ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈವ್‌ ಮ್ಯೂಸಿಕ್‌ ಪರ ಗೋಡೆ ಬರಹ

ಬಾರ್‌– ಪಬ್‌ಗಳಲ್ಲಿ ಅಬ್ಬರದ ಸಂಗೀತಕ್ಕೆ ಒತ್ತಾಯ: ಪ್ರಕರಣ ದಾಖಲು
Last Updated 30 ಅಕ್ಟೋಬರ್ 2019, 5:33 IST
ಅಕ್ಷರ ಗಾತ್ರ

ಬೆಂಗಳೂರು: ಪಬ್‌ ಹಾಗೂ ಬಾರ್‌ಗಳಲ್ಲಿ ‘ಲೈವ್‌ ಮ್ಯೂಸಿಕ್‌’ ಪುನರಾರಂಭಿಸುವಂತೆ ಭಾರಿ ಪ್ರಚಾರ ಆರಂಭವಾಗಿದೆ. ಈ ಸಂಬಂಧ ಗೋಡೆಗಳ ಮೇಲೆ ಬಣ್ಣದಲ್ಲಿ ಬರಹಗಳನ್ನು ಬರೆಯಲಾಗಿದೆ.

ಎಂ.ಜಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ, ಸೇಂಟ್‌ ಮಾರ್ಕ್ಸ್ ರಸ್ತೆ ಗೋಡೆಗಳ ಮೇಲೆ ‘ಸಂಗೀತ ಕಾರ್ಯಕ್ರಮ ಪುನರಾರಂಭಿಸಿ’, ಸಂಗೀತ ಕಾರ್ಯಕ್ರಮ ನಿಷೇಧ ಅವಿವೇಕದ ನಿರ್ಧಾರ’ ಎಂಬುದೂ ಸೇರಿದಂತೆ ಕೆಲವು ಅಶ್ಲೀಲ ಬರಹಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ನಗರದ ಪೊಲೀಸರು ಇತ್ತೀಚೆಗೆ ಕೆಲವು ಬಾರ್‌ ಹಾಗೂ ಪಬ್‌ಗಳ ಮೇಲೆ ದಾಳಿ ಮಾಡಿ, ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿ ಅಬ್ಬರದ ಸಂಗೀತ ನಡೆಸುತ್ತಿದ್ದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದರು. ಇದು ಒಂದು ರೀತಿ ಸಂಗೀತ ಪ್ರಿಯರು ಮತ್ತು ಪಾರ್ಟಿ ಮಾಡಲು ಹೋಗುವ ಜನರಿಗೆ ನಿರಾಸೆ ಉಂಟುಮಾಡಿದೆ.

ಈ ಬರಹಗಳು ದಾರಿ ಹೋಕರಿಗೆ ಅದರಲ್ಲೂ ಮಹಿಳೆಯರಿಗೆ ಮುಜುಗರ ಉಂಟುಮಾಡುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ಪೊಲೀಸರು ‘ಚೀತಾ’ದಲ್ಲಿ ಗಸ್ತು ತಿರುಗುವಾಗ ಈ ಬರಹಗಳು ಕಾಣಿಸಿಕೊಂಡಿವೆ. ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್‌ ಪಾರ್ಕ್‌ ಠಾಣೆಯ ಕಾನ್‌ಸ್ಟೇಬಲ್‌ ಮುರಳೀಧರ ಈ ಸಂಬಂಧ ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದಿದ್ದಾರೆ.

107 ಪರವಾನಗಿ ರದ್ದು:'ಸಾರ್ವಜನಿಕ ಸ್ಥಳಗಳಲ್ಲಿ ಮನರಂಜನೆ ನಿಯಂತ್ರಣ ಮತ್ತು ಪರವಾನಗಿ (ಬೆಂಗಳೂರು ನಗರ)' ನಿಯಮ ಉಲ್ಲಂಘನೆ ಆರೋಪದ ಮೇಲೆ ನಗರದ 107 ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳ ಪರವಾನಗಿ ರದ್ದುಪಡಿಸಲಾಗಿದೆ. ಇದರಲ್ಲಿ ಬಹುತೇಕ ಪಬ್‌ ಮತ್ತು ಬಾರ್‌ಗಳು ಎಂ.ಜಿ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗಳಲ್ಲಿವೆ. ಪರವಾನಗಿ ನವೀಕರಣಕ್ಕೆ ಬಂದಿದ್ದ 107 ಅರ್ಜಿಗಳನ್ನು ತಿರಸ್ಕರಿಸಿ, ಅವುಗಳಿಗೆ ನೀಡಿದ್ದ ಪರವಾನಗಿಯನ್ನೂ ರದ್ದು ಮಾಡಲಾಗಿದೆ’.

‘ಸಾರ್ವಜನಿಕ ಸ್ಥಳಗಳಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲು ಪೊಲೀಸರ ಪರವಾನಗಿ ಪಡೆಯುವುದು ಕಡ್ಡಾಯ. ಪರವಾನಗಿ ಪಡೆಯದೇ ಹಲವು ಬಾರ್ ಹಾಗೂ ಪಬ್‌ಗಳಲ್ಲಿ ಅಬ್ಬರದ ಸಂಗೀತ, ಲೈವ್ ಬ್ಯಾಂಡ್, ಡ್ಯಾನ್ಸ್... ಹೀಗೆ ಹಲವು ಕಾರ್ಯಕ್ರಮ ಆಯೋಜಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

‘ಲೈವ್‌ ಸಂಗೀತ ರದ್ದಾದ ಬಳಿಕ ಬಾರ್‌ ಮತ್ತು ಪಬ್‌ಗಳಿಗೆ ಬರುವ ಗಿರಾಕಿಗಳ ಸಂಖ್ಯೆ ಇಳಿಮುಖವಾಗಿದೆ. ವಾರಾಂತ್ಯದಲ್ಲಿ ನಮಗೆ ಒಂದು ಲಕ್ಷ ರೂಪಾಯಿಗೂ ಅಧಿಕ ವ್ಯಾಪಾರ ಆಗುತ್ತಿತ್ತು. ಈಗ ಅದು 30ರಿಂದ 40 ಸಾವಿರಕ್ಕೆ ಇಳಿದಿದೆ. ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಖರ್ಚುವೆಚ್ಚ ಸರಿದೂಗಿಸಲು ಆಗುತ್ತಿಲ್ಲ. ಹೀಗಾಗಿ, ನಮ್ಮ ಪಬ್‌ ಅನ್ನು ಮಾರಾಟಕ್ಕೆ ಇಟ್ಟಿದ್ದೇವೆ’ ಎಂದು ಮಾಲೀಕರೊಬ್ಬರು ವಿವರಿಸಿದರು.

‘ಕನಿಷ್ಠ ಪಕ್ಷ ರೆಕಾರ್ಡ್‌ ಮಾಡಿದ ಸಂಗೀತವನ್ನಾದರೂ ಹಾಕಲು ಅನುಮತಿ ನೀಡಿದರೆ ವ್ಯಾಪಾರ ಚೇತರಿಸಿಕೊಳ್ಳಬಹುದು’ ಎಂದರು.

ಆದೇಶ ಎತ್ತಿ ಹಿಡಿದಿದ್ದ ಕೋರ್ಟ್

‘2005ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದನ್ವಯ ನಗರ ಪೊಲೀಸ್ ಕಮಿಷನರ್,‘ಸಾರ್ವಜನಿಕ ಸ್ಥಳಗಳಲ್ಲಿ ಮನರಂಜನೆ ನಿಯಂತ್ರಣ ಮತ್ತು ಪರವಾನಗಿ (ಬೆಂಗಳೂರು ನಗರ)' ನಿಯಮ ರೂಪಿಸಿದ್ದರು. ಅದನ್ನು ಪ್ರಶ್ನಿಸಿ ಬಾರ್‌ ಆ್ಯಂಡ್ ರೆಸ್ಟೋರೆಂಟ್ ಹಾಗೂ ಪಬ್‌ ಮಾಲೀಕರು ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಕಮಿಷನರ್ ಆದೇಶವನ್ನು ಎತ್ತಿ ಹಿಡಿದಿತ್ತು.

ಆದೇಶದ ಪ್ರಕಾರ, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜಿಸಲು ಅಗ್ನಿಶಾಮಕ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳಿಂದ ಪರವಾನಗಿ ಮತ್ತು ನಿರಾಪೇಕ್ಷಣ ಪತ್ರ ಪಡೆಯಬೇಕು.

ಆನಂತರ, ಪೊಲೀಸ್‌ ಇಲಾಖೆಯಿಂದಲೂ ಪರವಾನಗಿ ಪಡೆಯುವುದು ಕಡ್ಡಾಯ. ಇವುಗಳನ್ನು ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT