21 ತಿಂಗಳ ಬಳಿಕ ಕಾರ್ಮಿಕರು ಬಂಧಮುಕ್ತ

7
ಮಧ್ಯಪ್ರದೇಶ, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ

21 ತಿಂಗಳ ಬಳಿಕ ಕಾರ್ಮಿಕರು ಬಂಧಮುಕ್ತ

Published:
Updated:

ಬೆಂಗಳೂರು: ಮಧ್ಯಪ್ರದೇಶ ಹಾಗೂ ಬೆಂಗಳೂರು ಪೊಲೀಸರು ‘ಗಂಗಾ ಹೈ–ಪವರ್‌ ಬೋರ್‌ವೆಲ್‌ ಓನರ್ಸ್‌’ ಕಂಪನಿಯ ಹೆಬ್ಬಾಳ ಘಟಕದ ಮೇಲೆ ದಾಳಿ ನಡೆಸಿ, ಒಂಬತ್ತು ಜೀತದಾಳುಗಳನ್ನು ರಕ್ಷಣೆ ಮಾಡಿದ್ದಾರೆ.

ಕಾರ್ಮಿಕರು 21 ತಿಂಗಳಿನಿಂದ ಇಲ್ಲಿ ಸಂಬಳವಿಲ್ಲದೆ ದುಡಿಯುತ್ತಿದ್ದರು. ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದ ಘಟಕದ ಮಾಲೀಕರಿಬ್ಬರು, ಯಾವುದೇ ಸುರಕ್ಷಿತ ಸಲಕರಣೆಗಳನ್ನು ನೀಡದೆ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದರು. ಇತ್ತೀಚೆಗೆ ಅವರಿಂದ ತಪ್ಪಿಸಿಕೊಂಡು ಬಂದಿದ್ದ ಒಬ್ಬ ಕಾರ್ಮಿಕ, ಮಧ್ಯಪ್ರದೇಶದ ‘ಜನ್‌ ಸಾಹಸ್’ ಸ್ವಯಂ ಸೇವಕ ಸಂಸ್ಥೆಯ ಸಹಾಯವಾಣಿಗೆ ಕರೆ ಮಾಡಿ ದುಃಖ ತೋಡಿಕೊಂಡಿದ್ದ.

ಆ ಮಾಹಿತಿ ಬೆನ್ನಲ್ಲೇ ಮಂಗಳವಾರ ಮಧ್ಯಪ್ರದೇಶ ಪೊಲೀಸರ ಜತೆ ನಗರಕ್ಕೆ ಬಂದ ‘ಜನ್‌ ಸಾಹಸ್’ ಸದಸ್ಯರು, ಅಮೃತಹಳ್ಳಿ ಪೊಲೀಸರಿಗೂ ವಿಷಯ ತಿಳಿಸಿ ಘಟಕದ ಮೇಲೆ ದಾಳಿ ನಡೆಸಿದರು. ಈ ವೇಳೆ ಮಾಲೀಕರನ್ನು ವಶಕ್ಕೆ ಪಡೆದು ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಛತ್ತೀಸಗಡ ರಾಜ್ಯಗಳ ಕಾರ್ಮಿಕರನ್ನು ರಕ್ಷಿಸಿದರು.

‘ಗೊಂಡ್ ಹಾಗೂ ಉರಾವ್ ಬುಡಕಟ್ಟು ಜನಾಂಗಕ್ಕೆ ಸೇರಿದ ನಾವು, ಹೊಟ್ಟೆ ಪಾಡಿಗಾಗಿ ಊರುಗಳಲ್ಲಿ ವ್ಯವಸಾಯ ಮಾಡಿಕೊಂಡಿದ್ದೆವು. ದಿನಕ್ಕೆ ₹100–₹ 150 ಕೂಲಿ ಸಿಗುತ್ತಿತ್ತು. ಆ ಸಂದರ್ಭದಲ್ಲಿ ಭೇಟಿಯಾದ ತಮಿಳುನಾಡಿನ ಏಜೆಂಟ್‌ ಒಬ್ಬ, ‘ನನ್ನ ಜೊತೆ ಬಂದರೆ ತಿಂಗಳಿಗೆ ₹ 10 ಸಾವಿರ ವೇತನ ಸಿಗುವ ಕೆಲಸ ಕೊಡಿಸುತ್ತೇನೆ’ ಎಂದಿದ್ದ. ಆತನ ಮಾತು ನಂಬಿ ಬೆಂಗಳೂರಿಗೆ ಬಂದು ಈ ಘಟಕ ಸೇರಿಕೊಂಡೆವು’ ಎಂದು ಕಾರ್ಮಿಕರು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

‘ಮಾಲೀಕರು ಊಟ–ವಸತಿಯ ವ್ಯವಸ್ಥೆ ಮಾಡಿಕೊಟ್ಟರಾದರೂ, ಸಂಬಳ ಮಾತ್ರ ನೀಡುತ್ತಿರಲಿಲ್ಲ. ನಾವು ಕೆಲಸ ಬಿಟ್ಟು ಹೋಗುವುದಕ್ಕೂ ಬಿಡಲಿಲ್ಲ. ‘ನಿನ್ನ ಜಾಗಕ್ಕೆ ಬೇರೆ ಯಾರನ್ನಾದರೂ ಕರೆದುಕೊಂಡು ಬಂದರೆ ಮಾತ್ರ ನಿನಗೆ ಮುಕ್ತಿ ಸಿಗುತ್ತದೆ’ ಎನ್ನುತ್ತಿದ್ದರು. ಇಲ್ಲಿಗೆ ಬಂದ ನಂತರ ಒಮ್ಮೆಯೂ ಊರಿಗೆ ಹೋಗಲು ಸಾಧ್ಯವಾಗಿಲ್ಲ. ಪತ್ನಿ–ಮಕ್ಕಳೆಲ್ಲ ಹೇಗಿದ್ದಾರೋ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !