಮುತ್ತ ಮನೆಗಳನ್ನು ಬಾಡಿಗೆಗೆ ಪಡೆದು ಅವಿತುಕೊಂಡಿದ್ದರು.

ಇದೇ ಪ್ರಕರಣದಲ್ಲಿ ಸೆಪ್ಟೆಂಬರ್‌ 28ರಂದು ಪೈಗಂಬರ್‌ ಶೇಖ್‌, ಅಹಮದ್‌ ಅಲಿ, ನೂರ್‌ ಅಹಮದ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈಗ ‍ಪಶ್ಚಿಮ ಬಂಗಾಳದ ಮಹಮದ್‌ ಅದಿಲ್‌ ಅಲಿಯಾಸ್‌ ಅಸಾದುಲ್ಲಾ, ಅಬ್ದುಲ್‌ ಕರೀಂ ಅಲಿಯಾಸ್‌ ಕರೀಂ ಶೇಖ್‌, ದಿಲ್ವಾರ್‌ ಹುಸೇನ್‌ ಅಲಿಯಾಸ್‌ ಹಸನ್‌ ಅಲಿಯಾಸ್‌ ಉಮರ್‌, ಮುಷ್ತಾಫಿಜುರ್‌ ರೆಹಮಾನ್‌ ಅಲಿಯಾಸ್‌ ಶಾಹಿನ್‌, ಜಹಿದುಲ್‌ ಇಸ್ಲಾಂ, ಅಸ್ಸಾಂನ ಅರೀಫ್‌ ಹುಸೇನ್‌ ಅಲಿಯಾಸ್‌ ಅಟ್ಟೌರ್ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಆರೋಪಿಗಳು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಬೋಧಗಯಾ ಸ್ಫೋಟಿಸುವ ಸಂಚು ರೂಪಿಸಿದ್ದರು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಭೀತಿ ಹುಟ್ಟಿಸುವ ಉದ್ದೇಶ ಹೊಂದಿದ್ದರು. ಆರೋಪಿಗಳು ತಮ್ಮ ಅಸಲಿ ಗುರುತನ್ನು ಮರೆಮಾಚಿ, ನಕಲಿ ಗುರುತಿನ ಚೀಟಿ ಬಳಸಿ ಬೆಂಗಳೂರು, ಚೆನ್ನೈ ಸೇರಿದಂತೆ ದಕ್ಷಿಣ ಭಾರತದಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಅವಿತುಕೊಂಡಿದ್ದರು ಎಂದೂ ವಿವರಿಸಲಾಗಿದೆ.

ಆರೋಪಿಗಳು ತಮ್ಮ ಚಟುವಟಿಕೆಗೆ ಬೇಕಾದ ಹಣ ಹೊಂದಿಸಲು ಬೆಂಗಳೂರು ಸುತ್ತಮುತ್ತಲ ಸ್ಥಳಗಳಲ್ಲಿ ಡಕಾಯತಿಯನ್ನೂ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT