ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತು ಉಲ್ಲಂಘಿಸಿದ ಬೌರಿಂಗ್‌ಗೆ ₹3.14 ಕೋಟಿ ದಂಡ

ಕಂದಾಯ ಸಚಿವ ಆರ್‌.ಅಶೋಕ್‌
Last Updated 23 ಅಕ್ಟೋಬರ್ 2019, 3:54 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಪ್ರಮುಖ ಕ್ಲಬ್‌ಗಳಲ್ಲಿ ಒಂದಾಗಿರುವ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಸರ್ಕಾರದ ಷರತ್ತು ಉಲ್ಲಂಘಿಸಿರುವುದರಿಂದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ 150x100 ಅಡಿ ಜಾಗವನ್ನು ಬಿಟ್ಟುಕೊಡುವುದರ ಜತೆಗೆ ₹3.14 ಕೋಟಿ ದಂಡವನ್ನೂ ಪಾವತಿಸಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಸರ್ಕಾರದ ಈ ಆರೋಪವನ್ನು ಬೌರಿಂಗ್ ಇನ್‌ಸ್ಟಿಟ್ಯೂಟ್‌ ಸ್ಪಷ್ಟವಾಗಿ ನಿರಾಕರಿಸಿದೆ.

‘ಕ್ಲಬ್‌ಗೆ ಭೂಮಿಯನ್ನು ನೀಡುವಾಗ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿತ್ತು. ಆ ಪ್ರಕಾರ, ಭೂಮಿಯನ್ನು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಹೇಳಲಾಗಿತ್ತು. ಆದರೆ, ಮೂಲ ಒಪ್ಪಂದವನ್ನು ಉಲ್ಲಂಘಿಸಿ150x100 ಅಡಿ ಜಾಗವನ್ನು ಪೆಟ್ರೋಲ್‌ ಬಂಕ್‌ಗೆ ನೀಡಲಾಗಿದೆ. ಈ ಮೂಲಕ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ’ ಎಂದು ಅಶೋಕ್‌ ಹೇಳಿದರು.

‘ಪೆಟ್ರೋಲ್‌ ಬಂಕ್‌ಗೆ ನೀಡಿರುವ ಜಾಗವನ್ನು ಕ್ಲಬ್‌ ಉಪಯೋಗಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಜಾಗವನ್ನು ಮರಳಿ ವಶಕ್ಕೆ ತೆಗೆದುಕೊಳ್ಳುವಂತೆಯೂ ಆದೇಶ ನೀಡಿದ್ದೇನೆ. ಇದನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು. ಪಾರ್ಕಿಂಗ್‌, ಬಸ್‌ ನಿಲ್ದಾಣ ಮುಂತಾದ ಸಾರ್ವಜನಿಕ ಬಳಕೆಗೆ ಉಪಯೋಗಿಸಲಾಗುವುದು. ಅಲ್ಲದೆ, ಕ್ಲಬ್‌ ₹3.14 ಕೋಟಿ ದಂಡವನ್ನೂ ಪಾವತಿಸಬೇಕಾಗಿದೆ.ಸಿಎಜಿ ವರದಿಯಲ್ಲೂ ಈ ಉಲ್ಲಂಘನೆ ಉಲ್ಲೇಖಿತವಾಗಿದೆ’ ಎಂದರು.

‘ಕ್ಲಬ್‌ 12 ಎಕರೆ ಜಾಗವನ್ನು ಹೊಂದಿದ್ದು, 1969 ರಷ್ಟು ಹಿಂದೆಯೇ ಸರ್ಕಾರ ನಮ್ಮ ಜಾಗದಲ್ಲಿ ಪೆಟ್ರೊಲ್‌ ಬಂಕ್‌ ಸ್ಥಾಪಿಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಅನುಮತಿ ನೀಡಿತ್ತು’ ಎಂದು ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಹೇಳಿದೆ.

‘60ರ ದಶಕದಲ್ಲಿ ದಂಡು ಪ್ರದೇಶದ ಜನರ ತೈಲ ಅಗತ್ಯ ಪೂರೈಸಲುಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಸೂಕ್ತ ಜಾಗ ಹುಡುಕುತ್ತಿತ್ತು. ಆಗ ಸರ್ಕಾರ150x100 ಅಡಿ ಜಾಗವನ್ನು ಮಂಜೂರು ಮಾಡಿತ್ತು. ಅಂದಿನ ಸರ್ಕಾರದ ಆದೇಶದ ಪ್ರಕಾರ ಐಒಸಿ ಪ್ರಾಮಾಣಿಕವಾಗಿ ತೆರಿಗೆ ಸಂದಾಯ ಮಾಡುತ್ತಲೇ ಬಂದಿದೆ. ಒಂದು ಪೈಸೆಯನ್ನೂ ಉಳಿಸಿಕೊಂಡಿಲ್ಲ’ ಎಂದು ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಗೌರವ ಕಾರ್ಯದರ್ಶಿ ಎಚ್‌.ಎಸ್‌.ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಸದಸ್ಯರೊಬ್ಬರು ಕ್ಲಬ್‌ ವಿರುದ್ಧ ಆರೋಪ ಮಾಡಿ, ಕ್ಲಬ್‌ ಅನಧಿಕೃತವಾಗಿ ವ್ಯಕ್ತಿಗಳಿಗೆ ಭೂಮಿಯನ್ನು ನೀಡಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯೊಂದನ್ನು ರಚಿಸಿ ತನಿಖೆ ಮಾಡಿಸಿದಾಗ, ಆರೋಪ ಸುಳ್ಳು ಎಂಬುದು ಸಾಬೀತಾಯಿತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT